ಮಂಗಳೂರು,: ಬಿ ಜೆ ಪಿ ಅಧಿಕಾರಕ್ಕೆ ಬಂದ ಮೇಲೆ ಬಡವರ-ಶ್ರೀಮಂತರ ಅಂತರ ಹೆಚ್ಚಾಗಿದೆ. ಬಿಜೆಪಿ ದೇಶದ ಜನರಲ್ಲಿ ಹುಸಿ ಭರವಸೆಗಳನ್ನು ಬಿತ್ತುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಮಂಗಳೂರಿನಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸಬ್ ಕಾ ಸಾಥ್, ಸಬ್ ಕ ವಿಕಾಸ್ ಕೇವಲ ಘೋಷಣೆ ಮಾತ್ರ. ಕೇಂದ್ರ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲಾ ಜನರ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡುತ್ತಿದೆ. ಬಸವಣ್ಣನವರ ವಚನದಂತೆ ನುಡಿದಂತೆ ನಡೆದಿದೆ ಎಂದು ಹೇಳಿದರು. ಸಾಲ ಮನ್ನಾ ಮಾಡುವ ಮೂಲಕ ಸಿದ್ದರಾಮಯ್ಯ ರೈತರ ಬೆನ್ನಿಗೆ ನಿಂತಿದ್ದಾರೆ. ಆದರೆ ಮೋದಿಯವರು ನುಡಿದಂತೆ ನಡೆದಿಲ್ಲ. ತಾವು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಈ ವರೆಗೂ ಒಂದು ರೂ. ಕೂಡ ಯಾರ ಖಾತೆಗೂ ಬಂದಿಲ್ಲ. ಮೋದಿ ಸರ್ಕಾರ ಕೃಷಿಕರನ್ನು ರಕ್ಷಿಸುವ ಯಾವುದೇ ಕೆಲಸ ಮಾಡಿಲ್ಲ ಎಂದು ಹರಿಹಾಯ್ದ ಅವರು, ಕೇವಲ 15 ಜನ ಬಂಡವಾಳದಾರರ ಲಕ್ಷಾಂತರ ಕೋಟಿ ರೂ. ಸಾ ಲಮನ್ನಾ ಮಾಡಿದ ಮೋದಿ, ರೈತರ ಸಾಲ ಮನ್ನಾ ಮಾಡಲಿಲ್ಲ. ಇದನ್ನು ಪ್ರಶ್ನಿಸಿದರೆ ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇದು ನಮ್ಮ ನೀತಿಯಲ್ಲ ಎನ್ನುತ್ತಾರೆ. ರೈತರ, ಶ್ರಮಿಕರ ಶ್ರಮದಿಂದ ದೇಶ ನಿರ್ಮಾಣವಾಗಿದೆ. ಕಳೆದ ಏಳು ದಶಕಗಳಿಂದ ನಿಮ್ಮ ಶ್ರಮದಿಂದ ದೇಶ ಸದೃಢವಾಗಿದೆ. ಕಾಂಗ್ರೆಸ್ ಪಕ್ಷ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಆದರೆ ಬಿಜೆಪಿಯವರು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜನರ ದಾರಿ ತಪ್ಪಿಸುವ ಕಾಯಕದಲ್ಲಿ ತೊಡಗಿದ್ದಾರೆ ಎಂದರು
WhatsApp Image 2018 03 20 at 1.31.10 PM 768x576

RELATED ARTICLES  ಕೊನೆಗೂ ವರ್ಗಾವಣೆಯಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ.!

ಪ್ರಧಾನಿ ನರೇಂದ್ರ ಮೋದಿ ಕೂಡ ಬಸವಣ್ಣ, ನಾರಾಯಣಗುರು ಅವರನ್ನು ಉಲ್ಲೇಖಿಸಿ ಮಾತನಾಡುತ್ತಾರೆ. ಅವರು ಹೇಳಿದಂತೆ ನಡೆಯುವುದಿಲ್ಲ ಎಂದು ಕಿಡಿಕಾರಿದರು. ರೈತರು ಸಾಲದ ಸುಳಿಗೆ ಸಿಲುಕಿ ಸಾವನ್ನಪ್ಪುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಕನಿಷ್ಠ ಅವರ ನೆರವಿಗೆ ಬರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಮಾರು 8 ಸಾವಿರ ಕೋಟಿ ಸಾಲ ಮನ್ನಾ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಿದರು ಎಂದು ಅವರು ಹೇಳಿದರು

RELATED ARTICLES  ಶ್ರೀಭಾರತೀ ವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ಉದ್ಘಾಟನೆ.

ಮೋದಿ ಸರ್ಕಾರ ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ಪ್ರತಿವರ್ಷ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದ ಮೋದಿಯವರು 2 ಲಕ್ಷ ಉದ್ಯೋಗ ಕೂಡ ನೀಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಆಡಳಿತದ ವೈಖರಿಯನ್ನು ಹಾಡಿ ಹೊಗಳಿದರು. ಅನ್ನಭಾಗ್ಯ ಯೋಜನೆಯನ್ನು ರಾಹುಲ್ ಪ್ರಶಂಸಿಸಿದರು. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ್ದೇ ಕರ್ನಾಟಕ. ಅನುಭವ ಮಂಟಪವೇ ಪ್ರಜಾಪ್ರಭುತ್ವದ ಮೂಲಬೇರು ಎಂದು ಸ್ಮರಿಸಿದರು. ಬಸವಣ್ಣ, ನಾರಾಯಣಗುರುಗಳಂತಹ ಮಹಾನ್ ದಾರ್ಶನಿಕರ ಕರ್ಮಭೂಮಿ ಕರ್ನಾಟಕ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪ್ರಮೋದ್ ಮಧ್ವರಾಜ್, ವಿನಯ್‍ಕುಮಾರ್ ಸೊರಕೆ, ರಮಾನಾಥ ರೈ, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.