.
ಯಲ್ಲಾಪುರ : ಪಂಡಿತ ದೀನ ದಯಾಳ್ ಉಪಾದ್ಯ ಸ್ಪರ್ಷ ಯೋಜನೆಯ ಅಡಿಯಲ್ಲಿ ಭಾರತ ಸರ್ಕಾರ ಅಂಚೆ ಇಲಾಖೆ ಮೂಲಕ ನಡೆಸಿದ ಫಿಲಾಟೆಲಿ ಪ್ರೊಜೆಕ್ಟ್ (ಅಂಚೆ ಚೀಟಿ ಹಾಗೂ ಸಂಗ್ರಹ ಕುರಿತಾದ ಪ್ರೋಜೆಕ್ಟ್) ಸ್ಪರ್ಧೆಯಲ್ಲಿ ಪಟ್ಟಣದ ವೈ.ಟಿ.ಎಸ್.ಎಸ್. ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ತೇಜಸ್ವಿ ನಾಗರಾಜ ಮದ್ಗುಣಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿದ್ದು, ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದುಕೊಂಡಿದ್ದಾನೆ,
ಈ ಕುರಿತು ಮೊದಲ ಹಂತವಾಗಿ ಅಂಚೆ ಇಲಾಖೆ ಶಿರಸಿ ವಿಭಾಗದಲ್ಲಿ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಿದ ರಸಪ್ರಶ್ನೆ ಪರೀಕ್ಷೆಯಲ್ಲಿ ಆಯ್ಕೆಯಾದ 9 ವಿದ್ಯಾರ್ಥಿಗಳಲ್ಲಿ ಅತೀ ಕಿರಿಯವನಾಗಿ ಅಂಚೆ ಚೀಟಿ ಸಂಗ್ರಹ ಕುರಿತಾದ ಎರಡನೇ ಹಂತದ ಪ್ರೋಜೆಕ್ಟ್ ವರ್ಕಗೆ ಅರ್ಹತೆ ಪಡೆದಿದ್ದನು. ಈ ಸ್ಪರ್ಧೆಗೆ ಕರ್ನಾಟಕದಿಂದ ಅರ್ಹತೆ ಪಡೆದ ಒಂದು ಸಾವಿರ ವಿದ್ಯಾರ್ಥಿಗಳಲ್ಲಿ ಆಯ್ಕೆ ಮಾಡಿದ 40 ವಿದ್ಯಾರ್ಥಿಗಳಲ್ಲಿ ತೇಜಸ್ವಿ ಪ್ರಥಮ ಸ್ಥಾನಪಡೆದಿದ್ದಾನೆ. ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆಯುವ ಮೂಲಕ ಕಲಿತ ಶಾಲೆಗೆ, ತಾಲೂಕಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಯಲ್ಲಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಮದ್ಗುಣಿ ಹಾಗೂ ಡಾ. ಜಿ.ಪಿ. ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಟ್ರಸ್ಟಿನ ವೈದ್ಯೆ ಡಾ. ಸುಚೇತಾ ಮದ್ಗುಣಿ ದಂಪತಿಯ ಪುತ್ರನಾಗಿದ್ದಾನೆ. ಈತನಿಗೆ ಅಂಚೆ ಚೀಟಿ ಸಂಗ್ರಹಕಾರರಾದ ಪಟ್ಟಣದ ಉಲ್ಲಾಸ ಶಾನಭಾಗ, ಶಿರಸಿಯ ನರಸಿಂಹಮೂರ್ತಿ ಹಾಗೂ ಶಿರಸಿ ವಿಭಾಗದ ಅಂಚೆ ಇಲಾಖೆಯ ಅಧಿಕಾರಿ ರಾಮು ಅವರು ಮಾರ್ಗದರ್ಶನ ನೀಡಿದ್ದರು.