ನವದೆಹಲಿ: ವಿದೇಶಿ ವಕೀಲರು ಮತ್ತು ಕಾನೂನು ಸಲಹಾ ಸಂಸ್ಥೆಗಳು ಭಾರತದಲ್ಲಿ ಕಾನೂನು ಸೇವೆ ಮತ್ತು ವಕೀಲಿ ವೃತ್ತಿಯಲ್ಲಿ ತೊಡಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ಬಂಧ ಹೇರಿದೆ.
ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸುವುದು ಮಾತ್ರವಲ್ಲ, ನ್ಯಾಯಾಲಯದ ಹೊರಗೆ ಕಾನೂನು ಸೇವೆ ಒದಗಿಸುವ ಕೆಲಸವನ್ನೂ ಮಾಡುವಂತಿಲ್ಲ ಎಂದು ತಾಕೀತು ಮಾಡಿದೆ.
ಕಾನೂನು ಸಮಾಲೋಚನೆ, ಸಲಹೆ, ನೆರವು, ಕಾನೂನಿಗೆ ಸಂಬಂಧಿಸಿದ ಸಮಾವೇಶಗಳಲ್ಲಿ ಚರ್ಚೆಯಲ್ಲೂ ತೊಡಗಿಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ವಕೀಲಿ ವೃತ್ತಿ ಕಾಯ್ದೆಯ ಅಧ್ಯಾಯ ನಾಲ್ಕರ ಅನ್ವಯ ವಕೀಲರ ಪರಿಷತ್‌ನಲ್ಲಿ ಹೆಸರು ನೋಂದಣಿ ಮಾಡಿದ ವಕೀಲರು ಮಾತ್ರ ಈ ವೃತ್ತಿ ಕೈಗೊಳ್ಳಲು ಅವಕಾಶ ಇದೆ ಎಂದು ದ್ವಿಸದಸ್ಯ ಪೀಠ ಹೇಳಿದೆ.
ವಿದೇಶಿ ವಕೀಲರಿಗೆ ಭಾರತದಲ್ಲಿ ವಕೀಲ ವೃತ್ತಿ ನಡೆಸದಂತೆ ಸಂಪೂರ್ಣವಾಗಿ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದೂ ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಕಾನೂನು ಅವಕಾಶ ನೀಡಿದರೆ ಅಂತರರಾಷ್ಟ್ರೀಯ ವಾಣಿಜ್ಯ ವ್ಯಾಜ್ಯ ಪ್ರಕರಣಗಳಲ್ಲಿ ಮಾತ್ರ ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಭಾರತದ ನ್ಯಾಯಾಲಯಗಳಲ್ಲಿ ವಾದ ಮಂಡಿಸಬಹುದು ಎಂದಿದೆ.