ಪ್ರತಿದಿನ ಫಾಸ್ಟ್ ಫುಡ್ ತಿನ್ನುವುದರಿಂದ ಹೊಟ್ಟೆ ಉರಿ, ಜೀರ್ಣ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗುವುದು ಸಾಮಾನ್ಯ. ಹೀಗಾಗಿ ಸೋಂಪುಕಾಳು, ಶುಂಠಿ, ಮೊಸರು ಮತ್ತು ಪಪ್ಪಾಯ ತಿನ್ನುವುದರಿಂದ ಹೊಟ್ಟೆ ತಂಪಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಜೀರ್ಣ ಪ್ರಕ್ರಿಯೆಯನ್ನು ಹೆಚ್ಚಿಸಲು ಶುಂಠಿ ಒಂದು ಅತ್ಯದ್ಭುತ ಗಿಡಮೂಲಿಕೆಯಾಗಿದೆ, ಶುಂಠಿ ಸೇವನೆಯಿಂದ ಹೊಟ್ಟೆ ಹಾಗೂ ಎದೆ ಉರಿ ಕಡಿಮೆಯಾಗುತ್ತದೆ. ಇದು ಕರುಳಿಗೆ ವಿಶ್ರಾಂತಿ ಮತ್ತು ಪಿತ್ತಜನಕಾಂಗ ನಾಳದ ಉರಿಯನ್ನು ಶಮನ ಮಾಡುತ್ತದೆ. ಊಟದ ನಂತರ ಶುಂಠಿಯ ಜೊತೆಗೆ ಸ್ವಲ್ಪ ಜೇನುತುಪ್ಪ ಹಾಗೂ ನಿಂಬೆಹಣ್ಣು ಸೇವಿಸಿದರೇ ಹೆಚ್ಚಿನ ಉಪಯೋಗವಾಗುತ್ತದೆ ಎಂದು ಪೌಷ್ಟಿಕಾಂಶ ಮತ್ತು ಆಹಾರ ತಜ್ಞೆ ಮೆಹರ್ ರಾಜಪೂತ್ ಮತ್ತು ಮಾಮಿ ಅಗರ್ ವಾಲ್ ತಿಳಿಸಿದ್ದಾರೆ.
ಇನ್ನೂ ಸೋಂಪು ಕಾಳಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ, ಗ್ಯಾಸ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟೀ ಜೊತೆ ಸೋಂಪು ಕಾಳು ಅಗಿದು ತಿನ್ನುವುದರಿಂದ ಜೀರ್ಣಕಾರಿ ಕಿಣ್ವಗಳನ್ನು ಹೆಚ್ಚಿಸುತ್ತದೆ. ಇದರಿಂದ ಎದೆ ಉರಿ, ಅಜೀರ್ಣ, ಹಾಗೂ ಹೊಟ್ಟೆಯ ಹಲವು ಸಮಸ್ಯೆಗಳು ಕಡಿಮೆಯಾಗುತ್ತವೆ. ಪ್ರತಿ ಊಟದ ನಂತರ ಚಮಚ ಸೋಂಪು ಕಾಳು ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ.
ಜೀರಿಗೆ, ಮೊಸರು , ಬಾಳೆಹಣ್ಣು ಪರಂಗಿ ಹಣ್ಣು ಸೇವನೆ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಜೀರ್ಣ ಕ್ರಿಯೆ ಹೆಚ್ಚಿ, ಎದೆ ಉರಿ ಹಾಗೂ ಹೊಟ್ಟೆ ಉರಿ ಕಡಿಮೆಯಾಗುತ್ತದೆ ಎಂದು ಆಹಾರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.