ಡಾ• ಕೃಷ್ಣಮೂರ್ತಿ ಅವರಿಗೆ ಕೇಂದ್ರ ಸಚಿವರಿಂದ ವಿಶೇಷ ಪ್ರಶಸ್ತಿ ಸಂದಿದೆ.
ಸಂಸದ ಡಾ• ಸುಬ್ರಹ್ಮಣಿಯನ್ ಸ್ವಾಮಿ ಅವರ ವಿರಾಟ್ ಹಿಂದೂಸ್ಥಾನ್ ಸಂಗಮ ಸಂಘಟನೆಯ ನೇತೃತ್ವದಲ್ಲಿ ಇಂದು ನಡೆದ ಭಾರತೀಯ ಗೋತಳಿಗಳ ಕುರಿತು ಮುಂಬಯಿಯಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದ ಕಾರ್ಯದರ್ಶಿಗಳೂ, ರಾಜ್ಯ ಗೋಪರಿವಾರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳೂ ಆದ ಡಾ|| ವೈ. ವಿ. ಕೃಷ್ಣಮೂರ್ತಿ ಅವರಿಗೆ ದೇಸಿಗೋವು ಕ್ಷೇತ್ರದಲ್ಲಿ ಮಾಡಿದ ಅಪಾರ ಸೇವೆಗಾಗಿ ಕೇಂದ್ರ ಸಚಿವಾಲಯದಿಂದ ವಿಶೇಷ ಗೌರವ ಲಭ್ಯವಾಗಿದೆ.
ಸ್ವಾಮಿ ಅವರು ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಗೋಪಾಲ್ ಸುತಾರಿಯಾ, ಶ್ರೀ ಗುರು ಅರಿಹಂತ ಋಷಿ, ಪಸು ಶೇಶಾದ್ರಿ ರಾಘವನ್, ವಿಜ್ಞಾನಿಗಳಾದ ವೀರೇಂದ್ರ ಯಾಗ್ನಿಕ್, ಡಾ|| ಅನುಜ್ ಶ್ರೀವಾಸ್ತವ್, ಸಿ.ಪಿ. ಶ್ರೀನಿವಾಸ್ ಘಡಗೆ, ಗೋವಿಂದ ದಾಸ್, ಮುಜಾಫರ್ ಹುಸೆನ್, ಅಲೆಕ್ಸಾಂಡರ್ ಹೆನ್ರಿ ಇನ್ನಿತರರು ಭಾಗವಹಿಸಿದ್ದರು.
ಈ ವಿಚಾರ ಸಂಕಿರಣದಲ್ಲಿ ಗೋವು ಮತ್ತು ಅರ್ಥಿಕತೆ, ಗೋವು ಮತ್ತು ಆಧ್ಯಾತ್ಮ, ಗೋವು ಮತ್ತು ಆರೋಗ್ಯ, ಗೋವು, ಕೃಷಿ ಮತ್ತು ಪರಿಸರ ಇವೇ ಮೊದಲಾದ ಗೋ ಆಧಾರಿತ ವಿಷಯಗಳ ಕುರಿತು ಚರ್ಚಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ಹನ್ಸರಾಜ್ ಅಹಿರ್, ಕೇಂದ್ರ ಸರ್ಕಾರದ ರಾಜ್ಯ ಖಾತೆ ಗೃಹಮಂತ್ರಿಗಳು ಭಾಗವಹಿಸಿದ್ದರು. ಇವರು ಡಾ|| ಕೃಷ್ಣಮೂರ್ತಿ ಅವರಿಗೆ ವಿಶೇಷ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
ಕೃಷ್ಣಮೂರ್ತಿ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು:
ಅನನ್ಯ ಗೋಸೇವೆಗಾಗಿ ವಿಶೇಷ ಪ್ರಶಸ್ತಿ ಪಡೆದ ಡಾ|| ಕೃಷ್ಣಮೂರ್ತಿ ಅವರನ್ನು ಗೋಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಭೂತಪೂರ್ವವಾಗಿ ಅಭಿನಂದಿಸಿದರು. ಅಷ್ಟೇ ಅಲ್ಲದೇ, ಕೃಷ್ಣಮೂರ್ತಿ ಅವರ ನಿಸ್ವಾರ್ಥ ಗೋಸೇವೆ ಮತ್ತು ಅವರ ಸಾತ್ವಿಕ ಸ್ವಭಾವವನ್ನು ಅರಿತಿರುವ ಗೋಭಕ್ತರು ಕೃಷ್ಣಮೂರ್ತಿ ಅವರು ಇನ್ನೂ ಹೆಚ್ಚಿನ ಪ್ರಶಸ್ತಿಗೆ ಅರ್ಹರು, ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಕೇಂದ್ರಸರ್ಕಾರವನ್ನು ಆಗ್ರಹಿಸಿದರು.
ವರದಿ :ಶಿಶಿರ ಅಂಗಡಿ.