ಯಲ್ಲಾಪುರ ; ಬೈಪಾಸ್ ರಸ್ತೆ ನಿರ್ಮಾಣ ಹಾಗೂ ಅಂಕೋಲ ಹುಬ್ಬಳ್ಳಿ ರೇಲ್ವೆ ಮಾರ್ಗದ ನಿರ್ಮಾಣದ ಕುರಿತು ಕಳೆದ ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದ ಅನೇಕ ಬಾರಿ ಹೋರಾಟಮಾಡಿ ಹಾಗೂ ಬೇಡಿಕೆ ಇದ್ದರೂ ಯಾವುದೇ ಪರಿಣಾಮಕಾರಿ ಬೆಳವಣಿಗೆಯಾಗಿಲ್ಲ, ಪಟ್ಟಣದಲ್ಲಿ 25 ವರ್ಷದ ಹಿಂದಿನ ಆ ರಸ್ತೆ ಇಂದಿಗೂ ಮುಂದುವರೆದಿದ್ದು, ಹೆಚ್ಚುತ್ತಿರುವ ವಾಹನದ ಒತ್ತಡ ಹಾಗೂ ಭಾರಿ ವಾಹನಗಳು, ಅಪಾಯಕಾರಿ ವಾಹನಗಳು, ಉದ್ದನೆಯ ವಾಹನಗಳ ಸಂಚಾರದಿಂದ ಪಟ್ಟಣದ ಜನತೆ ತತ್ತರಿಸಿದ್ದಾರೆ. ಪ್ರತಿಕ್ಷಣವೂ ಅಪಾಯವನ್ನು ಎದುರಿಸುತ್ತಿದ್ದಾರೆ. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮತ್ತೊಮ್ಮೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿದರು.

ಅವರು ಶನಿವಾರ ಬೆಳಿಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ನಿನ್ನೆ ಪಟ್ಟಣ ವ್ಯಾಪ್ತಿಯಲ್ಲಿ ನಡೆದ ಒಂದು ಅಪಘಾತ, ಒಂದು ಗಂಟೆ ತಡವಾಗಿ ನಡೆದಿದ್ದರೆ, ಭಾರಿ ಪ್ರಮಾಣದ ಸಾವು-ನೋವು ಸಂಭವಿಸುತ್ತಿತ್ತು. ಇಂತಹ ಹಲವಾರು ಅಪಘಾತಗಳು ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ. ಬೈಪಾಸ್ ರಸ್ತೆಯಲ್ಲಿ ನಿರ್ಮಾಣವಾಗುವವವರೆಗೂ ಗ್ಯಾಸ್ ಟ್ಯಾಂಕರ್ ಪೆಟ್ರೋಲ್ ಟ್ಯಾಂಕರ್ ಅಪಾಯಕಾರಿ ರಾಸಾಯನಿಕ ಸಾಗಿಸುವ ವಾಹನಗಳು, ನ್ಯೂಕ್ಲಿಯರ್ ತ್ಯಾಜ್ಯ ಸಾಗಿಸುವ ವಾಹನಗಳು ಪಟ್ಟಣದ ಮೂಲಕ ಸಂಚರಿಸುವಾಗ ಅತಿ ಹೆಚ್ಚು ಜಾಗರೂಕತೆ ವಹಿಸಿ ಕೊಳ್ಳುವಂತೆ ನೋಡಿಕೊಳ್ಳಬೇಕು. ಪಟ್ಟಣದಲ್ಲಿ ಏಕಮುಖ ಸಂಚಾರ ಪ್ರಾರಂಭಿಸಬೇಕು. ವಾಹನದ ವೇಗಗಳಿಗೆ ನಿಯಂತ್ರಣ ಹಾಕಬೇಕು, ನಗರ ವ್ಯಾಪ್ತಿಯಲ್ಲಿ ಇಂಧನ ಗ್ಯಾಸ್ ಟ್ಯಾಂಕರ್, ಕೈಗಾ ತ್ಯಾಜ್ಯಗಳನ್ನು ತುಂಬಿದ ವಾಹನಗಳ ನಿಲುಗಡೆಯನ್ನು ನಿಷೇಧಿಸಿಬೇಕು. ದ್ವಿಚಕ್ರ ವಾಹನಗಳು ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿ ಅತಿ ವೇಗದಲ್ಲಿ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕಬೇಕು. ಪ್ರತಿ ತಿಂಗಳು ವಾರದಲ್ಲಿ ಕನಿಷ್ಠ ಎರಡು ಬಾರಿ ಗ್ಯಾಸ್ ಟ್ಯಾಂಕರ್ ಪೆಟ್ರೋಲಿಯಂ ಟ್ಯಾಂಕರ್ ಚಾಲಕರನ್ನು ಅನಿರೀಕ್ಷಿತವಾಗಿ ತಪಾಸಣೆ ನಡೆಸಿ ಅಲ್ಲಿ ಕ್ರಮ ಕೈಗೊಳ್ಳುವ ವ್ಯವಸ್ಥೆಯಾಗಬೇಕು ಎಂದವರು ಒತ್ತಾಯಿಸಿದರು.

RELATED ARTICLES  ನ.9 ರಿಂದ ಶ್ರೀ ಮಾರಿಕಾಂಬಾ ದೇವಿಯ ವರ್ಧಂತಿ ಉತ್ಸವ

ಪಟ್ಟಣದ ಅಗ್ನಿಶಾಮಕ ಠಾಣೆಗೆ ಮೂಲಭೂತ ಸೌಕರ್ಯಗಳೊಂದಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸಬೇಕು ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸುವ ದ್ವಿಚಕ್ರ ವಾಹನಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಧ್ಯಮದ ಮೂಲಕ ಆಗ್ರಹಿಸಿದರು.

ರಂಗಸಹ್ಯಾದ್ರಿ ಪ್ರಮುಖ ಡಿ ಎನ್ ಗಾಂವ್ಕರ್ ಮಾತನಾಡಿ, ಯಲ್ಲಾಪುರದ ಜನತೆ ಜಾಗೃತರಾದ ಬೇಕಾದ ಅವಶ್ಯಕತೆ ಇದೆ. ನಿಯೋಜಿತ ರೈಲ್ವೆ ಮಾರ್ಗದ ಪಕ್ಕದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ವಾದರೆ ಮೂರು ರಾಷ್ಟ್ರೀಯ ಹೆದ್ದಾರಿಗಳಿಗೆ ಪ್ರತ್ಯೇಕವಾದ ಸಂಪರ್ಕ ಸಾಧ್ಯವಾಗುತ್ತದೆ. ಯಲ್ಲಾಪುರದ ಜನತೆಯ ನಾಗರಿಕ ವೇದಿಕೆಯ ಎಡ ಕೈ ಜೋಡಿಸಿ ಹೋರಾಟಕ್ಕೆ ಬೆಂಬಲಿಸಬೇಕು ಯಾವುದೇ ರಾಜಕೀಯ ಪಕ್ಷದ ಪರವಾಗಿ ಹೋರಾಟ ನಡೆಸುವುದಿಲ್ಲ ಯಲ್ಲಾಪುರ ಜನತೆಯ ಅಸ್ತಿತ್ವ ಹಾಗೂ ಸುರಕ್ಷತೆ ದೃಷ್ಟಿಯಿಂದ ನಡೆಸುವ ಹೋರಾಟದ ಇದಾಗಿದೆ ಎಂದು ಹೇಳಿದರು.

ಖ್ಯಾತ ವಕೀಲರಾದ ಎನ್ ಟಿ ಗಾಂವ್ಕರ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಮಲಿ ‌ಪಾಟಣಕರ ಬೈಪಾಸ್ ರಸ್ತೆಯ ಅವಶ್ಯಕತೆ ಹಾಗೂ ಯಲ್ಲಾಪುರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದರು.

ಯಲ್ಲಾಪುರ ಪಟ್ಟಣದಲ್ಲಿ ಬಾರಿ ವಾಹನಗಳು ಗ್ಯಾಸ್ ಟ್ಯಾಂಕರಗಳು, ಕೈಗಾ ಅಣು ತ್ಯಾಜ್ಯ ವಾಹನಗಳ ಭಾವಚಿತ್ರಗಳನ್ನು ಪ್ರದರ್ಶಿಸಿದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರ ರವಿ ಶಾನಭಾಗ, ಸಮಸ್ಯೆಗಳ ಪಟ್ಟಿಯನ್ನು ನೀಡಿದರು ಅಲ್ಲದೆ ಪರಿಹಾರವನ್ನು ರೈತರ ಸೂಚಿಸಿದರು.

25 ರಿಂದ 60 ಟನ್ ಕೆಲವೊಮ್ಮೆ 100 ಟನ್ ವರೆಗಿನ ಬಾರದ ಮತ್ತು 100 ಅಡಿ ಉದ್ದದ ಕಂಟೇನರ್ ಜೊತೆಗೆ ಅಪಾಯಕಾರಿ ಎಲ್ ಪಿಜಿ ಮತ್ತು ರಾಸಾಯನಿಕಗಳ ಸಾಗಣೆಯ ವಾಹನಗಳಿಗೆ ಪಾರ್ಕಿಂಗ್ ಮತ್ತು ವೇಗದ ನಿರ್ಬಂಧವಿಲ್ಲದೆ ಸಂಚರಿಸುವುದರಿಂದ ಯಲ್ಲಾಪುರದ ರಸ್ತೆ ಪಕ್ಕದ ಮಾರ್ಕೆಟ್ ಹಾಳಾಗಿ ಹೋಗಿದೆ ಸಾರ್ವಜನಿಕರಿಗೆ ಅಂಗಡಿಗಳಿಗೆ ಹೋಗುವದೇ ಸಾಹಸವಾಗಿದೆ.

RELATED ARTICLES  ಕೊಂಕಣ ಎಜ್ಯುಕೇಶನ್ ನಲ್ಲಿ ಡಾ. ವಿ ಎಸ್ ಸೋಂದೆಯವರಿಗೆ ಶ್ರದ್ಧಾಂಜಲಿ ಸಭೆ

ಬಾರಿ ವಾಹನಗಳ ಜೊತೆ ಅದಿರು ಕಲ್ಲಿದ್ದಲು ಮೀನು ಮತ್ತು ಎಲುಬು ತುಂಬಿದ ವಾಹನಗಳು ನಗರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುವದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಲ್ಲದೇ ಜೊತೆಗೆ ಸಾರ್ವಜನಿಕರ ಅನಾರೋಗ್ಯಕ್ಕೂ ಕಾರಣವಗಿದೆ.

ನಗರ ಪ್ರದೇಶದಲ್ಲಿ 50 ರಿಂದ 70 ಕಿಲೋಮೀಟರ್ ವೇಗದಲ್ಲಿ ನಿರ್ದಾಕ್ಷಿಣ್ಯವಾಗಿ ಯಾರದೇ ಹೆದರಿಕೆ ಇಲ್ಲದೆ ಸರಕು ವಾಹನಗಳ ಸಾಗಾಟ ನಡೆದಿದೆ ಅಲ್ಲದೆ ಏನೋ ಬಾರಿ ಅವಸರವಿದೆ ಎನ್ನುವಂತೆ ಕಿರಿದಾದ ರಸ್ತೆಯಲ್ಲಿ ಓವರ್ ಟೇಕ್ ಮಾಡುವುವರನ್ನು ತಡೆಯುವವರೇ ಇಲ್ಲವಾಗಿದೆ.

ಕೈಗಾ ಅಣು ಸ್ಥಾವರಕ್ಕೆ ತ್ಯಾಜ್ಯದ ಯುರೇನಿಯಮ್ ಮತ್ತು ಗ್ಯಾಸ್ ಟ್ಯಾಂಕರ್ ವಾಹನಗಳು ನಗರ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಿರುವ ಘಟನೆ ಗಳನ್ನು ಕಂಡು ನಗರದ ಜನತೆ ಹೌಹಾರುವಂತೆ ಮಾಡಿದೆ. ಜೊತೆಗೆ ಅಣುವಿಕಿರಣದ ಭೀತಿಯಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.

ವರ್ಷದಾದ್ಯಂತ ಧಾರ್ಮಿಕ ಮೆರವಣಿಗೆ, ವಾರದ ಸಂತೆ, ವಿವಿಧ ಸಂಘಟನೆಗಳ ಮುಷ್ಕರ, ವಿದ್ಯಾರ್ಥಿಗಳ ಮೆರವಣಿಗೆ, ವಾಹನಗಳ ಅಪಘಾತ ಮತ್ತು ಜಾತ್ರಾ ಮಹೋತ್ಸವ ಎಂದು ರಾಷ್ಟ್ರೀಯ ಹೆದ್ದಾರಿ ನಗರ ಪ್ರದೇಶದಲ್ಲಿ ಬಂದಾಗಿ ದೂರ ಪ್ರಯಾಣ ಮಾಡುವ ಸಾವಿರಾರು ಜನರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಸಮಸ್ಯೆಗಳ ಬಗ್ಗೆ ವಿವರಿಸಿದರು.

ವರ್ಷದಿಂದ ವರ್ಷಕ್ಕೆ ವಾಹನ ಸಂಚಾರ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಯಲ್ಲಾಪುರ ನಗರಕ್ಕೆ ಬೈ ಪಾಸ್ ನಿರ್ಮಾಣವಾಗಬೇಕು. ಕಳೆದ 20 ವರ್ಷಗಳಿಂದ ಬೇಡಿಕೆ ಇರುವ ಈ ಬೈಪಾಸ್ ರಸ್ತೆಯ ಬಗ್ಗೆ ಜನ ಪ್ರತಿನಿಧಿಗಳಿಂದ ಅಥವಾ ಸರ್ಕಾರಿ ಅಧಿಕಾರಿಗಳಿಂದ ಯಾವುದೇ ಪರಿಣಾಮಕಾರಿ ಕೆಲಸ ಪ್ರಾರಂಭವಾಗಿರುವುದಿಲ್ಲ ಈ ಬೈಪಾಸ್ ನಿರ್ಮಾಣವಾಗುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಬೇಕು. ಬೈಪಾಸ್ ರಸ್ತೆ ನಿರ್ಮಾಣವಾಗಿ ಮುಕ್ತಾಯವಾಗುವವರೆಗೂ ನಗರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪಾದಚಾರಿಗಳಿಗೆ ಜೊತೆಗೆ ವಾಹನಗಳ ಸುಗಮ ಸಂಚಾರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.