ಕಾರವಾರ: ದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ನಿಗದಿಪಡಿಸಿ ವಿಧೇಯಕ ಜಾರಿಗೆ ತರಬೇಕೆಂದು ಕಾರವಾರದ ವಿದ್ಯಾರ್ಥಿಯೊಬ್ಬ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಮೊಹಮ್ಮದ್ ಸಕೀಬ್ ಪ್ರಧಾನಿಯವರಿಗೆ ಪತ್ರ ಬರೆದು ಕಳೆದ ಶುಕ್ರವಾರ ಮೋದಿಯವರ ವಿಳಾಸಕ್ಕೆ ಪೋಸ್ಟ್ ಮಾಡಿದ್ದಾರೆ.
ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಮೋದಿಯವರಿಗೆ ಬರೆದ ಪತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಿಲ್ಲವೇಕೆ? ಈ ದೇಶದ ವಿದ್ಯಾವಂತ ಯುವಕನಾಗಿ ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಲು ನಾನು ಬಯಸುತ್ತಿದ್ದು ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ನಿಗದಿಪಡಿಸಬೇಕು ಎಂದು ಅವರು ಹೇಳುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಮೊಹಮ್ಮದ್ ಸಕೀಬ್, ಒಂದು ತಿಂಗಳ ಹಿಂದೆ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಒಬ್ಬ ಶಾಸಕ ಎಂಎಲ್ಎಯ ಪೂರ್ಣ ವಿವರ ನೀಡಲು ತಡಕಾಡುತ್ತಿದ್ದುದನ್ನು ಗಮನಿಸಿದೆ. ಇಂತಹ ಸಂದರ್ಭದಲ್ಲಿ ನನಗೇ ಒಂದು ಪ್ರಶ್ನೆ ಉದ್ಭವಿಸಿತು, ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಏಕಿಲ್ಲವೆಂದು. 2018ನೇ ಇಸವಿಯ ಹೊಸ ವರ್ಷದ ಮನ್ ಕಿ ಬಾತ್ ಕಾರ್ಯಕ್ರಮವನ್ನು ಕೂಡ ತನ್ನ ಪತ್ರದಲ್ಲಿ ನಮೂದಿಸಿರುವ ಮೊಹಮ್ಮದ್ ಸಕೀಬ್, ಧನಾತ್ಮಕ ಭಾರತದಿಂದ ಸುಧಾರಣಾ ಭಾರತವಾಗಿ ರೂಪಾಂತರಗೊಳ್ಳುವ ಸಮಯವಿದು. ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಸೇರಿದಂತೆ ಹಲವು ಬದಲಾವಣೆಗಳಾಗಬೇಕಿದೆ ಎಂದು ಅವರು ವಿವರಿಸಿದ್ದಾರೆ.
ಮುಂದಿನ ತಿಂಗಳು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ನಿಗದಿಪಡಿಸುವುದು ಸರಿಯಾದ ಸಂದರ್ಭವಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

RELATED ARTICLES  ಶಿಕ್ಷಕ ಆರ್.ಎಸ್ ನಾಯ್ಕ ಇನ್ನಿಲ್ಲ.