ಉತ್ತರಕನ್ನಡ ; ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮಾರ್ಚ್ 15 ಕ್ಕೆ ಯಲ್ಲಾಪುರ ಪಟ್ಟಣಕ್ಕೆ ಆಗಮಿಸಲಿದ್ದು, ಪಟ್ಟಣದ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕುಮಾರ ಪರ್ವ ಬೃಹತ್ ರ‌್ಯಾಲಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ತೆರಳಲಿದ್ದಾರೆ, ನಂತರ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ರ‌್ಯಾಲಿಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಎ.ರವೀಂದ್ರ ನಾಯ್ಕ ಹೇಳಿದರು.

ಕುಮಟಾಕ್ಕೆ 16 ರಂದು ಆಗಮಿಸುವ ಕುಮಾರ ಸ್ವಾಮಿ ಅವರನ್ನು ಭರಮಾಡಿಕೊಳ್ಳಲು ಸಕಲ‌ಸಿದ್ಧತೆ ನಡೆದಿದೆ. ಜೆಡಿಎಸ್ ಅಭ್ಯರ್ಥಿ ಪ್ರದೀಪ ನಾಯಕ ಪಕ್ಷ ಸಂಘಟನೆ ಹಾಗೂ ಕಾರ್ಯಕ್ರಮದ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅವರು ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ‘ಅಭಿವೃದ್ಧಿಗಾಗಿ ಅಧಿಕಾರ ಜನಸಾಮಾನ್ಯರ ಸರ್ಕಾರ’ ಎಂಬ ಅಂಶವನ್ನು ಬಿಂಬಿಸುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ 222 ಕ್ಷೇತ್ರವನ್ನು ಪ್ರವಾಸ ಮಾಡಿದ್ದಾರೆ. ಜನಸಾಮಾನ್ಯರ ಬಳಿ ತೆರಳಿ ಅವರ ಸಮಸ್ಯೆ ಅರಿತು ಪಕ್ಷ ಅಧಿಕಾರಕ್ಕೆ ಬಂದಾಗ ಆ ಸಮಸ್ಯೆಗೆ ಬಗೆಹರಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಮೂರು ಪ್ರಮುಖ ಉದ್ದೇಶಗಳಲ್ಲಿ ಪ್ರವಾಸ ಕೈಗೊಂಡಿರುವ ಕುಮಾರಸ್ವಾಮಿಯವರು, ಮೊದಲನೆಯದಾಗಿ, ಪಕ್ಷ ಸಂಘಟನೆ ಸಾರ್ವತ್ರಿಕ ಗೊಳಿಸಿ ಜನಸಾಮಾನ್ಯರ ಬೆಂಬಲ ಗಳಿಸುವುದು, ಎರಡನೆಯದಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಜನರೆದುರು ತೆರೆದಿಡುವುದು, ಹಾಗೂ ಮೂರನೆಯದಾಗಿ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂಬುದಾಗಿ ಪಕ್ಷ ಈಗಾಗಲೇ ಘೋಷಣೆ ಮಾಡಿದೆ, ಕುಮಾರಸ್ವಾಮಿಯವರ ಆಡಳಿತಾವಧಿಯಲ್ಲಿಯ ಉತ್ತಮ ಕಾರ್ಯಕ್ರಮಗಳನ್ನು ಜನರ ಮುಂದಿಡುವುದಾಗಿದೆ ಎಂದು ಹೇಳಿದರು.

RELATED ARTICLES  ಕಾರಿನ ಮೇಲೆ ಮುರಿದುಬಿತ್ತು ವಿದ್ಯುತ್ ಕಂಬ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯತೆಯಿಂದ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಗೆಲುವು ಸಾಧಿಸಿ ಆಡಳಿತ ನಡೆಸುತ್ತಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು ಜನಸಾಮಾನ್ಯರು ಬಡವರ ಬಾಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಹೇಳುತ್ತಿದ್ದಾರೆ. ಜನಸಾಮಾನ್ಯರು ಪ್ರೀತಿ ಗಳಿಸಿರುವ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ ಯವರಾಗಿದ್ದಾರೆ ಎಂದರು.

ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ 51 ಸಾವಿರ ರೈತ ಕುಟುಂಬಗಳ ಸಾಲ ಮನ್ನಾ ಘೋಷಣೆ, ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ, ಗಣನೀಯ ಸಂಖ್ಯೆಯಲ್ಲಿ ರೈತರ ಆತ್ಮಹತ್ಯ ತಗ್ಗಿದೆ. ಅಲ್ಲದೆ ಬಾಣಂತಿಯರಿಗೆ ಗರ್ಭಿಣಿಯರಿಗೆ ಆರೋಗ್ಯ ವಿಮೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ 10,000 ರೂ ವರೆಗೆ ಮಾಸಿಕ ವೇತನ ಹೆಚ್ಚಳ, ಇಸ್ರೇಲ್ ಮಾದರಿಯ ತಂತ್ರಜ್ಞಾನವನ್ನು ರೈತರ ಕೃಷಿಭೂಮಿ ಅಭಿವೃದ್ಧಿಗಾಗಿ 25 ಸಾವಿರ ಕೋಟಿ ರೂಪಾಯಿ ಯೋಜನೆ , ರೈತ ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ನಿಗದಿ ಪಡಿಸುವುದು ಸೇರಿದಂತೆ ಅನೇಕ ಪ್ರಣಾಳಿಕೆಯ ಯೋಜನೆಗಳು ರಾಜ್ಯದ ಜನತೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಲು ಮುಖ್ಯ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES  ಯಶಸ್ವಿಯಾಗಿ ಸಂಘಟಿತವಾಯ್ತು ಉತ್ತರ ಕನ್ನಡ ಜಿಲ್ಲಾ ಮಟ್ಟದ ಯವಜನೋತ್ಸವ

ರಾಜಕೀಯ ಪಕ್ಷದೊಳಗೆ ಆಪಾದನೆಗಳು ಸಹಜ, ಆರೋಪ ಮಾಡುವವರು ಪಕ್ಷದ ಘನತೆಗೆ ಕುಂದಾಗುವುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಜೆಡಿಎಸ್ ಪಕ್ಷ ನನ್ನ ಅಥವಾ ನನ್ನ ಅಪ್ಪನ ಪಕ್ಷವಲ್ಲ. ಇದು ಎಲ್ಲಾ ಕಾರ್ಯಕರ್ತರ ಪಕ್ಷ. ಈಗ ಆರೋಪ ಮಾಡಿರುವವರ ವಿರುದ್ಧ ಪಕ್ಷದ ವರಿಷ್ಠರು ಕ್ರಮ ಜರುಗಿಸಲಿದ್ದಾರೆ. ನಾನು ಯಾವುದೇ ಉತ್ತರವನ್ನು ಕೊಡುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ರವೀಂದ್ರ ನಾಯ್ಕ ಉತ್ತರಿಸಿದರು.

ಮಾರ್ಚ್ 15ರ ಕುಮಾರ ಪರ್ವ ಮೆರವಣಿಗೆಯಲ್ಲಿ ಸಾವಿರಾರು ಜನ ಪಕ್ಷದ ಕಾರ್ಯಕರ್ತರೊಂದಿಗೆ , ವಿಭಿನ್ನವಾಗಿ ಅನೇಕ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದರು.

ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಎನ್ ವಿ ಭಟ್ ದೇವಸ, ತಾಲೂಕ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿಸಾರ್ ಅಹಮದ್ ಚಾಂದ್, ನಳೀನಾ, ರೇವಣಸಿದ್ದ ಉಣಕಲ್, ರಾಧಾ ಮಹಾಲೆ, ಸರಸ್ವತಿ ಗುನಗ, ನಾರಾಯಣ ಭಟ್, ಶಾಂತವ್ವ, ಈಶ್ವರ ಹೆಗಡೆ, ವಿಶ್ವನಾಥ ಭಟ್, ಗಿರೀಶ ಭಟ್, ರಾಮಾ ಗೌಡ, ಗಣಪತಿ ಕುಣಬಿ, ಶೇಖರ ನಾಯ್ಕ, ಚುಡಾಮಣಿ ನಾಯ್ಕ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.