ಯಲ್ಲಾಪುರ ; ಸಾಮಾನ್ಯ ಜನರಿಗಿಂತ ಅಂಗ ವೈಕಲ್ಯತೆಯಿಂದ ಬಳಲುತ್ತಿರುವ ಜನರಿಗೆ ನೆರವಾಗುವುದು ದೇವರು ಮೆಚ್ಚುವ ಕೆಲಸ, ತಮ್ಮ ಅವಧಿಯಲ್ಲಿ 355 ವಿಕಲಚೇತನರಿಗೆ ತ್ರೀಚಕ್ರ ಸ್ಕೂಟರ್ ಅನ್ನು ನೀಡಲಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ತಾ.ಪಂ ಆವಾರದ ಗಾಂಧಿ ಕುಟೀರದಲ್ಲಿ ತಾ.ಪಂ ಹಾಗೂ ಪ.ಪಂ ಶೇ 3 ಕಾಯ್ದಿರಿಸಿದ ನಿಧಿಯಲ್ಲಿ ಅಂಗವಿಕಲ ಫಲಾನುಭವಿಗಳಿಗೆ ತ್ರೀಚಕ್ರ ವಾಹನ ಹಾಗೂ ಹೊಲಿಗೆ ಯಂತ್ರ, ಮತ್ತು ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಿ ಮಾತನಾಡಿದರು.
ಪಟ್ಟಣ ಪಂಚಾಯತಿ ನಿಧಿಯಲ್ಲಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ 9 ಜನ ಅಂಗವಿಕಲರಿಗೆ ತ್ರಿಚಕ್ರ ಸ್ಕೂಟರ್ ಹಾಗೂ ತಾಲೂಕಾ ಪಂಚಾಯತಿ ನಿಧಿಯಲ್ಲಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂರು ಜನರಿಗೆ ತ್ರೀಚಕ್ರ ಸ್ಕೂಟರನ್ನು ವಿತರಿಸಲಾಗಿದೆ, ತಮ್ಮ(ಶಾಸಕರ) ನಿಧಿಯಲ್ಲಿ 55 ಅಂಗವಿಕಲರಿಗೆ ಇನ್ನು ಕೆಲವೇ ದಿನಗಳಲ್ಲಿ ತ್ರೀಚಕ್ರ ಸ್ಕೂಟರನ್ನು ವಿತರಿಸಲಾಗುವುದು. ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ವರ್ಗದ ಎಲ್ಲ ರೀತಿಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವ ಜನರ ಹಿತದೃಷ್ಟಿಯಿಂದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕರು ಎಸ್.ಸಿ-ಎಸ್.ಟಿ ಪ್ರಾಥಮಿಕ ಪ್ರೌಢ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ವಿತರಿಸಿದರು. ಅಲ್ಲದೆ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಿದರು.
ತಾಲೂಕ ಪಂಚಾಯತಿ ಅಧ್ಯಕ್ಷೆ ಭವ್ಯ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯತಿ ಅಧ್ಯಕ್ಷ ಶಿರೀಶ ಪ್ರಭು, ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ವಿಜಯ ಮಿರಾಶಿ,
ತಾಲೂಕ ಪಂಚಾಯತಿ ಉಪಾಧ್ಯಕ್ಷೆ ಸುಜಾತ ಸಿದ್ದಿ, ಕಾರ್ಯ ನಿರ್ವಾಹಕ ಅಧಿಕಾರಿ ವಿಠ್ಠಲ ನಾಟೇಕರ, ಸದಸ್ಯರಾದ ಮಂಗಲಾ ನಾಯ್ಕ, ರಾಧಾ ಹೆಗಡೆ, ಮಾಲಾ ಚಂದಾವರಕರ, ಲಕ್ಷ್ಮೀನಾರಾಯಣ ಗುಮ್ಮಾನಿ, ಪ.ಪಂ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾನಿ, ಸದಸ್ಯರಾದ ಗಣೇಶ ಪಾಟಣಕರ, ಪುಷ್ಪಾ ನಾಯ್ಕ, ವಂದನಾ ಭಟ್, ಮಂಜುನಾಥ ರಾಯ್ಕರ, ರೇಣುಕಾ ನೆಲವಡಿ ಮುಂತಾದವರು ಈ ಸಂದರ್ಭದಲ್ಲಿದ್ದರು.