ಮಾಸ್ಕೋ : ರಷ್ಯಾದ ಯಾಕುತ್‌ಸ್ಕ್ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ವಿಮಾನವೊಂದು ಟೇಕಾಫ್ ಆದ ಸ್ವಲ್ಪ ಹೊತ್ತಿನ ಬಳಿಕ ಅದರ ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡ ಪರಿಣಾಮವಾಗಿ ಅದರೊಳಗಿದ್ದ ಹತ್ತು ಟನ್ ಚಿನ್ನ, ಪ್ಲಾಟಿನಂ ಮತ್ತು ವಜ್ರಗಳು ರನ್‌ವೇ ಮತ್ತು ಆಸುಪಾಸಿನ 26 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾಗಿ ಉದುರಿ ಹರಡಿಕೊಂಡು ಬಿದ್ದ ಘಟನೆ ವರದಿಯಾಗಿದೆ. ಇವುಗಳ ಮೌಲ್ಯ 2,6369 ಕೋಟಿ ರೂ.ಗಳೆಂದು (ಅಥವಾ 365 ದಶಲಕ್ಷ ಡಾಲರ್) ಅಂದಾಜಿಸಲಾಗಿದೆ.
ನಿಂಬಸ್ ಏರ್ ಲೈನ್ಸ್ ಎಎನ್ -12 ಸರಕು ಸಾಗಣೆ ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಅದರಲ್ಲಿ ತಾಂತ್ರಿಕ ದೋಷ ಕಂಡು ಬಂತು. ಪರಿಣಾಮವಾಗಿ ಅದರ ಬಾಗಿಲು ತೆರೆದುಕೊಂಡು ಅದರೊಳಗಿದ್ದ 10 ಟನ್ ಚಿನ್ನ, ಪ್ಲಾಟಿನಂ, ವಜ್ರದ ಸರಕುಗಳು ಆಗಸದಿಂದ ಬೀಳುವಾಗ ಚಿನ್ನ, ವಜ್ರಗಳ ಸುರಿ ಮಳೆ ಆಗುತ್ತಿರುವಂತೆ ತೋರಿಬಂತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕೂಡಲೇ ಅದನ್ನು ಸುರಕ್ಷಿತವಾಗಿ ಸಮೀಪದ ಮಗಾನ್ ವಿಮಾನ ನಿಲ್ದಾಣದಲ್ಲಿ ಇಳಿಸಲು ವಿಮಾನದ ಪೈಲಟ್ ನಿರ್ಧರಿಸಿದ. ಆ ಸಂದರ್ಭದಲ್ಲಿ ತೆರೆದುಕೊಂಡ ವಿಮಾನದ ಬಾಗಿಲಿನಿಂದ ಹೊರ ಚೆಲ್ಲಿ ಹೋದ ಚಿನ್ನ, ವಜ್ರ, ಪ್ಲಾಟಿನಂ ಗಳು ರನ್‌ವೇ ಮತ್ತು ಆಸುಪಾಸಿನ ಸುಮಾರು 26 ಕಿ.ಮೀ. ಫಾಸಲೆಯಲ್ಲಿ ಹರಡಿಕೊಂಡು ಬಿದ್ದವು.