ಶಿರಸಿ :ತಾತ್ಕಾಲಿಕ ಓಟಿನ ಹಾಗೂ ರಾಜಕೀಯ ಲಾಭಕ್ಕಾಗಿ ಸಮಾಜ ಮತ್ತು ದೇಶವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದು, ಒಡೆದಾಳುವ ನೀತಿಯೇ ಕಾಂಗ್ರೆಸ್ ಪಕ್ಷದ ಸಮಾಜವಾದ ಆಗಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.

ತಾಲೂಕಿನ ಗೋಳಿಯ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಬಿಜೆಪಿಯ ಶಿರಸಿ ಸಿದ್ದಾಪುರ ಕ್ಷೇತ್ರದ  ನವಕರ್ನಾಟಕ ನಿರ್ಮಾಣಕ್ಕೆ  ನವಶಕ್ತಿ ಸಮಾವೇಶದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜವನ್ನು ಒಡೆಯುವುದು ಸಮಾಜವಾದವಲ್ಲ. ಕಾಂಗ್ರೆಸ್ ನವರು ಹಾಗೂ ಸಿದ್ಧರಾಮಯ್ಯನವರು ತಮ್ಮದು ಸಮಾಜವಾದ ಎನ್ನುತ್ತಾರೆ. ಆದರೆ ಅವರದ್ದು ಒಂದು‌ ಕಣ್ಣಿಗೆ ಬೆಣ್ಣೆ ಹಾಗೂ ಒಂದು ಕಣ್ಣಿಗೆ ಸುಣ್ಣದ ಸಮಾಜವಾದ. ನಾವು ಅಧಿಕಾರದಲ್ಲಿದ್ದಾಗ ಯಾವ ಯೋಜನೆಯನ್ನು ಜಾತಿ ಆಧಾರದಲ್ಲಿ ಜಾರಿಗೆ ತಂದಿಲ್ಲ. ಈಗ ಇವರು ಶಾದಿ ಭಾಗ್ಯದಿಂದ ಸಣ್ಣ ಮಕ್ಕಳವರೆಗೂ ಜಾತಿ ಆಧಾರದಲ್ಲಿ ಒಡೆಯುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ.‌ ಲಿಂಗಾಯತ – ವೀರಶೈವ, ನಾಡ ಧ್ವಜ ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಸಮಾಜವನ್ನು ಒಡೆದಾಳುವುದು ಇವರ ಸಮಾಜವಾದವಾಗಿದೆ. ರಾಜಕೀಯ ಲಾಭಕ್ಕಾಗಿ, ಓಟಿಗಾಗಿ ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಜರಿದರು.
ಕಾಂಗ್ರೆಸ್ ಕುಟುಂಬ ಮಾಲೀಕತ್ವದ ಪಕ್ಷವಾಗಿದೆ. ಇಲ್ಲಿಯವರೆಗೆ ಅಲ್ಲಿ ನೆಹರೂ ಕುಟುಂಬದವರೆ ಮಾಲೀಕರಾಗಿದ್ದು, ಇನ್ನು ಮುಂದೆಯೂ ಅವರೇ ಆಗುತ್ತಾರೆ. ಅದರಂತೇ ದೇಶದಲ್ಲಿ ಬಿಎಸ್ಪಿ, ಬಿಜೆಡಿ, ಎಸ್ಪಿ ಸೇರಿದಂತೆ ಬಹುತೇಕ ಪ್ರಾದೇಶಿಕ ಪಕ್ಷಗಳು ಕುಟುಂಬ ರಾಜಕಾರಣದಲ್ಲಿದೆ. ಕರ್ನಾಟಕದಲ್ಲಿಯೂ ಜೆಡಿಎಸ್ ಕುಟುಂಬ ರಾಜಕಾರಣದ ಪಕ್ಷ ವಾಗಿದ್ದು, ಇಂದು ಮುಂದಿನ ನಾಯಕತ್ವ ಪಡೆಯಲು ನಿಖಿಲ್ ಹಾಗೂ ಪ್ರಜ್ವಲ್ ನಡುವೆ ಟವೆಲ್ ಹಾಸುವ ಕೆಲಸ ನಡೆದಿದೆ. ಆದರೆ‌ ನಮ್ಮ ಬಿಜೆಪಿ ಪಕ್ಷಕ್ಕೆ ಮಾಲೀಕರು ಎಂದರೆ ನಮಗಾಗಿ ದುಡಿದ, ಪೋಸ್ಟರ್ , ಬಾವುಟಗಳನ್ನು ಅಂಟಿಸಿದ ಕಾರ್ಯಕರ್ತರೇ ಮಾಲೀಕರು. ನಮ್ಮಲ್ಲಿ ನಾಯಕರಿದ್ದಾರೆ. ಅವರು ಬದಲಾಗುತ್ತಾರೆ. ಆದರೆ ಬಿಜೆಪಿ ಪಕ್ಷಕ್ಕೆ ಮಾಲೀಕರು ಎಂದರೆ ಅದು ಕಾರ್ಯಕರ್ತರು ಮಾತ್ರವೇ ಎಂದರು.
ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಜನ ಶಕ್ತಿಯ ಅವಶ್ಯಕತೆಯಿದೆ.‌ ಆದ್ದರಿಂದ ಮತಗಟ್ಟೆಯ ವ್ಯಾಪ್ತಿಯಲ್ಲಿ ಜನರನ್ನು ಸಂಘಟಿಸಿ  ಕೆಟ್ಟ ಸರ್ಕಾರವನ್ನು ಕಿತ್ತೊಗೆಯಲು
ನವಶಕ್ತಿ ಸಮಾವೇಶವನ್ನು ಮಾಡಲಾಗುತ್ತಿದೆ ಎಂದ ಅವರು, ೧೦ ಜನರಿಂದ ೧೨ ಕೋಟಿ ಸದಸ್ಯರನ್ನು ಹೊಂದಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿ ಬಿಜೆಪಿ ಹೊಮ್ಮಿದೆ. ಜನಮನ್ನಣೆ ಗಳಿಸಿ ಜನಪರವಾಗಿ ಕೆಲಸ ಮಾಡುವ ಪಕ್ಷ ಬಿಜೆಪಿಯಾಗಿದೆ. ಆದ್ದರಿಂದ ಈ ಬಾರಿ ಕರ್ನಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದರು.
ಈ ಮೊದಲು ಪ್ರಾಸ್ತಾವಿಕ ಮಾತುಗಳನ್ನಾಡಿದ  ವಿಶ್ವೇಶ್ವರ ಹೆಗಡೆ ಕಾಗೇರಿ ” ಕಾಂಗ್ರೆಸ್ ನವರು ನಮ್ಮ ನಡೆಗಳನ್ನು ಅನುಸರಿಸುತ್ತಿದ್ದಾರೆ. ನಾವು  ಮಾಡಿದ ಕಾರ್ಯಕ್ರಮಗಳನ್ನು ಅವರೂ ನಡೆಸುತ್ತಿದ್ದಾರೆ. ಅದರಂತೇ ಇಂದು ಅವರಿಗೆ ತಾವು ಹಿಂದೂ ಹಾಗೂ ಹಿಂದುತ್ವದ ಮೇಲೆ ನಂಬಿಕೆ ಬಂದಿದೆ. ಆದರೆ ಅವರದ್ದು ರಾಜಕೀಯ ಸ್ವಾರ್ಥದ ಹಿಂದುತ್ವ. ನಾವೂ ನಮ್ಮ ವಿಚಾರ ಸಿದ್ಧಾಂತಗಳಲ್ಲಿಯೂ ಹಿಂದುತ್ವ ಎನ್ನುತ್ತೇವೆ.‌ ಆದರೆ ಕಾಂಗ್ರೆಸ್ ನವರು ಗೋಹತ್ಯೆ ನಿಷೇಧ ಹಾಗೂ ರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡುವುದಿಲ್ಲ ? ಯಾಕೆಂದರೆ ಅವರದ್ದು ರಾಜಕೀಯದ ಹಿಂದುತ್ವ.‌ಇಂತಹ ರಾಜಕಾರಣಕ್ಕೆ ನಾವು ಇತಿಶ್ರೀ ಹಾಡಬೇಕು ಎಂದ ಅವರು, ಉಳಿದೆಲ್ಲಾ ಪಕ್ಷಗಳಿಗಿಂತ ನಮ್ಮ ಪಕ್ಷ ವಿಭಿನ್ನ. ನಾವು ಎಲ್ಲಾ ಸಂದರ್ಭದಲ್ಲಿಯೂ ಕಾರ್ಯಕರ್ತರ, ಜನರ ಮನೆಗೆ ಹೋಗುತ್ತೇವೆ. ಆದರೆ ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮತದಾರರ ಮನೆಗೆ ಹೋಗುತ್ತಾರೆ ” ಎಂದು ಟೀಕಿಸಿದರು. ದೇಶಕ್ಕೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು‌. ಜಿಲ್ಲೆಯಲ್ಲಿ ೬ ಕ್ಕೆ ೬ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬೇಕು. ಶಿರಸಿ ಕ್ಷೇತ್ರದಲ್ಲಿ ೫೦ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಗೆದ್ದು ಬರಬೇಕು ಎಂದರು.
ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಶಕ್ತಿ ತುಂಬಲು ರೈತರ ಮನೆ ಮನೆಗೆ ಹೋಗಿ ಮುಷ್ಠಿ ಅಕ್ಕಿಯನ್ನು ಪಡೆದು ನಂತರ ಜಿಲ್ಲಾ, ರಾಜ್ಯ ಮಟ್ಟದಲ್ಲಿ ರೈತ ಸಮಾವೇಶವನ್ನು ಮಾಡಿ ಅವರಿಗೆ ಬಲ ತುಂಬುವ ಮುಷ್ಠಿ ಅಕ್ಕಿ ಯೋಜನೆಗೆ ಸಮಾವೇಶದಲ್ಲಿ ಚಾಲನೆ ‌ನೀಡಲಾಯಿತು.
ವಿವಿಧ ಪಕ್ಷಗಳಿಂದ ಹಾಗೂ ಬಿಜೆಪಿಯ ಸಿದ್ಧಾಂತವನ್ನು ಒಪ್ಪಿಕೊಂಡು ಸಮಾವೇಶದಲ್ಲಿ ಸುಮಾರು ೨೫ ಕ್ಕೂ‌ ಹೆಚ್ಚು ನಾಯಕರು ಬಿಜೆಪಿಯನ್ನು ಸೇರ್ಪಡೆಯಾದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಅವರನ್ನು ಒಕ್ಕಲಿಗ ಸಮುದಾಯ, ಬಿಜೆಪಿ ನಗರ ಮಂಡಳ ಸೇರಿದಂತೆ ವಿವಿಧ ಮಂಡಳಗಳ ವತಿಯಿಂದ ವೇದಿಕೆಯಲ್ಲಿ  ಸನ್ಮಾನಿಸಲಾಯಿತು.
ಕಾಂಗ್ರೆಸ್ ಸರ್ಕಾರ ಐಟಿ, ಬಿಟಿಯಲ್ಲಿ ನಂ.೧ ಎಂದು ಪ್ರಚಾರ ಪಡೆಯುತ್ತಿದೆ.‌ಆದರೆ ಅದರಲ್ಲಿ ಕಾಂಗ್ರೆಸ್ ಹಾಗೂ ಸಿದ್ಧರಾಮಯ್ಯನವರ ಪಾತ್ರ ಏನಿದೆ ? ಅದು ಖಾಸಗಿ‌‌ ಕ್ಷೇತ್ರದವರ ಹಾಗೂ ನಮ್ಮ ಯುವಕರ ಪರಿಶ್ರಮದಿಂದ ನಂ.‌೧ ಆಗಿದೆ ಎಂದ ಸಿ.ಟಿ.ರವಿ ಅವರು, ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಸಾಲದಲ್ಲಿ , ಭ್ರಷ್ಟಾಚಾರದಲ್ಲಿ, ರೈತರ ಆತ್ಮಹತ್ಯೆಯಲ್ಲಿ ಹಾಗೂ ಅತ್ಯಾಚಾರದಲ್ಲಿ ನಂ ೧ ಆಗಿದೆ.‌ರಾಜ್ಯ ಇಂದು ೨ ಲಕ್ಷ ೫೦ ಸಾವಿರ ಕೋಟಿ ರೂ. ಸಾಲದಿಂದ ಬಳಲುತ್ತಿದೆ. ಕಳೆದ ೫ ವರ್ಷದಲ್ಲಿ ೩೫೦೦ ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ಅತ್ಯಾಚಾರದಲ್ಲಿ ದೇಶದಲ್ಲಿ‌ ನಂ.೧ ನೇ‌ ಸ್ಥಾನದಲ್ಲಿ ಕರ್ನಾಟಕವಿದೆ. ಇದೆಲ್ಲವೂ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು. ಜಾತಿ ವಾದಿಯ ಮನಸ್ಥಿತಿ ಇರುವ ಸರ್ಕಾರದಲ್ಲಿ ಜಾತಿ ಸಂಘರ್ಷ ಆಗುತ್ತದೆ. ಯಾರದ್ದು ಹಿಂದುತ್ವದ ಮನಸ್ಥಿತಿಯೋ ಅಲ್ಲಿ ಜಾತಿ ಸಂಘರ್ಷ ಇರುವುದಿಲ್ಲ. ನಮ್ಮದು ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ ಮನಸ್ಥಿತಿ. ಕಾಂಗ್ರೆಸ್ಸಿನದು ಎಲ್ಲರನ್ನೂ ಒಡೆದಾಳುವ ನೀತಿಯಾಗಿದೆ ಎಂದರು.

RELATED ARTICLES  ಯಲ್ಲಾಪುರದಲ್ಲಿ ನಷ್ಟ ತಂದ ಸಿಡಿಲು.

  ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಜಿ.ನಾಯ್ಕ, ಆರ್.ವಿ.ಹೆಗಡೆ, ಎನ್.ವಿ.ಭಟ್ ಹಾಗೂ ಜಿ.ಕೆ.ಹೆಗಡೆ ಇದ್ದರು.‌