ಬೆಂಗಳೂರು: ಮುಂದಿನ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ನಲ್ಲಿ ಟಿಕೆಟ್ ರಾಜಕೀಯ ಗರಿಗೆದರಿದ್ದು, 2013ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಕ್ಷೇತ್ರಗಳಿಗೆ ತಲಾ ಮೂವರು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ. ಬುಧವಾರ ನಡೆದ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಕಳೆದ ಬಾರಿ ಸೋತ 90 ಕ್ಷೇತ್ರಕ್ಕೆ ತಲಾ 3 ಹೆಸರನ್ನು ಅಂತಿಮಗೊಳಿಸಲಾಯಿತು. ಮಾ.26ರಂದು ಸಮಿತಿ ಮತ್ತೊಂದು ಬಾರಿ ಸಭೆ ನಡೆಸಿ ಪೂರ್ಣ ಪ್ರಮಾಣದ ಪ್ರಾಥಮಿಕ ಪಟ್ಟಿಯನ್ನು ಸಿದ್ಧಪಡಿಸಲಿದೆ.
ಎಐಸಿಸಿ ರಚಿಸಿರುವ ಮಧುಸೂಧನ್ ಮಿಸ್ತ್ರಿ ನೇತೃತ್ವದ ಸ್ಕ್ರೀನಿಂಗ್ ಸಮಿತಿ ಮಾ.28 ರಂದು ಜಿ.ಪರಮೇಶ್ವರ್, ಸಿದ್ದರಾಮಯ್ಯ ಅವರೊಂದಿಗೆ ರಾಜ್ಯ ಚುನಾವಣೆ ಸಮಿತಿಯ ಪಟ್ಟಿ ಅವಲೋಕಿಸಿ ಅಂತಿಮ ಪಟ್ಟಿಯನ್ನು ಹೈಕಮಾಂಡ್ಗೆ ಸಲ್ಲಿಸಲಿದೆ.
ಎಐಸಿಸಿ ರಚಿಸಿದ್ದ 44 ನಾಯಕರನ್ನೊಳಗೊಂಡ ತಂಡವನ್ನು ನಾಲ್ಕು ವಿಭಾಗ ವಾಗಿ ವಿಭಜಿಸಿ ಮೊದಲ ಹಂತದಲ್ಲಿ ಜರಡಿ ಹಿಡಿಯುವ ಕೆಲಸ ಮಾಡಲಾಯಿತು. 224 ಕ್ಷೇತ್ರಗಳ ಪೈಕಿ ಕಳೆದ ಬಾರಿ ಪಕ್ಷ ಸೋತ ಕ್ಷೇತ್ರಕ್ಕೆ 3ರಿಂದ 5 ಮಂದಿಯ ಹೆಸರನ್ನು ಅಂತಿಮಗೊಳಿಸಲು ಈ ತಂಡಗಳಿಗೆ ಸೂಚಿಸಲಾಯಿತು. ಬೆಂಗಳೂರು ವಿಭಾಗದ ವಿಧಾನಸಭೆ ಕ್ಷೇತ್ರಗಳ ಆಯ್ಕೆಗೆ ಡಿ.ಕೆ.ಶಿವಕುಮಾರ್, ಮೈಸೂರು ವಿಭಾಗಕ್ಕೆ ದಿನೇಶ್ ಗುಂಡೂರಾವ್, ಬೆಳಗಾವಿ ವಿಭಾಗಕ್ಕೆ ಎಸ್.ಆರ್.ಪಾಟೀಲ್ ಹಾಗೂ ಕಲಬುರಗಿ ವಿಭಾಗಕ್ಕೆ ಬಿ.ಕೆ.ಹರಿಪ್ರಸಾದ್ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ಆಯಾ ವಿಭಾಗದ ಮುಖ್ಯಸ್ಥರು ಉಳಿದ ಸದಸ್ಯರಿಂದ ಮಾಹಿತಿಯನ್ನ ಸಂಗ್ರಹಿಸಿದರು. ಯಾವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು? ಅಭ್ಯರ್ಥಿಯ ಧನಾತ್ಮಕ ಅಂಶವೇನು? ಋಣಾತ್ಮಕ ವಿಚಾರವೇನು? ಕಳೆದ ಬಾರಿ ಆ ಕ್ಷೇತ್ರದ ಸ್ಥಿತಿಗತಿ ಏನಾಗಿತ್ತು? ಯಾರು ಎಷ್ಟು ಮತಗಳಿಂದ ಗೆಲುವು ಸಾಧಿಸಿದ್ದರು? ಹೀಗೆ ಎಲ್ಲ ವಿಭಾಗದಲ್ಲೂ ಅಭ್ಯರ್ಥಿಯ ಮಾಹಿತಿಯನ್ನು ಸಂಗ್ರಹಿಸಿತು.