ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಓರ್ವ ರಾಜಕಾರಣಿ ಎನ್ನುವುದಕ್ಕಿಂತ ಸಮಾಜ ಸೇವಕ ಎಂದು ಬಣ್ಣಿಸಿದರೆ ಉತ್ತಮ, ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಸಂಚರಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಅವರು ಮಂಗಳವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದ ವತಿಯಿಂದ ಆಧುನಿಕ ಬಸ್ ನಿಲ್ದಾಣಕ್ಕೆ ಮಂಗಳವಾರ ಮಧ್ಯಾಹ್ನ ಶಂಕುಸ್ಥಾಪನೆ ನೆರವೇರಿಸಿ ಹಾಗೂ ನಾಲ್ಕು ಹೊಸ ಬಸ್ಸುಗಳಿಗೆ ಹಸಿರು ನಿಷಾನೆ ತೋರಿಸಿ ಮಾತನಾಡಿದರು.

ತಾವು ಮೂರು ಬಾರಿ ಸಚಿವರಾಗಿದ್ದಾಗಲೂ ಯಲ್ಲಾಪುರಕ್ಕೆ ಬರುವ ಅವಕಾಶ ಸಿಕ್ಕಿರಲಿಲ್ಲ, ಶಾಸಕರು ಒತ್ತಾಯದ ಮೇರೆಗೆ ಇಂದು ಅವಕಾಶ ಸಿಕ್ಕಿದೆ. ಜನಪರ ಕೆಲಸ ಮಾಡುವ ಇಂತಹ ಶಾಸಕರ ಅವಶ್ಯಕತೆ ಇಂದಿನ ರಾಜಕಾರಣಕ್ಕೆ ಬೇಕಿದೆ. ಹಳ್ಳಿಗಳಿಂದ ಕೂಡಿರುವ ನಮ್ಮ ದೇಶ ಸಾರಿಗೆ ವ್ಯವಸ್ಥೆ ಕಲ್ಪಿಸುವುದುರಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ, ಅದರಲ್ಲಿಯೂ ಕರ್ನಾಟಕ ರಾಜ್ಯ ಕಳೆದ 5 ವರ್ಷದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಕಾರಣಕ್ಕೆ 217 ಪ್ರಶಸ್ತಿ ಪಡೆದುಕೊಂಡು ಲಿಮ್ಕಾ ದಾಖಲೆ ಪುಸ್ತಕದಲ್ಲಿ ಹೆಸರು ಪಡೆದಿದೆ. ಗಿನ್ನಿಸ್ ದಾಖಲೆಯತ್ತ ದಾಪುಗಾಲು ಇಡುತ್ತಿದೆ ಎಂದು ಹೇಳಿದ ಅವರು, ಈ ಎಲ್ಲ ಸಾಧನೆಯ ಹಿಂದೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಹಾಗೂ ಅಧಿಕಾರಿಗಳ ಅವಿರತ ಶ್ರಮ ಇದೆ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ತಿಳಿಸಿದರು.

RELATED ARTICLES  ರೋಟರಿ ಕ್ಲಬ್ ಕುಮಟಾ ಹಾಗೂ ಇಂಟರ್ಯಾಕ್ಟ್ ಕ್ಲಬ್ ಸಿ.ವಿ.ಎಸ್.ಕೆ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಯಶಸ್ವಿಯಾದ ವನಮಹೋತ್ಸವ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರಿನಲ್ಲಿ ಮಹಿಳೆಯರಿಗೆ ಪಿಂಕ್ ಸೀಟುಗಳನ್ನು ಕಾಯ್ದಿರಿಸಿ ಹೊಸ ಯೋಜನೆ ಜಾರಿಗೆ ತಂದಿತ್ತು, ಈ ಯೋಜನೆ ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಸಂಚರಿಸುವ ಬಸ್ಸುಗಳಿಗೆ ವಿಸ್ತರಿಸಲಾಗುವುದು, ಪ್ರತಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಸಾರಿಗೆ ಬಸ್ಸುಗಳಲ್ಲಿ ಓಡಾಡುವಂತೆ ಪ್ರೋತ್ಸಾಹಿಸುವ ಬಸ್ ದಿನಾಚರಣೆಗಳು ರಾಜ್ಯದಲ್ಲಿ ಯಶಸ್ವಿಯಾಗುತ್ತಿವೆ. ಮುಂದಿನ ಶೈಕ್ಷಣಿಕ ವರ್ಷದಿಂದ 20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಲಾಗುವುದು ಎಂದು ಸಂಸ್ಥೆಯ ಕೊಡುಗೆಗಳ ಬಗ್ಗೆ ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ತಾವು ಅಧಿಕಾರಕ್ಕೆ ಬಂದರೆ ಜನಸಾಮಾನ್ಯನ ಖಾತೆಯಲ್ಲಿ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿದ್ದರು. ಯಾರಿಗೆ ಎಷ್ಟು ಹಣ ಬಂದಿದೆ ತಿಳಿದಿಲ್ಲ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಎರಡು ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಅವರಿಂದ ಸಾಧ್ಯವಾಗಿಲ್ಲ ಎಂದು ಟೀಕೆ ಮಾಡಿದ ಎಚ್ ಎಮ್ ರೇವಣ್ಣ, ಸಿದ್ದರಾಮಯ್ಯನವರ ಸರ್ಕಾರ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗವನ್ನು ಸೃಷ್ಟಿಸಿದ್ದು, ಚುನಾವಣೆಯ ಪೂರ್ವದಲ್ಲಿ ನಾವು ನೀಡಿರುವ ಪ್ರಣಾಳಿಕೆಯಂತೆ ನಡೆದುಕೊಂಡಿದ್ದೇವೆ. ಇಂದು ಶಂಕುಸ್ಥಾಪನೆ ನೆರವೇರಿಸಿದ ಬಸ್ ನಿಲ್ದಾಣದ ಉದ್ಘಾಟನೆಯನ್ನು ಮುಂದೆ ನಮ್ಮ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES  ಅಧ್ಯಯನಕ್ಕೆ ತೆರಳಿದ್ದ ನೌಕೆಯಲ್ಲಿ ಎಂಜಿನ್ ವೈಪಲ್ಯ : ಮುಳುಗುವ ಹಂತ ತಲುಪಿದ ನೌಕೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಾರಿಗೆ ಸಚಿವ ಎಚ್ ಎಂ ರೇವಣ್ಣ ನವರು ಈ ಕ್ಷೇತ್ರದ ಯಾವುದೇ ಬೇಡಿಕೆಗೆ ಇದುವರೆಗೂ ಇಲ್ಲ ಎಂದು ಹೇಳಿಲ್ಲ, ಹೀಗಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿದೆ. ಕಳೆದ 20 ವರ್ಷಗಳಿಂದ ಇಲ್ಲದ ಪುರ ವಾಗಿದ್ದ ಯಲ್ಲಾಪುರ ಈಗ ಎಲ್ಲಾದರ ಪುರವಾಗಿದೆ ಎಂದು ಪರೋಕ್ಷವಾಗಿ ತಮ್ಮನ್ನು ಟೀಕಿಸುವವರನ್ನು ತಿವಿದರು.
ಮುಂಡಗೋಡ ತಾಲೂಕಿನ ಹೊಲಗಳಿಗೆ ನೀರುಣಿಸುವ 360 ಕೋಟಿ ರುಪಾಯಿ ಯೋಜನೆಗೆ ಸಿದ್ದರಾಮಯ್ಯನವರ ಸರ್ಕಾರ ಮಂಜೂರಾತಿ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಬಡವರಿಗೆ ಉಚಿತ ಅಕ್ಕಿ ಸೇರಿದಂತೆ, ರೈತರಿಗೆ 50 ಸಾವಿರ ರೂಪಾಯಿ ಸಾಲ ಮನ್ನಾ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಸಮಾಜದ ಎಲ್ಲಾ ವರ್ಗದ ಜನರಿಗೆ ಕೊಟ್ಟಿದ್ದಾರೆ. ಶಿಕ್ಷಣ ಕೇವಲ ಶ್ರೀಮಂತರ ಸ್ವತ್ತಾಗಬಾರದು ಎನ್ನುವ ಕಾರಣಕ್ಕೆ ಸಮಾಜದ ಬಡವರ್ಗದವರಿಗೆ ಉಚಿತ ಶಿಕ್ಷಣ ಹಾಗೂ ಹೆಣ್ಣುಮಕ್ಕಳಿಗೆ ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣವನ್ನು ಉಚಿತವಾಗಿ ನೀಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂದು ಹೆಬ್ಬಾರ್ ಹೇಳಿದರು.