ಹೊನ್ನಾವರ : ತಾಲೂಕಿನ ಕಡ್ಲೆಯ ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಮ್ಯಾಟ ಕಬಡ್ಡಿ ಪಂದ್ಯಾವಳಿಯನ್ನು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಮಾಜಿ ಶಾಸಕ ದಿನಕರ ಶೆಟ್ಟಿಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಬಡ್ಡಿಯಂತಹ ದೇಶೀಯ ಕ್ರೀಡೆಯನ್ನು ಹಮ್ಮಿಕೊಂಡಿರುವುದು ಅತ್ಯಂತ ವಿಶೇಷವಾಗಿದೆ ಎಂದರು. ಗ್ರಾಮೀಣ ಮಟ್ಟದಲ್ಲಿ ಇಂತಹ ಕ್ರೀಡೆಗಳು ಹೆಚ್ಚೆಚ್ಚು ಜರುಗಬೇಕು ಎಂದರು.
ಯುವ ಮುಖಂಡ ರವಿಕುಮಾರ ಶೆಟ್ಟಿ ಅವರು ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿ ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದ್ದು ಆ ನಿಟ್ಟಿನಲ್ಲಿ ಇಂತಹ ಪಂದ್ಯಾವಳಿಯನ್ನು ನಿರಂತರವಾಗಿ ಆಯೋಜಿಸುವುದರ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಹಳ್ಳಿ ಸೊಗಡಿನ ಕಬಡ್ಡಿ ಕ್ರೀಡೆಯನ್ನು ಇಂತಹ ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಂಡಿರುವುದು ಈ ಊರಿನಲ್ಲಿ ಹಬ್ಬದ ವಾತಾವರಣವನ್ನು ಉಂಟುಮಾಡಿದೆ. ಅತ್ಯುತ್ತಮವಾದ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ನಮ್ಮಲ್ಲೇ ಅದೆಷ್ಟೋ ಉತ್ತಮ ಕಬಡ್ಡಿ ಕ್ರೀಡಾಪಟುಗಳಿದ್ದಾರೆ. ಇಂತಹ ಪಂದ್ಯಾವಳಿಯನ್ನು ಆಯೋಜಿಸುವದರಿಂದ ಅಂತಹ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ದೊರೆತಂತಾಗುತ್ತದೆ. ನಮ್ಮ ಜಿಲ್ಲೆಯ ಹರೀಶ ನಾಯ್ಕ ಇವರು ಉತ್ತಮ ಕಬಡ್ಡಿ ಪಟುವಾಗಿದ್ದು ಅವರು ಪ್ರಖ್ಯಾತ ತಂಡವಾದ ಬೆಂಗಳೂರು ಬುಲ್ಸ್ ತಂಡದಲ್ಲಿ ಆಟವಾಡಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಸ್ಪರ್ಧೆ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಸೋತರೆ ನಿರಾಶರಾಗದೆ, ಗೆದ್ದರೆ ಬೀಗದೇ ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಸೋಲೇ ಗೆಲುವಿನ ಸೋಪಾನ ಎನ್ನುವಂತೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚಿನ ಪ್ರಯತ್ನದೊಂದಿಗೆ ಮುನ್ನಡೆಯಬೇಕು. ಹಾಗೂ ಹರೀಶ ನಾಯ್ಕ ಅವರಂತಹ ಕ್ರೀಡಾಪಟುಗಳಿಗೆ ಹೆಚ್ಚಿನ ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದು ಹೇಳುತ್ತಾ ಇಂತಹ ಸಂಘಟನೆಗಳು ಹೆಚ್ಚಿನ ಕ್ರಿಯಾಶೀಲತೆಯೊಂದಿಗೆ ಮುನ್ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತದ ಸದಸ್ಯರಾದ ಕೃಷ್ಣ ಜಿ. ಗೌಡ, ಜಿ. ಪಂ. ಸದಸ್ಯರಾದ ಶಿವಾನಂದ ಹೆಗಡೆ ಕಡತೋಕ, ಕಡ್ಲೆ ಗ್ರಾ.ಪಂ. ಅಧ್ಯಕ್ಷರಾದ ಊರ್ಮಿಳಾ ಶೇಟ್, ಕಡ್ಲೆ ಗ್ರಾ.ಪಂ. ಉಪಾಧ್ಯಕ್ಷರಾದ ಗಜಾನನ ಮಡಿವಾಳ, ಕಡ್ಲೆ ಗ್ರಾ.ಪಂ. ಸದಸ್ಯ ಎಂ. ಜಿ. ಹೆಗಡೆ, ಕಡ್ಲೆ ಗ್ರಾ.ಪಂ. ಸದಸ್ಯ ಗೋವಿಂದ ಗೌಡ, ಕಡ್ಲೆ ಗ್ರಾ.ಪಂ. ಸದಸ್ಯೆ ನಾಗಿ ಮುಕ್ರಿ, ಸಿಂಚನ ವಾಹಿನಿಯ ಪ್ರಧಾನ ಸಂಪಾದಕರಾದ ಕೃಷ್ಣಾನಂದ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.