ಕುಮಟಾ : ಹೊನ್ನಾವರದ ಕರ್ಕಿ ನಾಕಾ ಬಳಿ ನಡೆದ ಗೋ ಕಳ್ಳಸಾಗಣೆ ಪ್ರಕರಣ ರಾಜಕೀಯ ಲಾಭಕ್ಕಾಗಿ ಬಳಕೆಯಾಗುತ್ತಿದೆ ಎಂಬ ಮಾತು ಈಗ ಕೇಳಿಬರತೊಡಗಿದೆ.

ಚುನಾವಣೆ ಸಂದರ್ಭದಲ್ಲಿ ನಡೆದ ಈ ಘಟನೆಗೆ ಈಗ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಹೊಸ ತಿರುವು ತೆಗೆದುಕೊಂಡತ್ತು. ಪೊಲೀಸರು ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡರಾದ ಸೂರಜ್ ನಾಯ್ಕ ಸೋನಿ ವಿರುದ್ಧ ಹಾಗೂ ಇನ್ನಿತರ ಹಿಂದೂ ಕಾರ್ಯಕರ್ತರ ವಿರುದ್ಧ ಪೊಲೀಸರು 307 ಕೇಸ್ ದಾಖಲಿಸಿದ್ದಾರೆ, ಎಂದು ವರದಿಯಾಗಿತ್ತು. ವಿನಾಕಾರಣ ತಮ್ಮ ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ, ಎಂದು ಸೋನಿ ಬೆಂಬಲಿಗರು ಆರೋಪಿಸಿದ್ದರು. ಅದಷ್ಟೇ ಅಲ್ಲದೇ ಬಿಜೆಪಿ ಘಟಕದಿಂದ‌ ಸುದ್ದಿ ಗೋಷ್ಟಿಯನ್ನೂ ನಡೆಸಲಾಗಿತ್ತು.

ಆದರೆ ಬಿಜೆಪಿಗರು ಹಾಗೂ ಕೆಲ ರಾಜಕೀಯ ಮುಖಂಡರು ಶಾಸಕಿ ಶಾರದಾ ಶೆಟ್ಟಿಯವರ ಹೆಸರನ್ನು ವಿನಾಕಾರಣ ಈ ವಿಷಯದಲ್ಲಿ ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರ ತೇಜೋವಧೆಗೆ ಪ್ರಯತ್ನ ನಡೆಯುತ್ತಿದೆ. ಶಾಸಕರ ಅಭಿವೃದ್ಧಿಯ ಕಾಮಗಾರಿ ಹಾಗೂ ವರ್ಚಸ್ಸು ಸಹಿಸದ ಜನರು ಇಂತಹ ಕಾರ್ಯದಲ್ಲಿ ತೊಡಗಿ ಶಾಸಕರ ತೇಜೋವಧೆಗೆ ಪ್ರಯತ್ನ ನಡೆಸಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್ ನಾಯ್ಕ ಬಿಜೆಪಿಗರ ವಿರುದ್ಧ ಹರಿ ಹಾಯ್ದರು.

RELATED ARTICLES  ಮೂರು ವರ್ಷಗಳ ನಂತರ ಕೋಡಿ ಬೀಳುವ ಹಂತಕ್ಕೆ ಬಂದಿದೆ ಧರ್ಮಾ ಜಲಾಶಯ.

ಇದೇ ಸಂದರ್ಭದಲ್ಲಿ‌ ಮಾತನಾಡಿದ ತಾರಾ ಗೌಡ ಶಾಸಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ ಸರಕಾರದ ವಿರುದ್ಧ ಸುಖಾಸುಮ್ಮನೆ ಆರೋಪಗಳನ್ನು ಮಾಡಿ ಕೀಳು ಮಟ್ಟದ ರಾಜಕಾರಣ ನಡೆಸಲಾಗುತ್ತಿದೆ. ಶಾಸಕಿ ಶಾರದಾ ಶೆಟ್ಟಿಯವರಮೇಲೆ ಆರೋಪ ಮಾಡುವವರು ಸೂಕ್ತ ದಾಖಲೆಗಳನ್ನು ನೀಡಬೇಕು ಇಲ್ಲ ಸಲ್ಲದ ಆರೋಪಗಳನ್ನು ಮಾಡಬಾರದು ಎಂದರು. ಇದೇ ರೀತಿ ಮಂದುವರಿದರೆ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದರು.

ಪುರಸಭಾ ಅಧ್ಯಕ್ಷ ಮಧುಸೂಧನ್ ಶೇಟ್ ಮಾತನಾಡಿ ಶಾಸಕರ ಪ್ರಭಾವ ಕುಗ್ಗಿಸಿ ರಾಜಕೀಯವಾಗಿ ಅವರನ್ನು ಹಣಿಯುವ ತಂತ್ರ ರೂಪಿಸಲಾಗಿದೆ. ಶಾಸಕರು ಅಭಿವೃದ್ಧಿಯ ಬಗ್ಗೆ ಕೈಗೊಂಡ ಕಾರ್ಯಗಳ ಬಗ್ಗೆ ಮತ್ಸರ ಭಾವನೆ ಹೊಂದಿ ಇಂತಹ ಕಾರ್ಯಗಳನ್ನು ನಡೆಸಿರುವಂತೆ‌ ಭಾಸವಾಗುತ್ತಿದ್ದು ಇದಕ್ಕೆಲ್ಲ ಜನತೆ ಸರಿಯಾಗಿ ಉತ್ತರಿಸಲಿದೆ. ಶಾಸಕರ ತೇಜೋವಧೆಗೆ ಪ್ರಯತ್ನ ನಡೆಸಿದರೆ ನಾವು ಸುಮ್ಮನಿರಲಾರೆವು ಎಂದು ಎಚ್ಚರಿಕೆ ನೀಡಿದರು.

RELATED ARTICLES  ಈಜಲು ಹೋಗಿ ಮೃತನಾದ ವಿದ್ಯಾರ್ಥಿಯ ಮನೆಗೆ ಶಾಸಕ ಮಾಂಕಳ ವೈದ್ಯ ಭೇಟಿ.

ಒಂದೆಡೆ ಹಿಂದು ಕಾರ್ಯಕರ್ತರ ಮೇಲೆ ದಬ್ಬಾಳಿಕೆ‌ ಎಂಬ ಮಾತು ಕೇಳಿ‌ಬಂದರೆ ಇನ್ನೊಂದೆಡೆ ಶಾಸಕರ ಬೆಂಬಲಿಗರು ಶಾಸಕರನ್ನು ಹಣಿಯುವ ತಂತ್ರ ಎಂದು ಕೆಂಡಾಮಂಡಲರಾಗಿದ್ದಾರೆ. ಅದಲ್ಲದೇ ಶಾಸಕಿ ಶಾರದಾ ಶೆಟ್ಟಿಯವರಿಗೆ ಹಾಗೂ ಈ ಘಟನೆಗೆ ಯಾವುದೇ ಸಂಬಂಧವಿಲ್ಲ ,ಶಾಸಕರ ಕುಮ್ಮಖಿನಿಂದ ಈ ಘಟನೆ ನಡೆದಿದೆ ಎಂಬ ವದಂತಿಯನ್ನು ಕಾಂಗ್ರೆಸ್ ಮುಖಂಡರು ಖಂಡಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ಜಗನ್ನಾಥ ನಾಯ್ಕ, ರಾಘವೇಂದ್ರ ಪಟಗಾರ,ಗಣಪತಿ ‌ಶೆಟ್ಟಿ, ಸಚಿನ್ ನಾಯ್ಕ, ಕೃಷ್ಣಾನಂದ ವರ್ಣೇಕರ್ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.