ಮಂಗಳೂರು: ರಾಜ್ಯದಲ್ಲಿ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಪೆಟಾ (ಪೀಪಲ್‌ ಫಾರ್‌ ದ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್‌) ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಇದರೊಂದಿಗೆ ಕಂಬಳ ಆಯೋಜಿಸುವುದಕ್ಕೆ ಎದುರಾಗಿದ್ದ ಕಾನೂನು ಸಂಘರ್ಷ ಸದ್ಯಕ್ಕೆ ತೆರೆ ಕಂಡಿದೆ.

ಈ ಹಿಂದೆ ಪೆಟಾ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆಯನ್ನು ಸೋಮವಾರ ನಡೆಸಿದ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವು ಪೆಟಾ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತು. ರಾಜ್ಯದಲ್ಲಿ ಕಂಬಳಕ್ಕೆ ಅವಕಾಶ ನೀಡಿ ಹೊರಡಿಸಿರುವ ಅಧ್ಯಾದೇಶ ಜಾರಿ ಮಾಡಿರುವ ರೀತಿ ಸರಿಯಲ್ಲ, ಅದು ಕಾನೂನಿಗೆ ವಿರುದ್ಧವಾಗಿದೆ. ಆದುದರಿಂದ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಪೆಟಾದವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

RELATED ARTICLES  ಹಿರಿಯ ನಟ ಕಾಶೀನಾಥ ಇನ್ನಿಲ್ಲ: ನಗಿಸಿದವನ ನಗು ಇನ್ನು ನೆನಪು ಮಾತ್ರ

ಕಂಬಳ ಮಸೂದೆ ಈಗಾಗಲೇ ರಾಜ್ಯ ಸರಕಾರ ದಿಂದ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಕಿತ ದೊಂದಿಗೆ ಕಾನೂನು ಆಗಿ ಜಾರಿಗೆ ಬಂದಿದೆ. ಹೀಗಾಗಿ ಪೆಟಾದವರು ಅರ್ಜಿಯಲ್ಲಿ ಉಲ್ಲೇಖೀ ಸಿರುವ ವಿಚಾರ ಸಿಂಧುವಾಗುವುದಿಲ್ಲ ಎಂದು ನ್ಯಾಯಾಲಯದಲ್ಲಿ ಕರ್ನಾಟಕ ಸರಕಾರದ ಪರ ವಕೀಲರು ವಾದ ಮಂಡಿಸಿದ್ದರು. ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ| ದೀಪಕ್‌ ಮಿಶ್ರಾ, ನ್ಯಾ| ಎ.ಎಂ. ಕಾನ್ವಿಲ್ಕರ್‌ ಹಾಗೂ ನ್ಯಾ| ಡಿ.ವೈ. ಚಂದ್ರಚೂಡ್‌ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠವು ಅರ್ಜಿಯನ್ನು ಸೋಮವಾರ ವಜಾಗೊಳಿಸಿದೆ.

ಇದಕ್ಕೂ ಮೊದಲು ಕರ್ನಾಟಕ ಸರಕಾರ ರೂಪಿ ಸಿರುವ ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಮಸೂದೆಯಲ್ಲಿಯೂ ಲೋಪ ದೋಷ ಗಳಿವೆ ಎಂಬುದಾಗಿ ಪೆಟಾ ಸಂಘಟನೆ ಪರ ವಕೀಲರು ಮಂಡಿಸಿದ ವಾದವನ್ನು ಆಲಿಸಿದ ನ್ಯಾಯ ಪೀಠವು, ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬಹುದು ಎಂದು ಅಭಿಪ್ರಾಯಪಟ್ಟಿತು.

RELATED ARTICLES  ದಸರಾ ರಜೆ ವಿಸ್ತರಣೆ : ನಡೆಯುತ್ತಿದೆ ಹಲವರರಿಂದ ಹಲವು ಚರ್ಚೆ.

ರಾಜ್ಯ ಸರಕಾರ ಈಗಾಗಲೇ ರೂಪಿಸಿರುವ ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಮಸೂದೆಗೆ ಫೆ. 10ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅಂಕಿತ ಹಾಕಿದ್ದು, ಕಾನೂನು ಆಗಿ ಜಾರಿಗೆ ಬಂದಿದೆ. ಈ ಮೂಲಕ ಕಂಬಳಕ್ಕೆ ಎದುರಾಗಿದ್ದ ಕಾನೂನಾತ್ಮಕ ಅಡಚಣೆ ದೂರವಾಗಿತ್ತು. ಪೆಟಾದವರು ಸಲ್ಲಿಸಿದ್ದ ಅರ್ಜಿ ಕೂಡ ಸೋಮವಾರ ವಜಾಗೊಂಡಿರುವುದರಿಂದ ಕಂಬಳ ಆಯೋಜನೆಗೆ ಸದ್ಯಕ್ಕೆ ಯಾವುದೇ ರೀತಿಯ ಕಾನೂನು ತೊಡಕು ಇಲ್ಲ.