ಶ್ರೀರಾಮಚಂದ್ರಾಪುರಮಠ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಇತಿಹಾಸ ಸೃಷ್ಟಿಸಿದೆ.
401 ಲೋಡ್(3228 ಟನ್) ಮೇವುನ್ನು 20 ಮೇವು ವಿತರಣೆ ಕೇಂದ್ರಗಳಲ್ಲಿ ವಿತರಣೆ ಮಾಡಿದೆ.ಈ ಬಗ್ಗೆ ಸಮಗ್ರ ಮಾಹಿತಿ ಸಮಸ್ತ ಶಿಷ್ಯ ಭಕ್ತ ಸಮಾಜಕ್ಕೆ ಮಾಧ್ಯಮ ವಿಭಾಗ, ಶ್ರೀರಾಮಚಂದ್ರಾಪುರಮಠ ಸಂಪೂರ್ಣ ವಿವರ ನೀಡಿದೆ.
ಪ್ರಮುಖ ಮಾಹಿತಿಗಳು.
ವಿತರಣೆ ಆರಂಭ : 03-04-2017
68 ದಿನಗಳು, ಅಂದರೆ 09-06-2017 ರ ವರೆಗೆ
ಮೇವು ವಿತರಣೆ ಕೇಂದ್ರಗಳು : 20
401 ಲೋಡ್ ಮೇವು
3228 ಟನ್ ಮೇವು
7,17,300 ಗೋಗ್ರಾಸ
ಏನೇನು ಮೇವು ? : ಹಸಿರು ಜೋಳದ ಹುಲ್ಲು, ಹಸಿರು ರಾಗಿ ಹುಲ್ಲು, ಕಬ್ಬು, ಅಡಿಕೆ ಹಾಳೆ, ಧಾನ್ಯಾಂಕುರ (ಹೈಡ್ರೋಫೋನಿಕ್ ಹುಲ್ಲು)
ಅಡಿಕೆ ಹಾಳೆ ಹುಡಿ : 4.5 ಟನ್
ಧಾನ್ಯಾಂಕುರ : 01-06-2017 ರಿಂದ ಆರಂಭ
ಗೋಪ್ರಾಣಭಿಕ್ಷಾ – ಮಹದಾಂದೋಲನದ ಅವಲೋಕನ
ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಬರಗಾಲದಿಂದ ತತ್ತರಿಸಿ ಲಕ್ಷಾಂತರ ದೇಸೀ ಗೋವುಗಳು ಮೇವಿಲ್ಲದೆ ಸಾಯುವುದನ್ನು ಗಮನಿಸಿದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಚಾರ್ಯ ಶ್ರೀ ರಾಮಚಂದ್ರಾಪುರ ಮಹಾಸಂಸ್ಥಾನದ ಶ್ರೀಮದ್ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ಗೋಪ್ರಾಣಭಿಕ್ಷಾ ಹೆಸರಿನಲ್ಲಿ ಸಮಾಜದಿಂದ ಸಂಪನ್ಮೂಲ ಸಂಗ್ರಹಿಸಿ ಮೇವು ವಿತರಿಸುವ ಮಹತ್ಕಾರ್ಯ ಆರಂಭಿಸಿದ್ದರು.
ಪ್ರತಿದಿನವೂ ಸುಮಾರು 22 ಸಾವಿರ ಹಸುಗಳಿಗೆ 68 ದಿನಗಳ ಕಾಲ ಸತತ ಮೇವು ವಿತರಿಸಿದ್ದು, 401 ಲೋಡ್ ಅಂದಾಜು 1.25 ಕೋಟಿ ವೆಚ್ಚದಲ್ಲಿ ಸುಮಾರು 3228 ಟನ್ ಮೇವನ್ನು 20 ಕೇಂದ್ರಗಳಲ್ಲಿ ನೀಡಲಾಗಿದೆ. ದ.ಕ., ಉ.ಕ., ಶಿವಮೊಗ್ಗ ಜಿಲ್ಲೆಗಳಿಂದ 4.5 ಟನ್ ಹಾಳೆಯ ಹುಡಿಯನ್ನು ತಯಾರಿಸಿ, ವಿತರಿಸಲಾಗಿದೆ.
ಇತಿಹಾಸ :
ಮಠವೊಂದು ಗೋ ಸಂರಕ್ಷಣೆಗಾಗಿ ಇಂತಹ ಅತ್ಯಪೂರ್ವ ಸಾಧನೆ ಮಾಡಿರುವುದು ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ. ಗೋವಿಗಾಗಿ ಮಿಡಿದು, ಗೋಸಂರಕ್ಷಣೆ ಹೀಗೆ ಮಾಡಬಹುದು ಎಂದು ಅಪೂರ್ವ ದಾಖಲೆ ಸೃಷ್ಟಿಸಿರುವುದು ಶ್ರೀಮಠದ ಹೆಗ್ಗಳಿಕೆಯಾಗಿದೆ. ಸರಕಾರ ಸ್ಪಂದಿಸದೇ ಇದ್ದಾಗ, ಆ ಕಾರ್ಯಕ್ಕೆ ಮುಂದಾಗಿ, ಗೋವಿಗಾಗಿ ಮಿಡಿದಿರುವ ಶ್ರೀರಾಮಚಂದ್ರಾಪುರಮಠ ನೈಜ ಅರ್ಥದಲ್ಲಿ ಗೋಸಂರಕ್ಷಣೆಯನ್ನು ಮಾಡಿದೆ. ಸರಕಾರ ರಾಮಾಪುರದಲ್ಲಿ ನಿರ್ಮಿಸಿದ ಗೋಶಾಲೆಯ ಅವ್ಯವಸ್ಥೆಯನ್ನು ಗಮನಿಸಿದ ಶ್ರೀಮಠ ಯಾವುದೇ ಬಂಡವಾಳವಿಲ್ಲದೆ ಮೇವು ವಿತರಣೆಯ ಕಾರ್ಯಕ್ಕೆ ಕೈಹಾಕಿತ್ತು.
ನಿತ್ಯವೂ 90 ಟನ್‌ಗಳಿಗೂ ಅಧಿಕ ಹಸಿ ಮೇವು :
ರಾಘವೇಶ್ವರಶ್ರೀಗಳ ಸಂಕಲ್ಪ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಚಾರದಿಂದ ಸಮಾಜದ ಪ್ರತಿಯೊಬ್ಬರೂ ಗೋಸೇವೆಯ ವಿಶಿಷ್ಟ ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಪರಿಣಾಮವಾಗಿ ಪ್ರಾರಂಭದಲ್ಲಿ ಎರಂಬಾಡಿಯ ಒಂದು ಕೇಂದ್ರದ ಮೂಲಕ ವಿತರಣೆಯಾಗುತ್ತಿದ್ದ ಮೇವು ವಿತರಣೆ ಸುಮಾರು 20 ಕೇಂದ್ರಗಳಗೆ ವ್ಯಾಪಿಸಿತು. ಈ ಕೇಂದ್ರಗಳಲ್ಲಿ ನಿತ್ಯವೂ ಸುಮಾರು 90 ಟನ್‌ಗಳಿಗೂ ಅಧಿಕ ಹಸಿ ಮೇವು ವಿತರಿಸಲಾಗಿದೆ.
ಎರಂಬಾಡಿ, ಕೌದಳ್ಳಿ, ಗುಂಡಾಪುರ, ಪಚ್ಚೆದೊಡ್ಡಿ, ನಾಲ್ ರೋಡ್, ನಕ್ಕುಂಡಿ, ಮೀಣ್ಯಂ, ಕೆ.ವಿ.ಎನ್ ದೊಡ್ಡಿ, ಎಂ.ಟಿ.ದೊಡ್ಡಿ, ಕೆಂಪಯ್ಯನ ಹಟ್ಟಿ, ಪುದುನಗರ, ಪೆದ್ದನಪಾಳ್ಯ, ದೀನಳ್ಳಿ, ಮಾರಳ್ಳಿ, ಚೆನ್ನೂರು, ದೊರೆದೊಡ್ಡಿ, ಹಳೆಯೂರು (ಮಲೆಮಹದೇಶ್ವರ ಬೆಟ್ಟ) ಮುಡುಪಟ್ಟಿ(ಗೋಪಿನಾಥಂ) ಭಾಗದಲ್ಲಿ ಬೇಡಿಕೆಯ ಅನುಸಾರ ಸ್ಥಳೀಯ ರೈತರಿಂದ ಪಡೆದ ಜೋಳ, ಕಬ್ಬಿನ ದಂಟಿನ ಹಸಿ ಮೇವು ಹಾಗೂ ಸ್ವಲ್ಪ ಪ್ರಮಾಣದಲ್ಲಿಒಣ ಮೇವಿನ ವಿತರಣೆ ನಡೆದಿದೆ.
ರೈತರಿಗೂ ಸಹಾಯ:
ಚಾಮರಾಜನಗರ ಹಾಗೂ ಪಕ್ಕದ ಜಿಲ್ಲೆಗಳ ರೈತರು ಜೋಳ ಭಿತ್ತಿದರೂ ಮಳೆಯಿಲ್ಲದೆ ಸರಿಯಾದ ಬೆಳೆ ಪಡೆಯದೆ ಕಷ್ಟದಲ್ಲಿದ್ದರು. ಮೇವಿನ ವಿತರಣೆ ಅಗತ್ಯ ಮೇವಿಗಾಗಿ ಈ ಭಾಗದ ರೈತರ ಸಂಪರ್ಕ ಮಾಡಲಾಯಿತು. ಆಗ ನಷ್ಟದಲ್ಲಿದ್ದ ರೈತರು ಜೋಳದ ದಂಟನ್ನು ಕೊಡಲು ಒಪ್ಪಿದರು. ಆ ಭಾಗದ ರೈತರಿಗೆ ಇದರಿಂದ ತಮ್ನ ದಂಟಿಗೆ ಒಳ್ಳೆ ಬೆಲೆ ಸಿಕ್ಕಿ ಅವರು ಆದಾಯ ಪಡಕೊಂಡರು.
ಈಡೇರಿದ ಸಂಕಲ್ಪ:
ಶೂನ್ಯ ಬಂಡವಾಳದ ಮೂಲಕ ಬೆಟ್ಟದ ಹಸುಗಳಿಗೆ ಮೇವು ಒದಗಿಲು ಆರಂಭಿಸಿದ ಮಠಕ್ಕೆ ಶಿಷ್ಯ, ಭಕ್ತರಿಂದ ಉತ್ತಮ ಸಹಕಾರ ದೊರೆತಿದೆ. ಸಿದ್ದಗಂಗಾ ಮಠದ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ 110ನೇ ಜನ್ಮದಿನದ ನೆನಪಿನಲ್ಲಿ 110 ಲೋಡ್ ಮೇವು ವಿತರಣೆಯ ಸಂಕಲ್ಪ ಹಾಗೂ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ 24ನೇ ಯೋಗ ಪಟ್ಟಾಭಿಷೇಕದ(ಸನ್ಯಾಸಗ್ರಹಣ) ಅಂಗವಾಗಿ 24 ಲೋಡ್ ಮೇವು ವಿತರಣೆಯ ಘೋಷಣೆ ಶ್ರೀಗಳಿಂದ ನಡೆದಿತ್ತು. ಈ ಎರಡೂ ಸಂಕಲ್ಪಗಳು ಪೂರ್ಣಗೊಂಡಿವೆ.
7,17,300 ಗೋಗ್ರಾಸ :
ಮಠದ ಕಾರ್ಯಕರ್ತರ ಜತೆಗೆ ಸ್ಥಳೀಯ ಮುಖಂಡರು ಮೇವು ಹಂಚಿಕೆಯ ವಿಚಾರದಲ್ಲಿ ಸಹಕರಿಸಿದ್ದಾರೆ ಮಠದ ವತಿಯಿಂದ ಸುಮಾರು ನಿತ್ಯ 15ರಿಂದ 20 ಮಂದಿ ಗೋಕಿಂಕರರು ಮೇವನ್ನು ಕೇಂದ್ರಗಳಿಗೆ ವಿತರಿಸಲು ಹಗಲಿರುಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ 7,17,300 ಗೋಗ್ರಾಸವನ್ನು ವಿತರಿಸಲಾಗಿದೆ.
ಹಾಲಲ್ಲ, ಸೆಗಣಿ ಮಾರಾಟ :
ಲಕ್ಷಾಂತರ ಗೋವುಗಳು ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲ ಹಳ್ಳಿಗಳಲ್ಲಿ ಇದ್ದರೂ, ಹಾಲಿನ ಬಳಕೆ ಮಾಡುತ್ತಿಲ್ಲ. ಸೆಗಣಿಯನ್ನು ಮಾರಾಟ ಮಾಡುವುದರಿಂದ ಬರುವ ಆದಾಯದ ಮೂಲಕ ಗೋ ಆಧಾರಿತ ಜೀವನವನ್ನು ಈ ಭಾಗದ ರೈತರು ಅನುಸರಿಸುತ್ತಿದ್ದರು. ದೇಶೀ ಗೋವುಗಳೇ ಹೆಚ್ಚಿರುವುದರಿಂದ ಕೇಂದ್ರ ಸರಕಾರ ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಧಾನ್ಯಾಂಕುರ ಘಟಕ:
ರಾಮಾಪುರದಲ್ಲಿ ಗೋವುಗಳಿಗೆ ಹಸಿ ಮೇವು ನೀಡುವ ಉದ್ದೇಶದಿಂದ ಜೋಳದ ಮೊಳಕೆ ಒಡೆಸಿ ಸಣ್ಣ ಸಸಿಯಾಗಿಸುವ ಧಾನ್ಯಾಂಕುರ ಘಟಕ ಆರಂಭಿಸಲಾಗಿದ್ದು ಆ ಮೂಲಕವೂ ಮೇವು ಒದಗಿಸಲಾಗುತ್ತಿದೆ. 5×6 ಅಡಿಯ ಸೆಟ್ ನಿರ್ಮಾಣ ಮಾಡಲಾಗಿದ್ದು, 50 ಯುನಿಟ್ ಗಳು ಸುಮಾರು 60×70 ಅಡಿ ಶೆಡ್‌ನಲ್ಲಿ ಇದೆ. ಒಂದು ಯುನಿಟ್ ನಲ್ಲಿ 72 ಟ್ರೇಗಳಿದ್ದು, ಒಂದು ಟ್ರೇನಲ್ಲಿ 450 ಗ್ರಾಂ ಜೋಳ ಬಳಸಲಾಗುತ್ತಿದೆ. ಒಟ್ಟು 2 ಟನ್ ಮೇವು ಉತ್ಪಾದನೆಯ ಸಾಮರ್ಥ್ಯ ಹೊಂದಿದ್ದು, ಸದ್ಯ 100ಕೆ ಜಿ ಜೋಳಬಳಸಿ 1 ಟನ್ ಮೇವು ಉತ್ಪಾದಿಸಲಾಗುತ್ತಿದೆ.
ಮೂರು ವರ್ಷದ ಬಳಿಕ ಮಳೆ!
ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ಇದರಿಂದ ಉತ್ತಮ ಬೆಳೆ ಬೆಳೆಯದೆ ಲಕ್ಷಾಂತರ ಹಸುಗಳಿಗೆ ಮೇವು ಪೂರೈಸಲಾಗದ ಪರಿಸ್ಥಿತಿ ಈ ಭಾಗದ ಗೋಪಾಲಕರಿಗೆ ಬಂದೊದಗಿತ್ತು. ಗೋವುಗಳಿಗೆ ಮೇವು ಪೂರೈಕೆಯಾಗಿ ಹೊಟ್ಟೆ ತುಂಬುತ್ತಿದ್ದಂತೆ ಮಹದೇಶ್ವರಸ್ವಾಮಿಯೂ ಸಂತೃಪ್ತನಾಗಿ ಈ ಭಾಗಕ್ಕೆ ಮಳೆಗೆರೆಯುತ್ತಿದ್ದಾನೆ ಎಂಬುದು ಈ ಭಾಗದ ಜನರ ನಂಬಿಕೆಯಾಗಿದೆ.
ಸಂಚಾರಿ ಗೋಚಿಕಿತ್ಸಾಲಯ :
ಶ್ರೀಮಠದ ವತಿಯಿಂದ ಬೆಟ್ಟದ ತಪ್ಪಲಿನ ಅನಾರೋಗ್ಯ ಪೀಡಿತ ಗೋವುಗಳ ರಕ್ಷಣೆಗೆ ಸಂಚಾರಿ ಗೋಚಿಕಿತ್ಸಾಲಯ ತೆರೆಯುವ ಮೂಲಕ ವಿಶೇಷ ಪ್ರಯತ್ನ ಮಾಡಲಾಗಿದೆ. ಹಳ್ಳಿಗೆ ಹಳ್ಳಿಗೆ ನುರಿತ ತಜ್ಞ ವೈದ್ಯರ ತಂಡ ಭೇಟಿ ನೀಡಿ ಗೋವಿನ ರಕ್ಷಣೆಗೆ ಪಣತೊಟ್ಟಿದೆ. ಡಾ. ವೈ.ವಿ.ಕೃಷ್ಣಮೂರ್ತಿ, ಡಾ. ಜಯಪ್ರಕಾಶ್ ಲಾಡ, ಡಾ. ಬಿರಾದಾರ್, ಕಾದಾ ಕೃಷ್ಣರಾಜ್ ಮೂಡಿಗೆರೆ ಇವರ ತಂಡ ಭಾಗವಹಿಸಿ, ನಿತ್ಯ 20ಕ್ಕೂ ಗೋವುಗಳಿಗೆ ಚಿಕಿತ್ಸೆಯನ್ನು ನೀಡಿದೆ. ಒಟ್ಟು 580ಕ್ಕೂ ಹೆಚ್ಚು ಗೋವುಗಳಿಗೆ ಮೇವು ನೀಡುತ್ತಿದ್ದ ಕೇಂದ್ರ ಹಾಗೂ ಹೊರಗಿನ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಇದಕ್ಕಾಗಿ ಮಡಿಕೇರಿ ಪುರುಷೋತ್ತಮ 20 ಸಾವಿರ ರೂ., ಡಾ. ಬಾದಮೀ ಸಕಲೇಶಪುರ 6 ಸಾವಿರ ರೂ., ಕಾದಾ ಕೃಷ್ಣರಾಜ ಮೂಲಕ 5 ಸಾವಿರ ರೂ ವೆಚ್ಚದ ಔಷಧ ನೀಡಿದ್ದಾರೆ.
ಮೂರನೇ ಬಾರಿ ಭೇಟಿ:
ಗೋವುಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದೆಂದು ನಿರಂತರವಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿರುವ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಬೆಟ್ಟದ ಭಾಗಕ್ಕೆ 6 ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಭೇಟಿ ನೀಡಿದ್ದಾರೆ. ಜೂ.9ರಂದು ನೀಡಿದ ಮೂರನೇ ಭೇಟಿಯಲ್ಲಿ ರೈತರೊಡನೆ ವಿಶೇಷ ಸಂವಾದ ಮಾಡಿ ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಬೆಟ್ಟ ನಮಗೆ ಬಿಡಿ ಆಂದೋಲನದ ಹೋರಾಟಕ್ಕೆ ಮಲೆಮಹದೇಶ್ವರ ಬೆಟ್ಟದ ಭಾಗಕ್ಕೆ ಆಗಮಿಸಿದ ಶ್ರೀಗಳು, ಹಸುಗಳು ಸಾಯುತ್ತಿರುವ ವಿಚಾರವನ್ನು ಗಮನಿಸಿ ರೈತರ ಜತೆ ಸಂವಾದ ನಡೆಸುವ ನಿಟ್ಟಿನಲ್ಲಿ ಮತ್ತೆ ಬೆಟ್ಟಕ್ಕೆ ಆಗಮಿಸಿ ಮೇವು ವಿತರಣ ಕೇಂದ್ರಗಳನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೂ.9ರಂದು ಧಾನ್ಯಾಂಕುರ ಘಟಕಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಗೋಚಿಕಿತ್ಸೆ ಮುಂದುವರಿಕೆ :
ಬೆಟ್ಟದ ತಪ್ಪಲಿನಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಒಣಗಿಹೋಗಿದ್ದ ಗಿಡಗಂಟೆಗಳು ಚಿಗುರಿ ಹಸಿರಾಗುತ್ತಿದೆ. ಗೋವುಗಳು ಬೆಟ್ಟದ ತಪ್ಪಲಿನಲ್ಲಿ ಸಚ್ಛಂದವಾಗಿ ಮೇಯುತ್ತಿವೆ. ಕೆಲವು ಕಡೆಗಳಲ್ಲಿ ಧಾನ್ಯಾಂಕುರದ ಹಸಿ ಮೇವು ನೀಡಲಾಗುತ್ತಿದೆ. ಗೋಚಿಕಿತ್ಸೆ ಮುಂದುವರಿಯುವ ಜತೆಗೆ 1 ಕೋಟಿ ವೆಚ್ಚದ ಬಂಡವಾಳದಲ್ಲಿ 5 ಸಾವಿರ ಕೆಜಿ ಸೆಗಣಿ ಬಳಸಿಕೊಂಡು ಗೋಬರ್ ಗ್ಯಾಸ್, ವಿದ್ಯುತ್ ಉತ್ಪಾದನೆ, ಎರೆಗೊಬ್ಬರ, ಸಾವಯವ ಸೆಗಣಿ ಗೊಬ್ಬರ ಸೇರಿ ವಿವಿಧ ಗವ್ಯೋದ್ಯಮದ ಕೆಲಸದ ಕಾರ್ಯಗಳು ಶ್ರೀಮಠದ ಕಾಮದುಘಾ ಯೋಜನೆಯಡಿಯಲ್ಲಿ ರಾಮಾಪುರ ಸಮೀಪದ ಕೆಂಪಯ್ಯನಹಟ್ಟಿಯಲ್ಲಿ ದಾನಿ ರಾಜೇಂದ್ರರವರು ನೀಡಿದ ಸ್ಥಳದಲ್ಲಿ ಆರಂಭಗೊಳ್ಳಲಿವೆ.
ಸ್ಥಳೀಯರ ಅಭಿಪ್ರಾಯ :
ಸರಕಾರದ ಕಡೆಗೆ ಮೇವು ವಿತರಿಸಲು ಮನವಿ ಮಾಡಲಾಗಿತ್ತು. ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ರಾಮಚಂದ್ರಾಪುರ ಮಠದವರು ಮೇವು ವಿತರಿಸುವ ಕಾರ್ಯ ಆರಂಭಿಸದೇ ಹೋಗಿದ್ದಲ್ಲಿ ಹಸುಗಳ ಸಾವಿನ ಸಂಖ್ಯೆ ಹೆಚ್ಚುತ್ತಿತ್ತು. ಸರಕಾರ ಕೊಡುವ ಒಣ ಮೇವು ಎಂಟು ದಿನ ಮೇಯುವುದಕ್ಕಿಂತ, ಮಠ ಪೂರೈಸುವ ಹಸಿ ಮೇವು ಒಂದು ದಿನ ಮೇಯುವುದರಿಂದ ಉತ್ತಮ ಪೌಷ್ಟಿಕಾಂಶ ಸಿಗುತ್ತಿದೆ. ಸ್ವಾಮೀಜಿಯವರ ಮೂಲಕ ಮೇವು ಪೂರೈಕೆಯಾದ ಬಳಿಕ ಹಸುಗಳು ಸಾಯಲಿಲ್ಲ. ಈಗ ಸಾಕಷ್ಟು ಮಳೆಯಾಗಿ ಮೇವು ಬೆಳೆದಿರುವುದರಿಂದ ಹೊರಗಿನ ಮೇವಿನ ಅವಶ್ಯಕತೆ ಇರುವುದಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ಗೋವಿಗಾಗಿ ಹಲವು ಆಂದೋಲನಗಳು ನಡೆದಿವೆ. ಅವುಗಳೆಲ್ಲವಕ್ಕೂ ಕಲಶಪ್ರಾಯವಾಗಿ ನಿಲ್ಲುವುದು. ‘ಗೋಪ್ರಾಣಭಿಕ್ಷಾ’. ಇದು ಕ್ಲಪ್ತ ಕಾಲದಲ್ಲಿ ಮರಣಕಾಲದಲ್ಲಿದ್ದ ಅತೀ ಹೆಚ್ಚು ಗೋವುಗಳ ಸಂರಕ್ಷಣೆಗಾಗಿ ಮಾಡಿದ ಮಹದಾಂದೋಲನವಾಗಿದೆ. ಈ ಮೂಲಕ ಶ್ರೀರಾಮಚಂದ್ರಾಪುರಮಠವು, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಂಕಲ್ಪ ಶಕ್ತಿ, ಮತ್ತು ಮಾರ್ಗದರ್ಶನದಲ್ಲಿ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳ ಜೀವ ಉಳಿಸಿ ಸಹಸ್ರಾರು ಜನರ ಮೆಚ್ಚುಗೆಗೆ ಪಾತ್ರವಾಗಿದೆ.