ಮಂಗಳೂರು: ತಮಿಳುನಾಡು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನ ದುರಂತದ ಕಾರಣವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರದ ಅರಣ್ಯ ಇಲಾಖೆ ಇಲ್ಲಿನ ರಕ್ಷಿತಾರಣ್ಯಗಳಲ್ಲಿ ಚಾರಣವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಇದೀಗ ಇಲಾಖೆಯ ನಿರ್ಧಾರಕ್ಕೆ ಚಾರಣಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಇದರಿಂದ ಅರಣ್ಯದೊಳಗಿನ ಮಾಫಿಯಾ ಹೆಚ್ಚಳಗೊಳ್ಳುವ ಆತಂಕ ಎದುರಾಗಿದೆ.

ರಾಜ್ಯದ ಪ್ರಮುಖ ಚಾರಣದ ಪ್ರದೇಶವೆಂದು ಖ್ಯಾತಿ ಗಳಿಸಿರುವ ಪಶ್ಚಿಮ ಘಟ್ಟ ಪ್ರದೇಶಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಚಾರಣಿಗರು ಆಗಮಿಸುತ್ತಿದ್ದು, ಇಲಾಖೆಯ ಆದೇಶ ಅವರಿಗೆ ನಿರಾಶೆ ತಂದಿದೆ. ಅರಣ್ಯದೊಳಗೆ ಸಾಕಷ್ಟು ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಇಲಾಖೆ ಚಾರಣಿಗರ ಮೇಲೆ ಕ್ರಮಕ್ಕೆ ಮುಂದಾಗಿರುವುದು ವಿಪರ್ಯಾಸ ಎಂದು ಹೇಳಲಾಗುತ್ತಿದೆ. ದ.ಕ, ಉಡುಪಿ ಜಿಲ್ಲೆಗಳಿಂದಲೂ ಸಾಕಷ್ಟು ಸಂಖ್ಯೆಯ ಪರಿಸರಪ್ರೇಮಿ ಚಾರಣಿಗರ ತಂಡಗಳು ರಜಾದಿನಗಳಲ್ಲಿ ಚಾರಣಕ್ಕೆ ತೆರಳಿ ಅರಣ್ಯ ಜಾಗೃತಿ ಕಾರ್ಯ ನಡೆಸುತ್ತಿದ್ದು, ಇದೀಗ ಅವರ ಕಾರ್ಯಚಟುವಟಿಕೆಗಳಿಗೂ ಬ್ರೇಕ್‌ ಬೀಳಲಿದೆ. ಅರಣ್ಯದೊಳಗೆ ನಡೆಯುತ್ತಿರುವ ಕಾನೂನುಬಾಹಿರ ಕೃತ್ಯಗಳನ್ನು ಬೆಂಬಲಿಸುವುದಕ್ಕೋಸ್ಕರ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ.

RELATED ARTICLES  ನಾಳೆಯಿಂದ ನೈಟ್ ಕರ್ಫ್ಯೂ ಮತ್ತು ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ

ಮಾಫಿಯಾ ಹೆಚ್ಚಳ ಸಾಧ್ಯತೆ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಗಾಂಜಾ ಮಾಫಿಯಾ, ಎಸ್ಟೇಟ್‌ ಮಾಫಿಯಾ, ಕಳ್ಳಬೇಟೆ ಮಾಫಿಯಾಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆಯಿಂದ ಅದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಆದರೆ ಇಂತಹ ದಂಧೆ ನಡೆಸುವವರು ಚಾರಣಿಗರಿಗೆ ಹೆದರಿಯಾದರೂ ತಮ್ಮ ಕೃತ್ಯಗಳಿಗೆ ಕೊಂಚ ಬ್ರೇಕ್‌ ಹಾಕಿದ್ದರು. ಆದರೆ ಇಲಾಖೆಯ ನಿರ್ಧಾರದಿಂದ ಚಾರಣಿಗರು ಅರಣ್ಯ ಪ್ರವೇಶಿಸದೇ ಇದ್ದರೆ ಅರಣ್ಯ ದಂಧೆ ಹೆಚ್ಚಳವಾಗುವ ಆತಂಕ ಎದುರಾಗಿದೆ. ಈ ಹಿಂದೆಯೂ ಎಷ್ಟೋ ಸಂದರ್ಭದಲ್ಲಿ ಬೇಟೆಗಾರರು ಚಾರಣಿಗರಿಗೆ ಎದುರಾದ ಘಟನೆಗಳು ನಡೆದಿದೆ ಎಂದು ಚಾರಣಿಗರು ತಿಳಿಸುತ್ತಾರೆ.

RELATED ARTICLES  ಗ್ರಾಹಕರೇ ಔಷಧಿಗಳ ಖರೀದಿಯಲ್ಲಿ ಎಚ್ಚರಿಕೆ..! :15 ಕಂಪನಿಗಳ ಔಷಧಗಳು ನಿಷೇಧ.

ಅರಣ್ಯ ಸಂರಕ್ಷಣೆ ಜಾಗೃತಿ ಕಾರ್ಯ

ದ.ಕ.ಜಿಲ್ಲೆಯಿಂದ ಪ್ರತಿ ವಾರ ಸಹ್ಯಾದ್ರಿ ಸಂಚಯ ತಂಡ ಪಶ್ಚಿಮ ಘಟ್ಟ ಪ್ರದೇಶಗಳಿಗೆ ಚಾರಣ ತೆರಳುತ್ತಿದೆ. ತಮ್ಮ ಜತೆ ವಿವಿಧ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅವರಲ್ಲಿ ಅರಣ್ಯ ಸಂರಕ್ಷಣೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಘಟ್ಟ ಪ್ರದೇಶದಲ್ಲಿ ಯಾವ ರೀತಿ ನದಿಗಳು ಹುಟ್ಟುತ್ತವೆ, ಅಲ್ಲಿರುವ ಹುಲ್ಲುಗಾವಲಿನಿಂದ ಪ್ರಯೋಜನ ಏನು, ಕಾಡ್ಗಿಚ್ಚು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದರ ಕುರಿತು ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ.