ಕುಮಟಾ: ತಾಲೂಕಿನ ಗೋಕರ್ಣದ ಬಿಜ್ಜೂರಿನಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 9 ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ಗಳ ಜೊತೆಗೆ ಉಚಿತವಾಗಿ ಲೈಟರಗಳನ್ನು ಸಹ ವಿತರಿಸಲಾಯಿತು.

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅನುಷ್ಠಾನದಲ್ಲಿ ಒಡ್ಡಲಾಗಿದ್ದ ಹಲವಾರು ಅಡೆತಡೆಗಳನ್ನು ದಾಟಿಯೂ ಸಹ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಹಾಗೂ ಬಿಜೆಪಿ ಕಾರ್ಯಕರ್ತರು ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ಗಳನ್ನು ವಿತರಿಸುತ್ತಿರುವುದು ಅಭಿನಂದನಾರ್ಹವಾಗಿದೆ.

ಈ ಸಂದರ್ಭದಲ್ಲಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಅತ್ಯಂತ ಮಹತ್ವಪೂರ್ಣ ಯೋಜನೆಯಾಗಿದೆ. ಇದರಿಂದ ಕಡುಬಡವರಿಗೆ ಉಚಿತವಾಗಿ ಈ ಸೌಲಭ್ಯ ದೊರೆಯುತ್ತಿದೆ. ಹೊಗೆಯಿಂದ ಮಹಿಳೆಯರ ಸ್ವಾಸ್ಥ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸುವ ಹಾಗೂ ಪರಿಸರವನ್ನು ರಕ್ಷಿಸುವ ಧ್ಯೇಯದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ 1000 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಕಿಟ್ ಗಳನ್ನು ದೊರಕಿಸಿಕೊಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಯೋಜನೆಯ ಅನುಷ್ಠಾನದಲ್ಲಿ ಅಡ್ಡಿಯನ್ನುಂಟು ಮಾಡಲಾಗುತ್ತಿದೆ. ಅದನ್ನೆಲ್ಲ ಮೀರಿ ನಾವೆಲ್ಲ ಬಡ ಕುಟುಂಬಗಳಿಗೆ ಈ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದೇವೆ. ಸರಕಾರದ ಯಾವುದೇ ಬಡವರ ಪರವಾದ ಸೌಲಭ್ಯಗಳಿರಲಿ ಅದನ್ನು ನಾವು ಪ್ರಾಮಾಣ ಕವಾಗಿ ಬಡವರಿಗೆ ತಲುಪಿಸುತ್ತೇವೆ. ಬಡವರಿಗೆ ಅನುಕೂಲತೆ ಉಂಟಾಗಬೇಕು ಎಂಬುದೊಂದೇ ನಮ್ಮ ಆಶಯವಾಗಿದೆ. ಬಡವರ ಪರವಾದ ಯೋಜನೆಗಳನ್ನು ಬಡವರಿಗೆ ತಲುಪಿಸುವಲ್ಲಿ ಎಲ್ಲರೂ ಪ್ರಾಮಾಣ ಕವಾಗಿ ಶ್ರಮಿಸಬೇಕೇ ವಿನಃ ತೊಂದರೆಯನ್ನುಂಟು ಮಾಡಬಾರದು. ಕೇಂದ್ರ ಸರಕಾರ ಘೋಷಿಸಿದ ಆಯುಷ್ಮನ್ ಭಾರತ ಎಂಬ ವೈದ್ಯಕಿಯ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಗಳ ವರೆಗೆ ಸಾಲ ಸೌಲಭ್ಯ ದೊರೆಯಲಿದ್ದು ಜನರು ಈ ಯೋಜನೆಗಳ ಅನುಕೂಲತೆಗಳನ್ನು ಪಡೆದುಕೊಳ್ಳಬೇಕು. ಎಲ್ಲಾ ಯೋಜನೆಗಳ ಸೌಲಭ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಹಾಗೂ ಕಾರ್ಯಕರ್ತರು ಸದಾ ಶ್ರಮಿಸುತ್ತೇವೆ ಎಂದರು.

RELATED ARTICLES  ಟಿ.ಎಸ್.ಎಸ್ ಸಂಯೋಜನೆಯಲ್ಲಿ ಯಶಸ್ವಿಯಾಯ್ತು ಅಟೋ ಎಕ್ಸ್‍ಪೋ-2018 ಮತ್ತು ಫುಡ್‍ ಎಕ್ಸಪ್ರೆಸ್: ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

ಸುಧಾ ಗೌಡ ಅವರು ಮಾತನಾಡಿ ನಾಗರಾಜ ನಾಯಕ ಅವರು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕುಮಟಾ- ಹೊನ್ನಾವರ ಭಾಗದಲ್ಲಿ ಬಡವರ ಮನೆ-ಮನೆಗಳಿಗೆ ತೆರಳಿ ಉಚಿತವಾಗಿ ಅತಿ ಹೆಚ್ಚು ಗ್ಯಾಸ್ ಕಿಟ್ ಗಳನ್ನು ತಲುಪಿಸುವಲ್ಲಿ ಶ್ರಮಿಸಿದ್ದಾರೆ. ಇವರ ಈ ಕಳಕಳಿಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತೇನೆ. ನನಗೂ ಸಹ ಕೆಲವು ಭಾಗಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಆಶಯವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ನುಡಿದು ಸರಕಾರವು ಘೋಷಿಸುವ ಕಾರ್ಯಕ್ರಮಗಳನ್ನು ಬಡಜನರಿಗೆ ತಲುಪಿಸುವಲ್ಲಿ ರಾಜಕೀಯ ಮಾಡದೇ ನಿಷ್ಕಳಂಕ ಮನಸ್ಸಿನಿಂದ ಬಡವರಿಗೆ ಈ ಸೌಲಭ್ಯವನ್ನು ತಲುಪಿಸುತ್ತಿರುವ ನಾಗರಾಜ ನಾಯಕ ತೊರ್ಕೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES  ವಿಶ್ವಶಾಂತಿ ಬಾಲೆ’ ಇನ್ನು ಇಂಡಿಯಾ ಬುಕ್ ಆಫ್ ರೆಕಾರ್ಡಗೆ

ಫಲಾನುಭವಿಗಳಾದ ಬಿಜ್ಜೂರಿನ ಗಂಗೆ ಕಡಬಾ ಗೌಡ, ಗುಲಾಬಿ ತುಳಸು ಗೌಡ, ಶಾಂತಿ ಕರಿಯಾ ಗೌಡ, ಮಂಗಲಾ ವೆಂಕಟ್ರಮಣ ಗೌಡ, ಮಂಕಾಳಿ ಶಿವಪ್ಪ ಗೌಡ, ನೆಲಗುಣ ಯ ಲಕ್ಷ್ಮೀ ಮಂಜುನಾಥ ಗೌಡ, ಶ್ರೀಮತಿ ಶಂಕರ ಗೌಡ, ಶಾಂತಿ ತಿಮ್ಮಣ್ಣ ಗೌಡ, ಬೇಲೆಹಿತ್ತಲಿನ ಕಮಲಾ ಕೇಮು ಅಂಬಿಗ ಇವರುಗಳು ಉಚಿತ ಗ್ಯಾಸ್ ಕಿಟ್ ಗಳನ್ನು ಮತ್ತು ಲೈಟರಗಳನ್ನು ಪಡೆದುಕೊಂಡು ಸಂತಸಪಟ್ಟರು.

ಈ ಸಂದರ್ಭದಲ್ಲಿ ನಾಡುಮಾಸ್ಕೇರಿ ಗ್ರಾ. ಪಂ. ಸದಸ್ಯ ಶ್ರೀನಿವಾಸ ದೇವಣ್ಣ ನಾಯಕ, ಗಣಪತಿ ಗೌಡ, ಪ್ರಕಾಶ ಗೌಡ, ವೆಂಕಟ್ರಮಣ ಕವರಿ, ರಾಘವೇಂದ್ರ ಗೌಡ, ಸತೀಶ ದೇಶಭಂಡಾರಿ ಮುಂತಾದವರು ಉಪಸ್ಥಿರಿದ್ದರು. ಅರುಣ ಕವರಿ ತೊರ್ಕೆ ಅವರು ಸ್ವಾಗತಿಸಿ ವಂದಿಸಿದರು.