ಯಲ್ಲಾಪುರ ; ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿಲ್ಲ, ನಾವು ಕೇಳಿದ ಎಲ್ಲ ಬೇಡಿಕೆಗಳು ಈಡೇರಿದ್ದಾರೆ, ಶಿರಸಿ ಯಲ್ಲಾಪುರ ಸಂಪರ್ಕಿಸುವ ಗಣೇಶ ಫಾಲ್ಸ್ ಹಳ್ಳಕ್ಕೆ ಸೇತುವೆ ಬಹುದಿನದ ಬೇಡಿಕೆಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸೇತುವೆಗೆ ಮಂಜೂರಾತಿ ನೀಡಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಶುಕ್ರವಾರ ಮಧ್ಯಾಹ್ನ ತಾಲೂಕಿನ ಹಿತ್ಲಳ್ಳಿ ಪಂಚಾಯತ ವ್ಯಾಪ್ತಿಯ ಗಣೇಶ ಪಾಲ್ಸ್ ಹಳ್ಳದ ಪಕ್ಕದ ಹೊಳೆಮಹಾಗಣಪತಿ ದೇವಸ್ಥಾನದಲ್ಲಿ ತಮ್ಮ ಪತ್ನಿ ಸಮೇತ ಪೂಜೆ ಸಲ್ಲಿಸಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಯೋಜನೆ ಅಡಿಯಲ್ಲಿ ನಾಲ್ಕು ಕೋಟಿ ರೂಪಾಯಿ ವೆಚ್ಚದ ಗಣೇಶಪಾಲ್ಸ್ ಹಳ್ಳದ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬೇರೆಬೇರೆ ತಾಲೂಕುಗಳನ್ನು ಸಂಪರ್ಕಿಸುವ ಒಟ್ಟು 11 ಸೇತುವೆಗಳಿಗೆ ರಾಜ್ಯದ ಸಿದ್ದರಾಮಯ್ಯ ಸರಕಾರ ಮಂಜೂರಾತಿ ನೀಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ, ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಸಹಕಾರದಿಂದ ಈ ಎಲ್ಲಾ ಕೆಲಸಗಳು ಸುಲಲಿತವಾಗಿ ನಡೆಯುತ್ತಿವೆ. ಕಾರ್ಯಾಂಗದ ಸಹಕಾರವಿಲ್ಲದೆ ಶಾಸಕಾಂಗವು ಏನು ಮಾಡಲು ಸಾಧ್ಯವಿಲ್ಲ. ನಮ್ಮ ಕ್ಷೇತ್ರದಲ್ಲಿ ಉತ್ತಮ ಅಧಿಕಾರಿಗಳು ಸಿಕ್ಕಿರುವುದು ನಮಗೆ ಕೆಲಸ ಮಾಡಲು ಇನ್ನಷ್ಟು ಸ್ಫೂರ್ತಿ ನೀಡಿದೆ ಎಂದು ಶಾಸಕರು ಹೇಳಿದರು.

RELATED ARTICLES  ಕುಮಟಾ ತಾಲೂಕು 7ನೇಕನ್ನಡ ಸಾಹಿತ್ಯ ಸಮ್ಮೇಳನ ಕತಗಾಲಕ್ಕೆ : ಅರವಿಂದ ಕರ್ಕಿಕೋಡಿ ಘೋಷಣೆ

ಜಿಲ್ಲಾ ಪಂಚಾಯತಿ ಸದಸ್ಯ ಜಿ ಎನ್ ಹೆಗಡೆ ಮುರೇಗಾರ ಮಾತನಾಡಿ, ಗಣೇಶ್ ಪಾಲ್ಸ್ ಹಳ್ಳದ ಸೇತುವೆ ನಿರ್ಮಾಣದಿಂದ ಎರಡು ತಾಲ್ಲೂಕಿನ ಜನತೆಗೆ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ. ಅನೇಕ ಜನಪ್ರತಿನಿಧಿಗಳು ಶಾಸಕರು ಈ ಭಾಗವನ್ನು ಪ್ರತಿನಿಧಿಸಿದರೂ ಈ ಸೇತುವೆಯ ಬೇಡಿಕೆ ಈಡೇರಿಸಲು ಸಾಧ್ಯವಾಗಿಲ್ಲ. ಆದರೆ ಶಾಸಕ ಶಿವರಾಮ ಹೆಬ್ಬಾರ ಅವರ ಪ್ರಯತ್ನದಿಂದಾಗಿ ಈ ಭಾಗಕ್ಕೆ ನಾಲ್ಕು ಕೋಟಿ ರೂಪಾಯಿಯ ಸೇತುವೆ ಮಂಜೂರಿಯಾಗಿರುವುದು ಶ್ಲಾಘನೀಯ, ಇಂದು ಭೂಮಿ ಪೂಜೆ ನೆರವೇರಿಸಿರುವ ಶಾಸಕ ಶಿವರಾಮ ಹೆಬ್ಬಾರ ಮುಂದಿನ ದಿನಗಳಲ್ಲಿ ಈ ಸೇತುವೆಯನ್ನು ಉದ್ಘಾಟಿಸಲಿ ಎಂದು ಹಾರೈಸಿದರು.

RELATED ARTICLES  ಬಿಜೆಪಿಗೆ ಅಪಾರ ಜನ ಬೆಂಬಲ ಸಿಗುತ್ತಿದೆ : ದಿನಕರ ಶೆಟ್ಟಿ.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸದಸ್ಯರಾದ ಮಂಗಲಾ ನಾಯ್ಕ, ರಾಧಾ ಹೆಗಡೆ, ಹಿತ್ಲಳ್ಳಿ ಗ್ರಾ.ಪಂ ಅಧ್ಯಕ್ಷೆ ಗೌರಿ ಸಿದ್ದಿ, ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ವಿಜಯ ಮಿರಾಶಿ, ಯಲ್ಲಾಪುರ ಪ.ಪಂ ಅಧ್ಯಕ್ಷ ಶಿರೀಶ ಪ್ರಭು, ಎಪಿಎಂಸಿ ಅಧ್ಯಕ್ಷ ಎಂ ಜಿ ಭಟ್ಟ ಸಂಕದಗುಂಡಿ, ಪ್ರಮುಖರಾದ ಡಿ ಎನ್ ಗಾಂವ್ಕರ, ಸಿ.ಎಫ್ ನಾಯ್ಕ, ಅನಂತ ನಾಗರಜಡ್ಡಿ ಮುಂತಾದವರು ಉಪಸ್ಥಿತರಿದ್ದರು.