ಯಲ್ಲಾಪುರ ; ಯುಗಾದಿ ಉತ್ಸವ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆಯಲ್ಲಿ ವಿದ್ಯಾರ್ಥಿಗಳಿದ್ದು ಈ ವಿದ್ಯಾರ್ಥಿಗಳಿಗೆ ಯುಗಾದಿ ಉತ್ಸವದ ಶೋಭಾ ಯಾತ್ರೆ ಅಥವಾ ಬೈಕ್ ರ‌್ಯಾಲಿ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂದು ತಹಸೀಲ್ದಾರ ಡಿ ಜಿ ಹೆಗಡೆ ಹೇಳಿದರು.
ಮಾರ್ಚ್ 18ರಂದು ನಡೆಯಲಿರುವ ಯುಗಾದಿ ಶೋಭಾಯಾತ್ರೆಯ ಕುರಿತು, ಶಾಂತಿ ಸುವ್ಯವಸ್ಥೆ ಕಾಪಾಡಲು ತಾಲೂಕ ಪಂಚಾಯತ ಆವಾರದ ಗಾಂಧಿ ಕುಟೀರದಲ್ಲಿ ಪೊಲೀಸ್ ಇಲಾಖೆ ಮಂಗಳವಾರ ಸಂಜೆ ನಡೆಸಿದ ಶಾಂತಿಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಮಾರ್ಚ್ 18 ರವಿವಾರ ಬರುವುದರಿಂದ ವಾರದ ಸಂತೆಯನ್ನು ಶನಿವಾರಕ್ಕೆ ನಡೆಸಲು ಉದ್ದೇಶಿಸಲಾಗಿದೆ ಎಂದ ಡಿ ಜಿ ಹೆಗಡೆಯವರು, ಆಸ್ಪತ್ರೆ, ಜನವಸತಿ ಪ್ರದೇಶಗಳಲ್ಲಿ ಧ್ವನಿವರ್ಧಕದ(ಡಿಜೆ) ದ್ವನಿಯನ್ನು ಕಡಿಮೆ ಇರುವಂತೆ ನೋಡಿಕೊಳ್ಳಬೇಕು ಎಂದು ಯುಗಾದಿ ಉತ್ಸವ ಸಮಿತಿಗೆ ಸೂಚಿಸಿದರು.
ಸುರಕ್ಷತೆ ಹಾಗೂ ಶಾಂತಿಯುತ ಯುಗಾದಿ ಉತ್ಸವ ಆಚರಣೆಯ ಕುರಿತು ಸಲಹೆ ನೀಡಿದ ಪೊಲೀಸ್ ನಿರೀಕ್ಷಕರಾದ ಡಾ.ಮಂಜುನಾಥ ನಾಯಕ, ಹಿಂದಿನ ಎಲ್ಲಾ ಉತ್ಸವಗಳಿಗೆ ಹಬ್ಬ ಆಚರಣೆಗಳಿಗೆ ಯಲ್ಲಾಪುರದ ಜನತೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುತ್ತ ಬಂದಿದ್ದಾರೆ. ನಾವಿಲ್ಲಿ ಹೊಸ ಅಧಿಕಾರಿಗಳಾದರೂ ಸಣ್ಣ-ಪುಟ್ಟ ಘಟನೆಗಳ ವಿವರಣೆಯನ್ನು ಪೊಲೀಸ್ ಇಲಾಖೆಗೆ ನೀಡಿ ಶಾಂತಿ-ಸುವ್ಯವಸ್ಥೆ ಕಾಪಾಡಲು ನೆರವಾಗಿದ್ದಾರೆ. ಕೆಲವೊಂದು ವಿಚಿದ್ರಕಾರಿ ಶಕ್ತಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪ್ರಯತ್ನ ನಡೆಸಬಹುದು. ಹೀಗಾಗಿ ಹಬ್ಬದ ಉತ್ಸಾಹ ಕಡಿಮೆಯಾಗುತ್ತದೆ. ಅಂತಹ ಪಟ್ಟಭದ್ರ ಹಿತಾಸಕ್ತಿಗಳ ಕುರಿತು ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸುವಂತೆ ಅವರು ಕೋರಿದರು.
ಪಟ್ಟಣದ ಕೆಲವು ಕಡೆಗಳಲ್ಲಿ ರಸ್ತೆ ಚರಂಡಿ ಮುಂತಾದ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ, ಇಂತಹ ಮಾರ್ಗದಲ್ಲಿ ಯುಗಾದಿ ಶೋಭಾಯಾತ್ರೆ ಅದರಿಂದ ಯುಗಾದಿ ಸಮಿತಿಯವರು ಮೊದಲ ಭಾಗದಲ್ಲಿ ಕಾಮಗಾರಿ ಬಳಸುವವರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದ ಮಂಜುನಾಥ ನಾಯಕ ಅವರು. ಬೈಕ್ ರ‌್ಯಾಲಿ ನಡೆಯುವ ಮಾರ್ಚ್ 15ರಂದು ಮಧ್ಯಾಹ್ನ ಪಟ್ಟಣದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ ಎಂದರು.
ಅಭಿವೃದ್ಧಿ ಕೆಲಸ ನಡೆಯುವ ಸ್ಪರ್ಧೆಗಳಲ್ಲಿ ಜಲ್ಲಿ ಕಲ್ಲುಗಳು ಸಂಗ್ರಹಿಸಲಾಗಿದ್ದು ಅವನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕೆಂದು ಯುಗಾದಿ ಉತ್ಸವ ಸಮಿತಿಯ ಪ್ರಮುಖ ಯೋಗೇಶ ಹಿರೇಮಠ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಲ್ಲಿ ಕೋರಿದರು. ಅಲ್ಲದೆ ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಕೋರಿದರು.
ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಪಂಚಾಯಿತಿಯ ಸ್ಥಳದಲ್ಲಿ ಪ್ರದರ್ಶಿಸುವಾಗ, ಪಟ್ಟಣ ಪಂಚಾಯತಿಯು ನಿಗದಿಪಡಿಸಿದ ಶುಲ್ಕವನ್ನು ಬರಿಸಿ, ಪರವಾನಿಗೆ ಪಡೆದು ಪ್ರದರ್ಶಿಸಬೇಕೆಂದು ಪ.ಪಂ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾನಿ ಸೂಚಿಸಿದರು.
ಸಾಮಾಜಿಕ ಕಾರ್ಯಕರ್ತ ರಾಮು ನಾಯ್ಕ ಮಾತನಾಡಿ, ರವಿವಾರದ ಸಂತೆಯನ್ನು ಶನಿವಾರದ ನಡೆಸುವ ಕುರಿತು ಗ್ರಾಮೀಣ ಭಾಗದಲ್ಲಿ ವ್ಯಾಪಕ ಪ್ರಚಾರ ಮಾಡುವಂತೆ ಕೇಳಿಕೊಂಡರು.
ಶೋಭಾಯಾತ್ರೆಯಲ್ಲಿ ಮಹಿಳೆಯರೂ ನೃತ್ಯ ಮಾಡುವುದರಿಂದ ಅವರ ತಂಡದಲ್ಲಿ ಪುರುಷರು ಪ್ರವೇಶಿದಂತೆ ನೋಡಿಕೊಳ್ಳಬೇಕೆಂದು ಯುಗಾದಿ ಉತ್ಸವ ಸಮಿತಿಯ ಮಹಿಳಾ ಪ್ರಮುಖೆ ನಮಿತಾ ಬೀಡಿಕರ ಪೊಲೀಸ್ ಇಲಾಖೆಯಲ್ಲಿ ಬೇಡಿಕೆ ಇಟ್ಟರು.
ಪೊಲೀಸ್ ಉಪನಿರೀಕ್ಷಕ ರತ್ನಕುಮಾರ, ಹೆಸ್ಕಾಂ ಎಇಇ ವಿಶಾಲ ದನೇಪ್ಪಗೋಳ ವೇದಿಕೆಯಲ್ಲಿದ್ದರು.
ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಗಾಂವ್ಕರ, ಪ್ರದೀಪ ಯಲ್ಲಾಪುರಕರ, ಶೋಭಾ ಹುಲಮನಿ, ನಂದನ ಬಾಳಗಿ, ಪ್ರಶಾಂತ ಹೆಗಡೆ, ರಾಧಾ ಗುಡಿಗಾರ, ವೀಣಾ ಯಲ್ಲಾಪುರಕರ, ಪ.ಪಂ ಸದಸ್ಯ ಗಣೇಶ ಪಾಟಣಕರ, ಪ್ರಮುಖರಾದ ಸತೀಶ ನಾಯ್ಕ, ಅಗ್ನಿಶಾಮಕ ದಳದ ವಿ. ಜಿ.ನಾಯ್ಕ, ಕೇಬಲ್ ನಾಗೇಶ, ನಾಗೇಶ ಯಲ್ಲಾಪುರಕರ ಮುಂತಾದವರು ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು.