ಬೆಂಗಳೂರು: ರಾಜ್ಯದಾದ್ಯಂತ ಇದೇ 23 ರಿಂದ ಏಪ್ರಿಲ್ 6ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8.54 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ.
ಬಿಗಿ ಭದ್ರತೆ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಲ್ಲಿ ಪರೀಕ್ಷೆ ನಡೆಸಲು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.
ಪರೀಕ್ಷಾ ಕೇಂದ್ರ: ರಾಜ್ಯದಲ್ಲಿ 2,817 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 45 ಸೂಕ್ಷ್ಮ ಮತ್ತು 23 ಅತಿ ಸೂಕ್ಷ್ಮ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ ಎಂದು ಮಂಡಳಿಯ ನಿರ್ದೇಶಕಿ ವಿ. ಸುಮಂಗಲ ತಿಳಿಸಿದರು.
ಪರೀಕ್ಷಾ ದಿನದ ಮುಖ್ಯ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಸಿಸಿಟಿವಿ ಕಣ್ಗಾವಲಿನಲ್ಲಿಯೇ ನಡೆಸುವಂತೆ ಸೂಚಿಸಲಾಗಿದೆ. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಇರಿಸುವ ಭದ್ರತಾ ಕೊಠಡಿಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ತಾವು ಅಭ್ಯಸಿಸಿದ ಶಾಲೆಯನ್ನು ಬಿಟ್ಟು ಬೇರೆ ಶಾಲೆಗಳಲ್ಲಿ ಪರೀಕ್ಷೆ ಬರೆಯುವಂತೆ ಈ ಬಾರಿ ವ್ಯವಸ್ಥೆ ಮಾಡಲಾಗಿದೆ. ಭೌಗೋಳಿಕ ಕಾರಣಗಳಿಂದಾಗಿ 1,806 ಪರೀಕ್ಷಾ ಕೇಂದ್ರಗಳಿಗೆ ಬೇರೆ ಸರ್ಕಾರಿ ಶಾಲೆಗಳ ಮುಖ್ಯಸ್ಥರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಲಾಗಿದೆ.
33 ವಿಷಯಗಳಲ್ಲಿ ಪರೀಕ್ಷೆ: ಎಂಟು ಪ್ರಥಮ ಭಾಷೆ, ಎರಡು ದ್ವಿತೀಯ ಭಾಷೆ, ಒಂಬತ್ತು ತೃತೀಯ ಭಾಷೆ, ಮೂರು ಸಾಮಾನ್ಯ ಐಚ್ಛಿಕ ವಿಷಯ, ನಾಲ್ಕು ವಿಶೇಷ ಐಚ್ಛಿಕ ವಿಷಯ, ಎರಡು ತಾಂತ್ರಿಕ ವಿಷಯ, ಐದು ಎನ್‌ಎಸ್‌ಕ್ಯೂಎಫ್ ವಿಷಯಗಳಲ್ಲಿ ಒಟ್ಟಾರೆ (ಏಳು ಮಾಧ್ಯಮಗಳಲ್ಲಿ) 33 ವಿಷಯಗಳಲ್ಲಿ ಪರೀಕ್ಷೆ ನಡೆಯಲಿವೆ.
ಆಯ್ದ 100 ಶಾಲೆಗಳಲ್ಲಿ ತೃತೀಯ ಭಾಷೆಗೆ ಬದಲಾಗಿ ‘ನ್ಯಾಷನಲ್ ಸ್ಕಿಲ್ ಕ್ವಾಲಿಟಿ ಫ್ರೇಮ್‌ವರ್ಕ್’ನ (ಎನ್‌ಎಸ್‌ಕ್ಯೂಎಫ್) ಐದು ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, 3,785 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಅಲ್ಲದೆ ಆಯ್ದ 9 ಪ್ರೌಢಶಾಲೆಗಳನ್ನು ಕಿರಿಯ ತಾಂತ್ರಿಕ ಶಾಲೆ ಎಂದು ಪರಿಗಣಿಸಿದ್ದು, ಇಲ್ಲಿನ 297 ವಿದ್ಯಾರ್ಥಿಗಳು ಆರು ಸಾಮಾನ್ಯ ವಿಷಯಗಳ ಜತೆಗೆ ತಾಂತ್ರಿಕ ವಿಷಯಗಳ ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ಮಾಹಿತಿ ನಿಡಿದರು.
ವಿಚಕ್ಷಣಾ ದಳ: ರಾಜ್ಯ ಮತ್ತು ವಿಭಾಗೀಯ ಮಟ್ಟದಲ್ಲಿ 21 ಅಧಿಕಾರಿಗಳನ್ನು ಜಿಲ್ಲಾ ವೀಕ್ಷಕರನ್ನಾಗಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ 2,043 ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಡಯಟ್‌ನ 406 ಉಪನ್ಯಾಸಕರು ಅಥವಾ ಹಿರಿಯ ಉಪನ್ಯಾಸಕರನ್ನು ವಿಚಕ್ಷಣಾ ದಳದ ಸದಸ್ಯರನ್ನಾಗಿಸಿ, 34 ಡಯಟ್‌ಗಳ ಪ್ರಾಂಶುಪಾಲರನ್ನು ಜಿಲ್ಲಾ ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಜಿಲ್ಲಾ ಉಪ ನಿರ್ದೇಶಕರು, ಶಿಕ್ಷಣಾಧಿಕಾರಿಗಳು ಮತ್ತು ಉಪ ಯೋಜನಾ ಸಮನ್ವಯಾಧಿಕಾರಿಗಳ ನೇತೃತ್ವದಲ್ಲಿ (306 ಸದಸ್ಯರ) ವಿಚಕ್ಷಣಾ ದಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ 609 ಸದಸ್ಯರ ವಿಚಕ್ಷಣಾ ದಳ ಕಾರ್ಯ ನಿರ್ವಹಿಸಲಿದೆ. ಅದರ ಜತೆಗೆ 2,817 ಕೇಂದ್ರಗಳಿಗೆ ತಲಾ ಒಬ್ಬರಂತೆ ಸ್ಥಾನಿಕ ವಿಚಕ್ಷಣಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅಲ್ಲದೆ ಪ್ರತೀ ಕೇಂದ್ರಗಳಿಗೂ ತಲಾ ಇಬ್ಬರು ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಈ ಬಾರಿಯ ವಿಶೇಷಗಳು
* ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ.
* ಇದೇ ಮೊದಲ ಬಾರಿಗೆ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್) ಮೂಲಕ ಆನ್‌ಲೈನ್‌ನಲ್ಲಿ ಸಂಗ್ರಹಿಸಿದ ಮಾಹಿತಿಯಂತೆಯೇ ಪರೀಕ್ಷಾರ್ಥಿಗಳ ವಿವರ ಸಿದ್ಧ.
* ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪ್ರವೇಶ ಪತ್ರ.
* ಪರೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಎಲ್ಲ ಸಿಬ್ಬಂದಿ, ವೀಕ್ಷಣಾ ದಳದ ಸದಸ್ಯರಿಗೆ ಮಂಡಳಿಯಿಂದಲೇ ಗುರುತಿನ ಚೀಟಿ.
* ಅಂಗವಿಕಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ನೆಲಮಹಡಿಯಲ್ಲಿ ಆಸನ ವ್ಯವಸ್ಥೆ.
* ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನು ಹೊರತುಪಡಿಸಿ ಮತ್ಯಾರು ಫೋನ್ ಬಳಸುವಂತಿಲ್ಲ.
ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳ ವಿವರ:
ವಿವರ ಬಾಲಕರು ಬಾಲಕಿಯರು ಒಟ್ಟು
ಶಾಲಾ ವಿದ್ಯಾರ್ಥಿಗಳು 3,88,701 3,72,271 7,60,972
ಪುನರಾವರ್ತಿತರು 49,294 20,959 70,253
ಖಾಸಗಿ ಅಭ್ಯರ್ಥಿಗಳು 18,108 5091 23,199
ಒಟ್ಟು 4,56,103 3,98,321 8,54,424