ಮಂಗಳೂರು: ಮೀನುಗಾರಿಕೆ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದು ಕಮಲ ಹಿಡಿಯಲಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ, ಇದಕ್ಕೆ ಪುಷ್ಠಿ ನೀಡುವಂತ ಹಲವು ಘಟನೆಗಳು ಕೂಡ ನಡೆಯುತ್ತಿವೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ಕೆಲ ದಿನಗಳಲ್ಲಿ 3 ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ, ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ ರಾಹುಲ್ ಪ್ರಚಾರ ಕಾರ್ಯಕ್ರಮ ನಡೆಸಲಿದ್ದಾರೆ, ಕ್ಷೇತ್ರದ ಶಾಸಕರಾಗಿರುವ ಪ್ರಮೋದ್ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಬೇಕಿತ್ತು, ಆದರೆ ಮಧ್ವರಾಜ್ ಆ ಕೆಲಸ ಮಾಡಿಲ್ಲ, ಅವರ ಬದಲಾಗಿ ಬಿ ರಮಾನಾಥ್ ರೈ ಮೂರು ಬಾರಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಇನ್ನೂ ಕಳೆದ ವಾರ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನ ಉಡುಪಿ ಕ್ಷೇತ್ರದ್ಯಾಂತ ಸುತ್ತಾಡಿದೆ, ಈ ವಾಹನದಲ್ಲಿ ರಾಹುಲ್ ಗಾಂಧಿ ಅಥವಾ ಸಿದ್ದರಾಮಯ್ಯ ಭಾವ ಚಿತ್ರ ಅಥವಾ ಕಾಂಗ್ರೆಸ್ ಪಕ್ಷದ ಚಿಹ್ನೆ ಯಾವುದು ಇರಲಿಲ್ಲ, ಈ ಎಲ್ಲಾ ಅಂಶಗಳು ಪ್ರಮೋದ್ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ಊಹಾ ಪೋಹಾಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬರುವಂತೆ ಮಾಡಿವೆ. ಆದರೆ ಏಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬುದು ಇನ್ನೂ ರಹಸ್ಯವಾಗಿದೆ.
ಪ್ರಮೋದ್ ಮದ್ವರಾಜ್ ಎದುರಿಸುತ್ತಿರುವ ಬ್ಯಾಂಕ್ ವಂಚನೆ ಪ್ರಕರಣ ಆರೋಪ ಎದುರಿಸಲು ಅಸಹಾಯಕರಾಗಿದ್ದಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಆದರೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ವಿಷಯವನ್ನು ಪ್ರಮೋದ್ ಸಾರಸಗಟಾಗಿ ತಿರಸ್ಕರಿಸಿದ್ದಾರೆ.