ಬೆಂಗಳೂರು, ಮಾ.13-ಉತ್ತಮ ಗುಣಮಟ್ಟದ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿರುವ ಉದ್ಯಾನನಗರಿ ಬೆಂಗಳೂರು ಇಂದು ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ನಾರಾಯಣ ಹೃದಯಾಲಯದಲ್ಲಿ ತೀವ್ರ ಹೃದ್ರೋಗ ಸಮಸ್ಯೆಗಳಿಂದ ನರಳುತ್ತಿರುವ ಇಬ್ಬರ ಶಸ್ತ್ರಚಿಕಿತ್ಸೆಗಾಗಿ ಇನ್ನೆರಡು ಆಸ್ಪತ್ರೆಗಳಿಂದ ಎರಡು ಜೀವಂತ ಹೃದಯವನ್ನು ಅತ್ಯಂತ ಕ್ಷಿಪ್ರವಾಗಿ ಸಾಗಿಸುವಲ್ಲಿ ವೈದ್ಯಕೀಯ ಸಿಬ್ಬಂದಿ ಸಫಲರಾಗಿದ್ದಾರೆ.
ನಗರದ ಹೊಸೂರು ರಸ್ತೆಯಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯದಲ್ಲಿ 10 ವರ್ಷ ಸಿರಿ ಎಂಬ ಬಾಲಕಿ ಹಾಗೂ ರಶ್ಮಿ ಪ್ರಸಾದ್ (40) ಎಂಬ ಮಹಿಳೆ ತೀವ್ರ ಹೃದಯ ಸಮಸ್ಯೆಯಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದರು. ಇವರಿಬ್ಬರಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು.
ನಗರದ ಕೆಂಗೇರಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಮತ್ತು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿನ ಮರಣಶಯ್ಯೆಯಲ್ಲಿರುವ ದಾನಿಗಳ ಎರಡು ಜೀವಂತ ಹೃದಯಗಳನ್ನು ಗ್ರೀನ್ ಕಾರಿಡಾರ್ (ಹಸಿರು ಪಥ-ನಿರ್ವಿಘ್ನ ಸಂಚಾರ ಮಾರ್ಗ) ಮೂಲಕ ಇಂದು ಬೆಳಗ್ಗೆ ನಾರಾಯಣ ಹೃದಯಾಲಯಕ್ಕೆ ಅತ್ಯಂತ ಕ್ಷಿಪ್ರವಾಗಿ ರವಾನಿಸುವಲ್ಲಿ ಸಮರ್ಪಣಾ ಮನೋಭಾವದ ಸಿಬ್ಬಂದಿ ಸಫಲಾಗಿದ್ದಾರೆ.
ಈ ಕಾರ್ಯಕ್ಕಾಗಿ ನಾರಾಯಣ ಹೃದಯಾಲಯದ ಎರಡು ಅತ್ಯಾಧುನಿಕ ವ್ಯವಸ್ಥೆಯ ವಿಶೇಷ ಆ್ಯಂಬ್ಯುಲೆನ್ಸ್ ವಾಹನಗಳು ಮತ್ತು ನುರಿತ ವೈದ್ಯಕೀಯ ಸಿಬ್ಬಂದಿಯನ್ನು ಬಳಸಲಾಯಿತು. ಸುರಕ್ಷಿತ ವ್ಯವಸ್ಥೆಯೊಂದಿಗೆ ಕೊಲಂಬಿಯಾ ಆಸ್ಪತ್ರೆಯಿಂದ ಒಯ್ಯಲಾದ ಒಂದು ಹೃದಯ 29 ನಿಮಿಷಗಳಲ್ಲಿ ನಾರಾಯಣ ಹೃದಯಾಲಯವನ್ನು ತಲುಪಿದರೆ, ಬಿಜಿಎಸ್‍ನಿಂದ ಇನ್ನೊಂದು ಲೈವ್ ಹಾರ್ಟ್ 26 ನಿಮಿಷಗಳಲ್ಲಿ ಸೇರಿತು.
ಎರಡು ಆಂಬ್ಯುಲೆನ್ಸ್‍ಗಳ ಮೂಲಕ ಜೀವಂತ ಹೃದಯಗಳನ್ನು ಸಾಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಅಂಬ್ಯುಲೆನ್ಸ್‍ನಲ್ಲಿರುವ ವೈದ್ಯರೊಂದಿಗೆ ಆಸ್ಪತ್ರೆ ಸಂಪರ್ಕ ಸಾಧಿಸಲು ವ್ಯಾಟ್ಸಾಪ್ ಸಂವಹನ ಬಳಸಲಾಯಿತು. ಗ್ರೀನ್ ಕಾರಿಡಾರ್ ಮೂಲಕ ಯಾವುದೇ ಅಡೆತಡೆ ಇಲ್ಲದೇ ಎರಡು ಲಬ್-ಡಬ್ ಹೃದಯಗಳನ್ನು ಸುರಕ್ಷಿತವಾಗಿ ನಾರಾಯಣ ಹೃದಯಾಲಯಕ್ಕೆ ತಲುಪಿಸುವಲ್ಲಿ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.