ಮಂಗಳೂರು: ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜನಾಶೀರ್ವಾದ ಯಾತ್ರೆಯು ಮಂಗಳವಾರ ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದ ಬಳಿಕ ಸಂಜೆ ವೇಳೆಗೆ ಮಂಗಳೂರಿಗೆ ಆಗಮಿಸಲಿದೆ. ಪಕ್ಷದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಆಗಮಿಸುತ್ತಿರುವ ರಾಹುಲ್‌ಗೆ ಉಭಯ ಜಿಲ್ಲೆಗಳಲ್ಲಿ ರೋಡ್‌ಶೋ, ಕಾರ್ಯಕರ್ತರ ಬೃಹತ್‌ ಸಭೆಗಳನ್ನು ಆಯೋಜಿಸಿ ಅದ್ದೂರಿ ಸ್ವಾಗತ ನೀಡಲು ಸಕಲ ಸಿದ್ಧತೆ ನಡೆಸಲಾಗಿದೆ.

ಅವರು ಮಂಗಳವಾರ ರಾತ್ರಿ ಮಂಗಳೂರಿನ ಸರ್ಕಿಟ್‌ ಹೌಸ್‌ನಲ್ಲಿ ವಾಸ್ತವ್ಯ ಮಾಡುತ್ತಿರುವುದು ವಿಶೇಷ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ಮಾ. 20ರಿಂದ ಆರಂಭವಾಗುತ್ತಿರುವ 3ನೇ ಹಂತದ ಜನಾಶೀರ್ವಾದ ಯಾತ್ರೆ ಇದಾಗಿದೆ. ಎರಡು ದಿನಗಳ ಈ ಯಾತ್ರೆಯು ಉಡುಪಿ, ಮಂಗಳೂರು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ರಾಹುಲ್‌ ಗಾಂಧಿ ಕೈಗೊಂಡಿದ್ದ ಜನಾಶೀರ್ವಾದ ಯಾತ್ರೆ ಪಕ್ಷದ ಕಾರ್ಯಕರ್ತರಲ್ಲಿ ಈಗಾಗಲೇ ಹುಮ್ಮಸ್ಸು ಮೂಡಿಸಿದೆ. ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ತೀವ್ರ ಟೀಕಾ ಪ್ರಹಾರಗೈದಿದ್ದ ರಾಹುಲ್‌ ಗಾಂಧಿ ಕರಾವಳಿಯ ಯಾತ್ರೆಯಲ್ಲೂ ಇದೇ ರೀತಿಯ ವಾಗ್ಧಾಳಿ ಮುಂದುವರಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ. ಫೆ. 19ರಿಂದ 21ರವರೆಗೆ ಕರಾವಳಿಯಲ್ಲಿ ಅಮಿತ್‌ ಶಾ ಅವರ ಮಿಂಚಿನ ಸಂಚಾರದ ಮೂಲಕ ಬಿಜೆಪಿ ಪರ ಸೃಷ್ಟಿಸಿರುವ ರಾಜಕೀಯ ಸಂಚಲನಕ್ಕೆ ಅದೇ ಮಾದರಿಯಲ್ಲಿ ಪ್ರತ್ಯುತ್ತರ ನೀಡಲು ರಾಹುಲ್‌ ಗಾಂಧಿಯವರ ಜನಾಶೀರ್ವಾದ ಯಾತ್ರೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಸ್ಥಳೀಯ ಮುಖಂಡರು ವೇದಿಕೆಯಾಗಿಸಿಕೊಂಡಿದ್ದಾರೆ.

RELATED ARTICLES  ಕಾಂಗ್ರೆಸ್ ತೊರೆದು ಕಮಲ ಹಿಡಿಯಲಿದ್ದಾರಾ? ಪ್ರಮೋದ್ ಮಧ್ವರಾಜ್.!

ಮುಂಬರುವ ವಿಧಾನಸಭೆ ಚುನಾವಣೆಗೆ ಕರಾವಳಿ ಭಾಗದಲ್ಲಿಯೂ ಈಗಾಗಲೇ ರಾಜಕೀಯ ಹವಾ ಆರಂಭಗೊಂಡಿದ್ದು ರಾಹುಲ್‌ ಗಾಂಧಿಯವರ ಈ ಜನಾಶೀರ್ವಾದ ಯಾತ್ರೆ ಕೂಡ ಕಾಂಗ್ರೆಸ್‌ ವಲಯದಲ್ಲಿ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದೆ. ತಮ್ಮ ಎರಡು ದಿನಗಳ ಈ ಪ್ರವಾಸದಲ್ಲಿ ಅವರು ಪಕ್ಷದ ಬ್ಲಾಕ್‌ ಅಧ್ಯಕ್ಷರು, ರಾಜ್ಯ ಮತ್ತು ಜಿಲ್ಲಾ ವರಿಷ್ಠ ನಾಯಕರ ಜತೆ ಪ್ರತ್ಯೇಕ ಸಮಾಲೋಚನ ಸಭೆಗಳನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವುದಕ್ಕೆ ಖುದ್ದು ರಾಹುಲ್‌ ಗಾಂಧಿ ಅವರು ಈ ರೀತಿಯ ಮಹತ್ವದ ಸಭೆಗಳನ್ನು ನಡೆಸುತ್ತಿರುವುದು ವಿಶೇಷ.

RELATED ARTICLES  ಕವಿ ಚೆನ್ನವೀರ ಕಣವಿಗೆ 'ಸಿದ್ದಗಂಗಾ ಶ್ರೀ' ಪ್ರಶಸ್ತಿ