ಯಲ್ಲಾಪುರ ; ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅತ್ಯಂತ ಪ್ರಖ್ಯಾತವಾಗುತ್ತಿರುವ ಯಲ್ಲಾಪುರದ ಯುಗಾದಿ ಶೋಭಾಯಾತ್ರೆಗೆ ಪಟ್ಟಣದಲ್ಲಿ ಭಾರಿ ಸಿದ್ಧತೆಯಿಂದ ಹಿಂದೂ ಸಂಘಟನೆಯ ಯುವಕರು ಹಾಗೂ ಯುಗಾದಿ ಉತ್ಸವ ಸಮಿತಿ ತೊಡಗಿಸಿಕೊಂಡಿವೆ.
ಮಾರ್ಚ್ 18ರಂದು ಮಧ್ಯಾಹ್ನ ಕೋಟೆಕರಿಯಮ್ಮ ದೇವಸ್ಥಾನ ದಿಂದ ಹೊರಟು ನಗರದ ಎಲ್ಲ ಬೀದಿಗಳಲ್ಲೂ ಸುತ್ತುವರೆದು ಸಂಚರಿಸುವ ಶೋಭಾಯಾತ್ರೆಯಲ್ಲಿ ಅತಿ ಹೆಚ್ಚು ಜನರನ್ನು ಆಕರ್ಷಿಸಲು ಪಟ್ಟಣದ ತುಂಬೆಲ್ಲ ಕೇಸರಿ ಪತಾಕಿಗಳಿಂದ ಸಿಂಗರಿಸಲಾಗಿದೆ. ರಸ್ತೆಯ ಅಕ್ಕ ಪಕ್ಕದಲ್ಲಿ ಯುಗಾದಿ ಶುಭಕೋರುವ ಹಾಗೂ ಸ್ವಾಗತಿಸುವ ಬ್ಯಾನರ್ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಶೋಭಾಯಾತ್ರೆಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಇಂದು ಮಾರ್ಚ್ 15ರಂದು ಮಧ್ಯಾಹ್ನ ಬೈಕ್ ರ‌್ಯಾಲಿ ಕೂಡ ಆಯೋಜಿಸಲಾಗಿದೆ. ಸುಮಾರು 3,000 ದಿಂದ 5,000 ವರೆಗೆ ಬೈಕ್ ಸವಾರರು ರ‌್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಹಿಂದೂ ಸಂಘಟನೆಯ ಯುವಕರು ಹಾಗೂ ಯುಗಾದಿ ಉತ್ಸವ ಸಮಿತಿಯ ಸ್ವಯಂ ಸೇವಕರು ರಾತ್ರಿ ಹಗಲೆನ್ನದೆ ಯಲ್ಲಾಪುರದ ಬೀದಿಗಳಲ್ಲಿ ಕೆಸರಿಕರಣದೊಂದಿಗೆ ಸಿಂಗಾರಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಕೂಡ ತಮ್ಮ ತಮ್ಮ ನಮ್ಮ ಪ್ರದೇಶದ ಇಕ್ಕೆಲಗಳಲ್ಲಿ ಕಸಕಡ್ಡಿಗಳನ್ನು ಹೆಕ್ಕಿ ಬದಿಗೆ ಸರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಸಂಚಾಲಕ ಯೋಗೇಶ ಹಿರೇಮಠ, ಖಜಾಂಚಿ ಪ್ರದೀಪ ಯಲ್ಲಾಪುರಕರ, ಸೋಮೇಶ್ವರ ನಾಯ್ಕ, ಸಮಿತಿಯ ಮಹಿಳಾ ಪ್ರಮುಖರಾದ ನಮಿತಾ ಬೀಡಿಕರ, ಶೋಭಾ ಹುಲ್ಮನಿ, ರಾಧಾ ಗುಡಿಗಾರ, ಇನ್ನೂ ಅನೇಕ ಜನ ಕಳೆದ ಹತ್ತಾರು ದಿನಗಳಿಂದ ಯುಗಾದಿ ಉತ್ಸವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಹಿರಿಯರಾದ ರವಿ ಶಾನಭಾಗ, ಬಾಲಕೃಷ್ಣ ನಾಯಕ ಮುಂತಾದವರು ಮಾರ್ಗದರ್ಶನ ಮಾಡುತ್ತಿದ್ದಾರೆ.
ಕಳೆದ ತಿಂಗಳಷ್ಟೇ ಯಲ್ಲಾಪುರದ ಶ್ರೀ ಗ್ರಾಮದೇವಿ ಜಾತ್ರೆ 9 ದಿನಗಳ ಕಾಲ ವಿಜೃಂಭಣೆಯಿಂದ ನಡೆದು ಯಲ್ಲಾಪುರದ ಜನತೆಯಲ್ಲಿ ಉತ್ಸಾಹ ಇಮ್ಮಡಿ ಗೊಳಿಸಿತ್ತು, ವರ್ಷದ ಜಾತ್ರೆಯಲ್ಲಿ ಹೋಲುವ ಯುಗಾದಿ ಉತ್ಸವ ಶೋಭಾಯಾತ್ರೆ, ಜಾತ್ರೆ ಮುಗಿದು ತಿಂಗಳಾವಧಿಯಲ್ಲಿ ಬಂದಿರುವುದು ಯಲ್ಲಾಪುರಿಗರಲ್ಲಿ ಇನ್ನಷ್ಟು ಉತ್ಸಾಹ ಹೆಚ್ಚಲು ಕಾರಣವಾಗಿದೆ.