ಗೋಕರ್ಣ:ಹನೇಹಳ್ಳಿಯ ಶ್ರೀ ಮುರ್ಕುಂಡೇಶ್ವರ ಕ್ರಿಕೆಟ ಕ್ಲಬ್ ಇವರ ಆಶ್ರಯದಲ್ಲಿ ಆಗೇರ ಸಮಾಜದವರಿಗಾಗಿ ಕ್ರಿಕೆಟ ಪಂದ್ಯಾವಳಿಯನ್ನು ಹನೇಹಳ್ಳಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಪಂದ್ಯಾವಳಿಯ ಸಮಾರೋಪ ಸಮಾರಂಭವು ಜರುಗಿತು.
ಬಹುಮಾನ ವಿತರಕರಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಶ್ರೀ ಮುರ್ಕುಂಡೇಶ್ವರ ಕ್ರಿಕೆಟ ಕ್ಲಬ್ ಇವರ ಆಶ್ರಯದಲ್ಲಿ ನಡೆದ ಈ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ಜರುಗಿದೆ. ಆಗೇರ ಸಮಾಜದವರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಯ ನಿಟ್ಟಿನಲ್ಲಿ ಇಂತಹ ಪಂದ್ಯಾವಳಿ ಹಮ್ಮಿಕೊಂಡಿರುವುದು ಶ್ಲಾಘನೀಯ. ಆಗೇರ ಸಮಾಜ ಬಾಂಧವರು ಶೈಕ್ಷಣ ಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕ್ರತಿಕವಾಗಿ, ರಾಜಕೀಯವಾಗಿ ಮುಂದುವರೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು.ಸರಕಾರಗಳು ಈ ಸಮಾಜದ ಅಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆ ಸೌಲಭ್ಯವನ್ನು ಅನುಷ್ಠಾನಗೊಳಿಸಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಈ ಸಂಘಟನೆಯವರು ಕೇವಲ ಕ್ರೀಡೆ, ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಸೀಮಿತರಾಗದೆ ನಿಮ್ಮ ಸಮಾಜದ ಜನರಿಗೆ ಸರಕಾರದ ಎಲ್ಲಾ ಸೌಲಭ್ಯಗಳನ್ನು ತಲುಪಿಸುವಲ್ಲಿಯು ಪ್ರಾಮಾಣ ಕವಾಗಿ ಕಾರ್ಯ ನಿರ್ವಹಿಸಬೇಕು. ಅಲ್ಲದೇ ನಿಮ್ಮಲ್ಲಿ ಉತ್ತಮ ಸಂಘಟನೆಯನ್ನು ಹೊಂದಿರಬೇಕು. ಒಗ್ಗಟ್ಟಿನಲ್ಲಿ ಬಲವಿದೆ ನೀವೆಲ್ಲ ಒಗ್ಗಟ್ಟಿನಿಂದಿದ್ದರೆ ಏನನ್ನಾದರೂ ಸಾಧಿಸಬಹುದು. ನಿಮ್ಮೆಲ್ಲರ ಅಭಿವೃದ್ಧಿಯ ನಿಟ್ಟಿನಲ್ಲಿ ತಾವು ಸದಾ ಸಹಾಯ ಸಹಕಾರ ನೀಡುವುದಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ ನಾಡುಮಾಸ್ಕೇರಿ ಗ್ರಾ.ಪಂ. ಸದಸ್ಯರಾದ ಶ್ರೀನಿವಾಸ ದೇವಣ್ಣ ನಾಯಕ ಅವರು ಪಂದ್ಯಾವಳಿ ಆಯೋಜನೆಯ ಕುರಿತಾಗಿ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜಿಪಿ ಮಿರ್ಜಾನ ಶಕ್ತಿ ಕೇಂದ್ರದ ಅಧ್ಯಕ್ಷರಾದ ವೆಂಕಟರಮಣ ಕವರಿ, ಪ್ರಶಾಂತ ಗಾಂವಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.