ಬೆಂಗಳೂರು: ‘2011ರ ಸಾಲಿನ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಆಯ್ಕೆಯಲ್ಲಿ ಭಾರಿ ಅಕ್ರಮ ನಡೆದಿರುವುದು ವೇದ್ಯವಾಗಿದೆ’ ಎಂದು ಶುಕ್ರವಾರ ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಎಲ್ಲ 362 ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ರದ್ದುಪಡಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರ ಮತ್ತು ಕೆಪಿಎಸ್‌ಸಿಗೆ ಮುಖಭಂಗವಾದಂತಾಗಿದೆ.
ಅಂತಿಮ ಆಯ್ಕೆ ಪಟ್ಟಿಯಿಂದ ವಂಚಿತರಾಗಿದ್ದ ಆರ್.ರೇಣುಕಾಂಬಿಕೆ ಸೇರಿದಂತೆ 13 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೇಲಿನ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದೆ. 2014ರ ಮಾರ್ಚ್ 21ರಂದು ಕೆಪಿಎಸ್‌ಸಿ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿಯನ್ನು ಕಾನೂನು ಬಾಹಿರ ಎಂದು ಘೋಷಿಸಿದೆ.
ಈ ತೀರ್ಪಿನಿಂದಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶದ ಮೇರೆಗೆ ವಿವಿಧ ಇಲಾಖೆಗಳಲ್ಲಿ ಸುಮಾರು 70 ಅಭ್ಯರ್ಥಿಗಳಿಗೆ
ಹುದ್ದೆ ತೋರಿಸಿ ಸರ್ಕಾರ ಹೊರಡಿಸಿದ್ದ ನೇಮಕಾತಿ ಆದೇಶವೂ ಇದೇ ವೇಳೆ ರದ್ದುಗೊಂಡಂತಾಗಿದೆ. ‘ಆಯ್ಕೆ ಪ್ರಕ್ರಿಯೆ ಸೇವಾ ನಿಯಮದ ವ್ಯಾಪ್ತಿಗೆ ಒಳಪಡುವುದರಿಂದ ಈ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಬಾರದು’ ಎಂಬ ಪ್ರತಿವಾದಿಗಳ ಕೋರಿಕೆಯನ್ನು ನ್ಯಾಯಪೀಠ ತಳ್ಳಿ ಹಾಕಿದೆ.
ಆದೇಶ ರದ್ದು: ‘2011ರ ಆಯ್ಕೆ ಪಟ್ಟಿ ರದ್ದುಗೊಳಿಸಿ ಸರ್ಕಾರ 2014ರ ಆಗಸ್ಟ್ 14ರಂದು ಕೈಗೊಂಡಿದ್ದ ನಿರ್ಧಾರ ಕಾನೂನು ಬಾಹಿರವಾಗಿದೆ. ಎಲ್ಲ 362 ಅಭ್ಯರ್ಥಿಗಳಿಗೆ ಈ ಆದೇಶ ಕೈಸೇರಿದ ಎರಡು ತಿಂಗಳ ಒಳಗಾಗಿ ನೇಮಕಾತಿ ಆದೇಶ ನೀಡಬೇಕು’ ಎಂದು ಕೆಎಟಿ ರಾಜ್ಯ ಸರ್ಕಾರಕ್ಕೆ 2016ರ ಅಕ್ಟೋಬರ್‌ನಲ್ಲಿ ನಿರ್ದೇಶಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ: ‘ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು’ ಎಂದು ತಿಳಿಸಿದ ಆಯ್ಕೆಯಾದ 230 ಅಭ್ಯರ್ಥಿಗಳ ಪರ ವಕೀಲ ಬಿ.ಎಲ್.ಆಚಾರ್ಯ, ‘ನ್ಯಾಯಪೀಠ ಸಿಐಡಿ ವರದಿ ಒಪ್ಪಿಕೊಂಡಿರುವುದು ತಪ್ಪು. ಸಿಐಡಿ ನೀಡಿರುವುದು ಮಧ್ಯಂತರ ವರದಿ ಅಷ್ಟೇ. ಎಲ್ಲ 362 ಅಭ್ಯರ್ಥಿಗಳೂ ಕಳಂಕಿತರಲ್ಲ ಎಂಬುದನ್ನು ಮನಗಾಣಬೇಕಿತ್ತು’ ಎಂದು ಪ್ರತಿಕ್ರಿಯಿಸಿದರು.