ಯಲ್ಲಾಪುರಕ್ಕೆ ಹೊಸ ಬಸ್ ನಿಲ್ದಾಣ ಭಾಗ್ಯ! ನಾಳೆ ನಡೆಯಲಿದೆ ಗುದ್ದಲಿಪೂಜೆ.
ಯಲ್ಲಾಪುರ : ಯಲ್ಲಾಪುರ ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಲಾಹಿರುವ ಹೊಸ ಹಾಗೂ ಆಧುನಿಕ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಂಗಳವಾರ ಮಾರ್ಚ್ 20 ರಂದು ಬೆಳಿಗ್ಗೆ 10.30 ಕ್ಕೆ ಗುದ್ದಲಿಪೂಜೆ ನೆರವೇರಿಸುವರು.
ತಾಲೂಕಿನ ಬಹುವರ್ಷದ ಬೇಡಿಕೆಯಾಗಿದ್ದ ಬಸ್ ನಿಲ್ದಾಣಕ್ಕೆ ಶಾಸಕರ ತೀವ್ರ ಪ್ರಯತ್ನದಿಂದ ಸರ್ಕಾರ 5.58 ಕೋಟಿ ಹಣ ಮಂಜೂರಿ ಮಾಡಿದೆ. ಟೆಂಡರ್ ಕರೆದು ಕಾಮಗಾರಿ ಪ್ರಾರಂಭವಾಗಲಿದೆ.
ಶಾಸಕ ಶಿವರಾಮ ಹೆಬ್ಬಾರ ಬಸ್ ನಿಲ್ದಾಣದ ಗುದ್ದಲಿ ಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯ್ಕ ಭಾಗವಹಿಸುವರು.
ಪ್ರಸ್ತುತ 4.5 ಕೋಟಿ ರೂಗೆ ಮೊದಲನೇ ಹಂತದ ಕಟ್ಟಡದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, 2 ನೇ ಹಂತದ ಕಾಮಗಾರಿಗಾಗಿ 1.8 ಕೋಟಿ ಹಣ ಮಂಜೂರಿಯಾಗಿ ಟೆಂಡರ್ ಕರೆಯುವ ಹಂತದಲ್ಲಿದೆ.
ಹಳೆಯ ಬಸ್ ನಿಲ್ದಾಣ ಜೀರ್ಣಾವಸ್ಥೆಗೆ ತಲುಪಿತ್ತು, ಕೆಲವು ವರ್ಷಗಳ ಹಿಂದೆ ಬಸ್ ನಿಲ್ದಾಣದ ಸ್ಲಾಬ್ ಕಳಚಿ ಬಿದ್ದಿತ್ತು. ಇಲ್ಲಿಯ ಜನರ ಬಹು ದಿನದ ಬೇಡಿಕೆಯಾಗಿತ್ತು. ಇದನ್ನು ಮನಗಂಡ ಶಾಸಕರು ಈ ಕಟ್ಟಡಕ್ಕೆ ಹಣ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅಂದೇ ಮುಂಡಗೋಡಿನ ನೂತನ ಬಸ್ ನಿಲ್ದಾಣಕ್ಕೂ 4 ಕೋಟಿಯ ಅನುದಾನದ ಹಣ ಬಿಡುಗಡೆಯಾಗಿದ್ದೂ ಅಲ್ಲಿಯೂ ಮಂಗಳವಾರವೇ ಶಿಲಾನ್ಯಾಸ ನೆರವೇರಿಸುವರು.
ತಾಲೂಕಿನ ಸಮಸ್ತ ನಾಗರಿಕರು ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ವಿನಂತಿಸಿದ್ದಾರೆ.