ರಕ್ಷಣೆ, ಪರಮಾಣು ಶಕ್ತಿ, ರಹಸ್ಯ ದಾಖಲೆಗಳ ಸಂರಕ್ಷಣೆ ಒಪ್ಪಂದ
ಹೊಸದಿಲ್ಲಿ: ಭಾರತ ಮತ್ತು ಫ್ರಾನ್ಸ್ ನಡುವಿನ ವ್ಯೂಹಾತ್ಮಕ ಸಂಬಂಧದಲ್ಲಿ ಮಹತ್ವದ ಮೈಲುಗಲ್ಲು ಎಂಬಂತೆ ಶನಿವಾರ ಉಭಯ ರಾಷ್ಟ್ರಗಳು ರಕ್ಷಣೆ, ಭದ್ರತೆ, ಪರಮಾಣು ಶಕ್ತಿ ಸೇರಿದಂತೆ 14 ಒಪ್ಪಂದಗಳಿಗೆ ಸಹಿ ಹಾಕಿವೆ.
4 ದಿನಗಳ ಭಾರತ ಪ್ರವಾಸ ಆರಂಭಿಸಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ದ್ವಿಪಕ್ಷೀಯ ಮಾತುಕತೆಯ ಬಳಿಕ, ಅವರ ಸಮ್ಮುಖದಲ್ಲೇ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಎರಡೂ ದೇಶಗಳ ಸಶಸ್ತ್ರ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ ಸಹಕಾರ, ರಹಸ್ಯ ಅಥವಾ ಸಂರಕ್ಷಿತ ದಾಖಲೆಗಳಿಗೆ ಭದ್ರತೆ ನೀಡುವ ಒಪ್ಪಂದವೂ ಇವುಗಳಲ್ಲಿ ಸೇರಿದೆ. ಫ್ರಾನ್ಸ್‌ನಿಂದ ತರಿಸಲಾಗುತ್ತಿರುವ ರಫೇಲ್ ಯುದ್ಧವಿಮಾನಗಳ ಕುರಿತು ವಿವಾದ ಎದ್ದಿರುವಂತೆಯೇ ಇಂತಹುದೊಂದು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.
ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ರಕ್ಷಣಾ ಸಹಕಾರವು ಅತ್ಯಂತ ಬಲಿಷ್ಠವಾಗಿದ್ದು, ಹೆಚ್ಚು ವಿಶ್ವಾಸಾರ್ಹ ರಕ್ಷಣಾ ಪಾಲುದಾರ ರಾಷ್ಟ್ರಗಳ ಪೈಕಿ ಫ್ರಾನ್ಸ್ ಕೂಡ ಒಂದು ಎಂದು ಹೇಳಿದ್ದಾರೆ. ಸಶಸ್ತ್ರಪಡೆಗಳ ನಡುವಿನ ಸಹಕಾರವು ರಕ್ಷಣಾ ಸಂಬಂಧದಲ್ಲಿ ಸುವರ್ಣ ಹೆಜ್ಜೆ ಎಂದೂ ಅವರು ಬಣ್ಣಿಸಿದ್ದಾರೆ. ಇದೇ ವೇಳೆ ಮಾತನಾಡಿದ ಮ್ಯಾಕ್ರನ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಎರಡೂ ದೇಶಗಳು ಬದ್ಧವಾಗಿರಲಿದೆ ಎಂದಿದ್ದಾರೆ. ಜತೆಗೆ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲೂ ಉಭಯ ದೇಶಗಳು ಜತೆಯಾಗಿರಲಿವೆ ಎಂದಿದ್ದಾರೆ ಮ್ಯಾಕ್ರನ್.