ಬೆಂಗಳೂರು,- ಬಿಹಾರ, ಉತ್ತರ ಪ್ರದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಬಿಜೆಪಿ ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆಗೆ ತನ್ನ ಕಾರ್ಯತಂತ್ರವನ್ನು ಬದಲಾಯಿಸಲು ಮುಂದಾಗಿದೆ. ಕೇವಲ ಹಿಂದೂ ಮತಗಳ ಆಧಾರದ ಮೇಲೆ ಚುನಾವಣೆಗೆ ಹೋಗದೆ ಎಲ್ಲಾ ಸಮುದಾಯಗಳನ್ನು ಸೆಳೆಯಲು ವಿಶೇಷ ಕಾರ್ಯತಂತ್ರ ಹೆಣೆಯಲು ವರಿಷ್ಠರು ತೀರ್ಮಾನಿಸಿದ್ದಾರೆ.

ರಾಜಧಾನಿ ಬೆಂಗಳೂರು, ಕರಾವಳಿ ತೀರ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಹಿಂದುತ್ವ ಅಸ್ತ್ರವನ್ನು ಬಳಸಿದರೆ ಇತರೆ ಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಒತ್ತು ನೀಡಲು ಮುಂದಾಗಿದೆ. ಮೈಸೂರು, ಮಧ್ಯ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿರುವ ಸ್ಥಳೀಯ ಸಮಸ್ಯೆಗಳಿಗೆ ಒತ್ತು ನೀಡಿ ಪಕ್ಷ ಸಂಘಟಿಸುವುದು ಹಾಗೂ ಸಮಾವೇಶಗಳನ್ನು ನಡೆಸುವ ಮೂಲಕ ಇತರೆ ಪಕ್ಷಗಳ ಕಾರ್ಯಕರ್ತರನ್ನು ಸೆಳೆಯಲು ಕಮಲ ನಾಯಕರು ಚಿತ್ತ ಹರಿಸಿದ್ದಾರೆ. ಕೇವಲ ಹಿಂದುತ್ವದ ಆಧಾರದ ಮೇಲೆ ಚುನಾವಣೆಗೆ ಹೋದರೆ ಇತರೆ ಅಲ್ಪಸಂಖ್ಯಾತ ಸಮುದಾಯಗಳು ಮುನಿಸಿಕೊಳ್ಳಬಹುದು. ಉತ್ತರ ಪ್ರದೇಶ, ಬಿಹಾರ ಚುನಾವಣೆಯಲ್ಲಿ ಇದು ಸಾಬೀತಾಗಿರುವುದರಿಂದ ಎಲ್ಲಾ ಸಮುದಾಯಗಳ ಓಲೈಕೆಗೆ ಬಿಜೆಪಿ ಮುಂದಾಗಿದೆ.

RELATED ARTICLES  ಖ್ಯಾತ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ.

ಅಲ್ಪಸಂಖ್ಯಾತರ ಸಮಾವೇಶ:

ಪಕ್ಷಕ್ಕೆ ಮುಸ್ಲಿಂ ಮತಗಳನ್ನು ಸೆಳೆಯುವ ಉದ್ದೇಶದಿಂದ ಕೇಂದ್ರದಲ್ಲಿ ಈ ಸಮುದಾಯವನ್ನು ಪ್ರತಿನಿಧಿಸುವ ಸಚಿವರುಗಳನ್ನು ರಾಜ್ಯಕ್ಕೆ ಕರೆಸಿಕೊಂಡು ಸಮಾವೇಶ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ 3 ರಿಂದ 4 ಕಡೆ ಬೃಹತ್ ಅಲ್ಪಸಂಖ್ಯಾತರ ಸಮಾವೇಶ ನಡೆಸಲು ಸ್ಥಳ ಹಾಗೂ ದಿನಾಂಕ ನಿಗದಿಪಡಿಸುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ. ಕೇಂದ್ರದಲ್ಲಿ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಮುಕ್ತಾರ್‍ಅಬ್ಬಾಸ್ ನಕ್ವಿ, ಎಂ.ಜೆ.ಅಕ್ಬರ್, ಸಿಕಂದರ್ ಭಕ್ಷ್, ಶಹನಾಜ್ ಹುಸೇನ್ ಸೇರಿದಂತೆ ಮತ್ತಿತರ ಮುಸ್ಲಿಂ ನಾಯಕರುಗಳ ಮೂಲಕ ರಾಜಧಾನಿ ಬೆಂಗಳೂರು ಸೇರಿದಂತೆ ವಿಭಾಗವಾರು ಸಮಾವೇಶ ನಡೆಸಲು ಬಿಜೆಪಿ ಮುಂದಾಗಿದೆ.

RELATED ARTICLES  ಹಲವು ಸ್ವಾಮೀಜಿಗಳು ವಿಧಾನಸಭಾ ಚುನಾವಣಾ ಅಖಾಡಕ್ಕೆ ..!

ಏಪ್ರಿಲ್ ತಿಂಗಳಿನಲ್ಲಿ ಈ ಸಮಾವೇಶಗಳು ನಡೆಯಲಿದ್ದು , ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರಧಾನಿ ಮೋದಿಯವರು ಅಲ್ಪಸಂಖ್ಯಾತರಿಗೆ ಮಾಡಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿಕೊಡಲು ತೀರ್ಮಾನಿಸಲಾಗಿದೆ. ಮುಖ್ಯವಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ತ್ರಿವಳಿ ತಲಾಕ್ ರದ್ದು , ಹಜ್ ಸಬ್ಸಿಡಿ, ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಮುಸ್ಲಿಂ ಮಹಿಳೆಯರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ನಯಿ ರೋಷಿನಿ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವುದು ಈ ಸಮಾವೇಶದ ಉದ್ದೇಶವಾಗಿದೆ.
ರಾಜ್ಯದ ಸುಮಾರು 25ರಿಂದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ ಪಾತ್ರ ವಹಿಸುವುದರಿಂದ ಆ ಸಮುದಾಯದ ಮತಗಳು ದೂರ ಸರಿಯದಂತೆ ಕಮಲ ನಾಯಕರು ಈ ಕಾರ್ಯತಂತ್ರ ರೂಪಿಸಿದ್ದಾರೆ.