ಕಾರವಾರ:ನಗರದ ರಾಕ್ ಗಾರ್ಡನ್ ನಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಅವರನ್ನು ಶಾಸಕ ಸತೀಶ್ ಸೈಲ್ ಸುಮಾರು ಎರಡು ತಾಸಿನವರೆಗೂ ಬಿಸಿಲಿನಲ್ಲೇ ಕಾಯಿಸಿದ ಘಟನೆ ನಡೆದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನ ಶಾಸಕ ಸತೀಶ್ ಸೈಲ್ ಮಾಡಬೇಕಿತ್ತು. ಮುಖ್ಯ ಅತಿಥಿಯಾಗಿ ಪದ್ಮಶ್ರಿ ಸುಕ್ರಿ ಬೊಮ್ಮ ಗೌಡ ಅವರನ್ನ ಆಹ್ವಾನಿಸಲಾಗಿತ್ತು. ಮಧ್ಯಾಹ್ನ ೩ ಘಂಟೆಗೆ ಕಾರ್ಯಕ್ರಮ ಎಂದು ಸುಕ್ರಿ ರಾಕ್ ಗಾರ್ಡನ್ ಬಳಿ ೨.೩೦ಕ್ಕೆ ಬಂದಿದ್ದರು. ಆದರೆ ಸಂಜೆ ೫ ಘಂಟೆಯಾದರು ಶಾಸಕ ಸತೀಶ್ ಸೈಲ್ ಕಾರ್ಯಕ್ರಮಕ್ಕೆ ಬರಲೇ ಇಲ್ಲ. ಶಾಸಕರ ಕಡೆಯವರು ಶಾಸಕರು ಬರುತ್ತಾರೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರಿಂದ ಅಧಿಕಾರಿಗಳು ಶಾಸಕರ ದಾರಿ ಕಾಯ್ದು ಸುಕ್ರಿ ಬೊಮ್ಮ ಗೌಡ ಅವರಿಗೆ ಬಿಸಿಲಿನಲ್ಲಿ ಕಾಯಿಸಿ ಅವಮಾನ ಮಾಡಿದ್ದಾರೆ. ಇದಲ್ಲದೇ ಮಹಿಳೆಯರು, ಕಲಾವಿದರು ಕಾರ್ಯಕ್ರಮ ಪ್ರಾರಂಭ ಯಾವಾಗ ಆಗುತ್ತದೆ ಎಂದು ಕಾಯುತ್ತಾ ಕುಳಿತು ಆಯೋಜಕರಿಗೆ ಹಿಡಿಹಿಡಿ ಶಾಪ ಹಾಕಿದರು. ಅಂತಿಮವಾಗಿ ಮಾಧ್ಯಮದವರು ಅಸಮಾಧಾನ ವ್ಯಕ್ತಪಡಿಸಿದಾಗ ೫.೨೫ಕ್ಕೆ ಕಾರ್ಯಕ್ರಮವನ್ನ ಪ್ರಾರಂಭಿಸಲಾಯಿತು.
ಶಾಸಕರು ಕಾರ್ಯಕ್ರಮಕ್ಕೆ ಬರುವುದು ತಡವಾಗುತ್ತದೆ ಎಂದು ಕಾರ್ಯಕ್ರಮ ಪ್ರಾರಂಭಿಸುವಂತೆ ಸೂಚನೆ ನೀಡಬಹುದಾಗಿತ್ತು. ಆದರೆ ಇದನ್ನ ಮರೆತು ಹಿರಿಯ ಕಲಾವಿದೆ ಸುಕ್ರಿ ಬೊಮ್ಮ ಗೌಡ ಇದ್ದಾರೆಂದು ತಿಳಿದಿದ್ದರು ಕಾರ್ಯಕ್ರಮಕ್ಕೆ ಆಗಮಿಸದೇ ಕಾರ್ಯಕ್ರಮ ಸಹ ತಡವಾಗುವಂತೆ ಮಾಡಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಯಿತು.