ಚೆನ್ನೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಕೋಟ್ಯಾಂತರ ರುಪಾಯಿ ವಂಚಿಸುತ್ತಿರುವ ಮತ್ತೊಂದು ಪ್ರಕರಣ ಬುಧವಾರ ಬೆಳಕಿಗೆ ಬಂದಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ನೇತೃತ್ವದ 14 ಬ್ಯಾಂಕ್ ಗಳ ಒಕ್ಕೂಟಕ್ಕೆ 824.15 ಕೋಟಿ. ರುಪಾಯಿ ವಂಚಿಸಿದ ಆರೋಪದ ಮೇಲೆ ಚೆನ್ನೈ ಮೂಲದ ಕನಿಷ್ಕ್ ಗೋಲ್ಡ್ ಪ್ರೈ. ಲಿ.(ಕೆಜಿಪಿಎಲ್) ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದೆ.
14 ಬ್ಯಾಂಕ್ ಗಳ ಪರವಾಗಿ ಎಸ್ ಬಿಐ ನೀಡಿದ ದೂರಿನ ಆಧಾರದ ಮೇಲೆ ಕೆಜಿಪಿಎಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಸಿಬಿಐ ಅಧಿಕಾರಿಗಳು ಕೆಜಿಪಿಎಲ್ ಗೆ ಸಂಬಂಧಿಸಿದ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಕೆಜೆಪಿಎಲ್ ನಿರ್ದೇಶಕ ಹಾಗೂ ಪ್ರವರ್ತಕರಾದ ಭೂಪೇಶ್ ಕುಮಾರ್ ಜೈನ್ ಮತ್ತು ಅವರ ಪತ್ನಿ ನೀತಾ ಜೈನ್ ಬ್ಯಾಂಕ್ ಗಳಿಗೆ ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆ.
ದಂಪತಿಗಳು ರಾತ್ರೋ ರಾತ್ರಿ ತಮ್ಮ ಮಳಿಗೆಗಳಿಗೆ ಬಾಗಿಲು ಜಡಿದು, ದಾಖಲೆಗಳನ್ನು ಮಾಯ ಮಾಡಿದ್ದಾರೆ ಎಂದು ಎಸ್‌ಬಿಐ ಆರೋಪಿಸಿದೆ.
ಈ ಸಂಬಂಧ ಎಸ್ ಬಿಐ ಸಿಬಿಐಗೆ ದೂರು ನೀಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದೆ.
ಚೆನ್ನೈನ ಟಿ ನಗರದಲ್ಲಿ ಕನಿಷ್ಕ್ ರಿಜಿಸ್ಟರ್ಡ್ ಕಚೇರಿ ಇದ್ದು, ಭೂಪೇಶ್ ಕುಮಾರ್ ಜೈನ್ ಮತ್ತು ಅವರ ಪತ್ನಿ ನೀತಾ ಜೈನ್ ಇಬ್ಬರ ಸುಳಿವಿಲ್ಲ, ಬಹುಶಃ ಮಾರಿಷಶ್‌ಗೆ ಪರಾರಿಯಾಗಿರಬಹುದು ಎಂದು ಬ್ಯಾಂಕ್ ತಿಳಿಸಿದೆ.
ಒಟ್ಟು 14 ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಒಕ್ಕೂಟದ ನೇತೃತ್ವದಲ್ಲಿ ಕನಿಷ್ಕ್ ಗೋಲ್ಡ್ ಜ್ಯುವೆಲರಿಗೆ ಸಾಲ ನೀಡಲಾಗಿತ್ತು. ಜನವರಿ 25, 2018ರಲ್ಲಿ ಸಿಬಿಐಗೆ ನೀಡಿರುವ ದೂರಿನಲ್ಲಿ ಕನಿಷ್ಕ್ ರಾತ್ರೋರಾತ್ರಿ ತನ್ನ ಮಳಿಗೆಗಳನ್ನು ಮುಚ್ಚಿದ್ದು, ದಾಖಲೆಗಳನ್ನು ತಿರುಚಿದೆ ಎಂದು ಆರೋಪಿಸಿದೆ.