ನವದೆಹಲಿ: ಬ್ಯಾಂಕ್ ಖಾತೆ ಮತ್ತು ಮೊಬೈಲ್ ನಂಬರ್‌ಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸಲು ನೀಡಿದ್ದ ಗಡುವನ್ನು ಸುಪ್ರೀಂಕೋರ್ಟ್ ಅನಿರ್ದಿಷ್ಟಾವಧಿಗೆ ಮುಂದೂಡಿದ್ದು, ಮುಂದಿನ ತೀರ್ಪಿನವರೆಗೂ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂದು ಹೇಳಿ ಮಹತ್ವದ ತೀರ್ಪು ನೀಡಿದೆ.
ಆಧಾರ್ ಗುರುತು ಚೀಟಿಯ ಸಾಂವಿಧಾನಿಕ ಸಿಂಧುತ್ವದ ಕುರಿತಂತೆ ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ ಪೀಠ, ಸರ್ಕಾರಿ ಸೌಲಭ್ಯಗಳಿಗೆ ಹೊರತುಪಡಿಸಿದಂತೆ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಗೆ ಇದ್ದ ಮಾ. 31ರ ಅಂತಿಮ ಗಡುವನ್ನು ತೆರವುಗೊಳಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯರ ಪೀಠ, ತತ್ಕಾಲ್ ಪಾಸ್‌ಪೋರ್ಟ್ ಸೇರಿದಂತೆ ಯಾವುದಕ್ಕೂ ಆಧಾರ್ ಕಡ್ಡಾಯಕ್ಕಾಗಿ ಸರ್ಕಾರ ಒತ್ತಾಯಪಡಿಸುವಂತಿಲ್ಲ ಎಂದು ತಿಳಿಸಿದೆ.
ಮಾ. 31ರೊಳಗೆ ಆಧಾರ್ ಕಾಯಿದೆಯ ಸಾವಿಂಧಾನಿಕ ಸಿಂಧುತ್ವದ ಕುರಿತಂತೆ ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ಮತ್ತೆ ತೀರ್ಪು ನೀಡುವವರೆಗೂ ಆಧಾರ್ ಕಡ್ಡಾಯ ಸದ್ಯಕ್ಕಿಲ್ಲ ಎಂದು ಹೇಳಿದೆ.
ಇದಕ್ಕೂ ಮುನ್ನ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಎಂ ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ, ಆಧಾರ್ ಕಡ್ಡಾಯದ ಗಡುವು ಬ್ಯಾಂಕ್‌ಗಳು ಮತ್ತು ಸ್ಟಾಕ್ ಎಕ್ಸ್‌ಚೇಂಜ್‌ನಂತಹ ಹಣಕಾಸು ಸಂಸ್ಥೆಗಳ ಮೇಲೆ ಪರಿಣಾಮ ಬೀರಬಹುದೆಂದು ಹೇಳಿದ್ದರು.
ಕಳೆದ ವರ್ಷ ಡಿಸೆಂಬರ್ 15ರಂದು ಸುಪ್ರೀಂಕೋರ್ಟ್ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್‌ಗೆ ಆಧಾರ್ ನಂಬರ್ ಜೋಡಣೆಗೆ ಮಾ. 31ರ ವರೆಗೆ ಗಡುವನ್ನು ವಿಸ್ತರಿಸಲಾಗಿತ್ತು.