ಶಿರಸಿ: ಗ್ರಾಮೀಣ ಪ್ರತಿಭೆಗಳಿಗೆ ಸ್ಥಳಿಯವಾಗಿ ಪ್ರೋತ್ಸಾಹ ದೊರೆಯದ ಕಾರಣ ಯುವ ಪ್ರತಿಭೆಗಳು ನಗರ ಪ್ರದೇಶದತ್ತ ಹೆಚ್ಚು ವಾಲುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳು ನುಡಿದರು.
ಗುರುವಾರ ತಾಲೂಕಿನ ಕಡಬಾಳದ ಶಾಂತೇಶ್ವರ ಸೀಮಾ ದೇವಸ್ಥಾನದಲ್ಲಿ ಶಾಂತಪುರ ಸೀಮಾ ಶಿಷ್ಯವೃಂದದ ವತಿಯಿಂದ ಹಮ್ಮಿಕೊಳ್ಳಲಾದ ಸೀಮಾ ಹಬ್ಬದಲ್ಲಿ ಆಶೀವರ್ಚನ ನೀಡಿದ ಅವರು, ಸೀಮಾ ವತಿಯಿಂದ ಗ್ರಾಮದ ಪ್ರಮುಖ ದೇಗುಲಗಳಲ್ಲಿ ಹಮ್ಮಿಕೊಳ್ಳಲಾಗುವ ಸೀಮೋತ್ಸವದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುವದರೊಂದಿಗೆ ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಸ್ಥಳಿಯ ಜಾನಪದ ಕಲೆಗಳಿಗೆ ಪ್ರೋತ್ಸಾಹ ದೊರೆಯದ ಕಾರಣ ಅದೆಷ್ಟೊ ಕಲೆಗಳು ನಶಿಸಿಹೋಗಿದೆ. ಆ ನಿಟ್ಟಿನಲ್ಲಿ ಹಿರಿಯರಿಂದ ಪಾರಂಪರಿಕವಾಗಿ ನಡೆದುಕೊಂಡ ಬಂದಂತಹ ಕಲೆ, ಸಂಪ್ರದಾಯಗನ್ನು ಬರಿದಾಗಲು ಬಿಡಬಾರದು. ಜಾನಪದ ಕಲೆಗಳನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸುವ ಮೂಲಕ ಕಲಾವಿದರು ಬೆಳಯಲು ಸ್ಥಳಾವಕಾಶ ಮಾಡಿಕೊಡಬೇಕು ಎಂದರು.
ದಿನಕಳೆದಂತೆ ವಿವಾಹ ವಿಚ್ಛೇದನಗಳು ಹೆಚ್ಚಾಗಿತ್ತಿದೆ. ವಿಭಕ್ತ ಕುಟುಂಬಗಳತ್ತ ಜನಸಮಾನ್ಯರು ಹೆಚ್ಚು ಆಕರ್ಷಿತರಾಗುತ್ತಿರುವುದು ಅವಿವೇಕದ ಸಂಗತಿಯಾಗಿದೆ. ಇವುಗಳಿಗೆ ತಡೆಯೊಡ್ಡಿ ಸಂಸ್ಕಾರಯುತ ಜೀವನ ನಿರ್ವಹಣೆಗೆ ಯಜ್ಞ ಯಾಗಾದಿಗಳು ಸಹಾಯ ಮಾಡುತ್ತದೆ. ಯಾಗದಲ್ಲಿ ಬಹಿರ್ಯಾಗ, ಮಧ್ಯಯಾಗ ಹಾಗೂ ಅಂತರ್ಯಾಗಗಳೆಂಬ ಮೂರು ವಿಧಗಳಿವೆ. ಹೊರಗಿನ ಕರ್ಣಗಳನ್ನು ಉಪಯೋಗಿಸಿ ಮಾಡುವ ಯಾಗಗಳನ್ನು ಬಹಿರ್ಯಾಗ ಎಂದು ಕರೆದರೆ ಅಂತರಾಳದಲ್ಲಿ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ನಡೆಸುವ ಧ್ಯಾನವನ್ನು ಅಂತರ್ಯಾಗಳೆಂದು ಕರೆಯಬಹುದು. ಯಜ್ಞ ಯಾಗಾದಿಗಳನ್ನು ಶುಭ್ರತೆ, ನಿಯಮಿತತನ ಹಾಗೂ ಎಚ್ಚರಿಕೆಯಿಂದ ನಿರ್ವಹಿಸಬೇಕು. ಪ್ರತಿ ಮನೆಮನೆಗಳಲ್ಲಿಯೂ ರುದ್ರಾದಿ ಮಂತ್ರಗಳ ಉಚ್ಛರಣೆಯಾದಾಗ ಮನೆ ಮತ್ತು ಮನದಲ್ಲಿ ಶಾಂತಿ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶಾಂತಾರಾಮ ಹೆಗಡೆ ಶೀಗೆಹಳ್ಳಿ, ರಾಮಕೃಷ್ಣ ಹೆಗಡೆ ಕಡಬಾಳ ಹಾಗೂ ಭೈರವೇಶ್ವರ ಭಟ್ಟ ಮಣದೂರು ದಂಪತಿಗಳನ್ನು ಸೀಮಾಹಬ್ಬದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಸೀಮಾಧ್ಯಕ್ಷ ವಿಶ್ವನಾಥ ಹೆಗಡೆ ಶಿಗೆಹಳ್ಳಿ, ಶ್ರೀಕಾಂತ ಹೆಗಡೆ ಕಡಬಾಳ ಸೇರಿದಂತೆ ಐನೂರಕ್ಕೂ ಹೆಚ್ಚು ಸುತ್ತಮುತ್ತಲ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.
ಕಡಬಾಳದ ಶಾಂತೇಶ್ವರ ದೇವರ ವಾರ್ಷಿಕ ದೇವತಾರಾಧನೆ ಹಾಗೂ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಭಿಕ್ಷ ಪಾದಪೂಜೆ ಕಾರ್ಯಕ್ರಮಗಳು ನಡೆದವು. ಜೊತೆಯಲ್ಲಿ ನುರಿತ ವೃತ್ವಿಜರ ನೇತೃತ್ವದಲ್ಲಿ ರುದ್ರಹವನ ಯಾಗಾದಿಗಳು ನೆರವೇರಲ್ಪಟ್ಟಿತು.

RELATED ARTICLES  ಘೋಷಣೆಯಾಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ಉತ್ತರ ಕನ್ನಡಕ್ಕೆ ಅನಂತ ಕುಮಾರ್ ಹೆಗಡೆ.