ದೇವಸ್ಥಾನವೆಂದರೆ ಅಲ್ಲಿ ದೇವರ ವಿಗ್ರ ಇರುತ್ತದೆ, ಅದಕ್ಕೆ ಅಲಂಕಾರ ಮಾಡಿ ಪೂಜೆ – ಪುನಸ್ಕಾರಗಳು ನಡೆಯುತ್ತಾ ಇರುತ್ತವೆ. ಆದರೆ ದೇವಸ್ಥಾನಗಳ ತವರೂರಾದ ಭಾರತದಲ್ಲಿ ಹಲವು ವಿಶಿಷ್ಟ, ವಿಚಿತ್ರ, ರಹಸ್ಯ ಮಂದಿರಗಳಿವೆ. ಅಂಥಹುದೇ ಒಂದು ವಿಶಿಷ್ಟ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ;
ಈ ಮಂದಿರದ ಹೆಸರು ‘ಜ್ವಾಲಾ ಮಂದಿರ’ ಇದು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎನ್ನುವ ಪ್ರದೇಶದಲ್ಲಿದೆ. ಇಲ್ಲಿ ಜ್ವಾಲಾ ಎನ್ನುವ ದೇವಿಗೆ ಪೂಜೆ ನಡೆಯುತ್ತದೆ. ಜ್ವಾಲಾ ದೇವಿ ಎಂದರೆ ಇಲ್ಲಿ ಪೂಜೆ ನಡೆಯುವುದು ‘ನೀಲಿ ಬಣ್ಣದ ಜ್ವಾಲೆ’. ಈ ಜ್ವಾಲೆಗೆ ಇಲ್ಲಿ ದೇವರ ಮೂರ್ತಿಗೆ ಪೂಜೆ ನಡೆಯುವಂತೆಯೇ ಸಕಲ ಪೂಜಾ ಪುನಸ್ಕಾರಗಳು ನಡೆಯುತ್ತದೆ.
ಈ ‘ಜ್ವಾಲೆ’ ಬಂಡೆಗಳ ಮಧ್ಯದಿಂದ ಉದ್ಭವವಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಇದು ಒಂದೇ ಕಡೆ ಮಾತ್ರವಲ್ಲದೆ, ದೇವಾಲಯದ ಹಲವು ಕಡೆ ಕಾಣಸಿಗುತ್ತದೆ. ಈ ಬಗ್ಗೆ ವಿಜ್ಞಾನ ಹಲವು ಸಂಶೋಧನೆಗಳನ್ನು ನಡೆಸಿದರೂ ಈ ಜ್ವಾಲೆ ಎಲ್ಲಿಂದ, ಹೇಗೆ ಸೃಷ್ಟಿಯಾಗುತ್ತದೆ ಎಂದು ಕಂಡುಹಿಡಿಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಇತಿಹಾಸದ ಪ್ರಕಾರ ಆಗಿನ ಮೊಗಲ್ ದೊರೆ ಅಕ್ಬರ್ ಈ ಜ್ವಾಲೆಯನ್ನು ನಂದಿಸಲು, ಕಬ್ಬಿಣದ ಪಟ್ಟಿಯನ್ನು ಅದರ ಮೇಲಿಡಲು ಪ್ರಯತ್ನಿಸಿದರು, ಅಲ್ಲದೆ, ನೀರು ಹಾಕಿದರೂ ಅದು ನಂದಿ ಹೋಗಲಿಲ್ಲವಂತೆ. ಹಾಗಾಗಿ ಇದಕ್ಕೆ ತುಂಬಾ ಶಕ್ತಿಯಿದೆ ಎಂದು ಮೊಗಲರು ಕೂಡ ನಂಬುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ.
ಇದರ ಹಿಂದಿನ ಕಥೆಯೇನು?
ಶಿವನ ಪತ್ನಿಯಾದ ಸತಿಯು ತನ್ನ ತಂದೆ ಪತಿಯನ್ನು ಅವಮಾನ ಮಾಡಿದ ಕಾರಣಕ್ಕೆ ಅಗ್ನಿಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತಾಳೆ. ಆಗ ಕೋಪೋದ್ರೇಕಗೊಂಡ ಈಶ್ವರನು ಪತ್ನಿಯ ಸುಟ್ಟ ದೇಹವನ್ನು ತನ್ನ ಹೆಗಲ ಮೇಲಿಟ್ಟು ರುದ್ರತಾಂಡವ ಮಾಡಲು ಪ್ರಾರಂಭಿಸಿದನು. ಆ ಸಂದರ್ಭದಲ್ಲಿ ಸತಿಯ ದೇಹವು ಹಲವು ಭಾಗಗಳಾಗಿ ಒಂದೊಂದು ಭಾಗ ಭೂಮಿಯ ಒಂದೊಂದು ಭಾಗದಲ್ಲಿ ಹೋಗಿ ಬಿದ್ದಿದೆ ಅದು ಈಗ ಶಕ್ತಿಪೀಠವಾಗಿ ಪ್ರತೀತಿ ಪಡೆದಿದೆ.
ಅದರಲ್ಲಿ ಸತಿಯ ನಾಲಿಗೆ ಈ ಜಾಗದಲ್ಲಿ ಬಿದ್ದಿದ್ದು, ಅದು ನೀಲಿ ಜ್ವಾಲೆಯಾಗಿ ಪರಿವರ್ತಿತಗೊಂಡಿದೆ ಎಂದು ಹೇಳಲಾಗುತ್ತದೆ. ಈ ಜ್ವಾಲೆಗೆ ಮೊದಲು ರಾಜ ಭೂಮಿ ಚಂದ್ರ ಎಂಬುವವರು ದೇವಸ್ಥಾನ ನಿರ್ಮಿಸಿದ್ದು, ನಂತರ ಪಾಂಡವರು ಬಂದು ಅದನ್ನು ಪುನರ್ ನಿರ್ಮಾಣ ಮಾಡಿದರು ಎಂದು ಪುರಾಣದಲ್ಲಿ ಹೇಳಲಾಗಿದೆ.