ಸುಮನಾ ಟ್ರಸ್ಟ್ (ರಿ) ಹೊನ್ನಾವರದ ಆಲೋಚನಾ ವೇದಿಕೆಯು ಪ್ರತಿವರ್ಷ ನೀಡುತ್ತಿರುವ ಸುಮನಶ್ರೀ ಪ್ರಶಸ್ತಿಗೆ (೨೦೧೭-೧೮) ಕುಮಟಾ ತಾಲೂಕಿನ ಕುಡ್ತಗಿ ಬೈಲಿನಲ್ಲಿ ವಾಸವಾಗಿರುವ ೮೭ರ ಹರೆಯದ ನೀಲಾವತಿ ಗೋವಿಂದ ಅಂಬಿಗ ಅವರು ಆಯ್ಕೆಯಾಗಿದ್ದಾರೆ.
ತಂದೆ ತಾನು ಶಿವಪ್ಪ ಅಂಬಿಗ ತಾಯಿ ಲಕ್ಷ್ಮಿ ಅಂಬಿಗ.ಅವರನ್ನು ಮಿರ್ಜಾನ ಗ್ರಾಮದ ಗೋವಿಂದ ಅಂಬಿಗರಿಗೆ ಲಗ್ನ ಮಾಡಿ ಕೊಡಲಾಗಿತ್ತು. ಅವರು ಸಮುದ್ರಕ್ಕೆ ಗಾಳ ಹಾಕಲು ಹೋಗಿ,ಕೆಮ್ಸಿ,ಏರಿ,ಕಡೇರಿ,ಬಣಗು,ಗೋಲಿ,ಕಲ್ಮುರಿ ಮುಂತಾದ ದೊಡ್ಡ ಮೀನುಗಳನ್ನು ಹಿಡಿದು ತಂದು ಗುತ್ತಿಗೆದಾರರಿಗೆ ಮಾರುತ್ತಿದ್ದರು.ಸಣ್ಣ ಪುಟ್ಟ ಮೀನುಗಳನ್ನುನೀಲಾವತಿ ಅವರು ಮಿರ್ಜಾನ ಪೇಟೆಗೆ ಹೋಗಿ ಮಾರಾಟ ಮಾಡುತ್ತಿದ್ದರು.ಮೂರು ಹೆಣ್ಣು ಹಾಗು ಇಬ್ಬರು ಗಂಡು ಮಕ್ಕಳನ್ನು ಬಡತನದ ಬವಣೆಯಲ್ಲಿಯು ಪ್ರೀತಿಯಿಂದ ಸಾಕಿ ಸಲಹಿದ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಜನಪದ ಹಾಡುಗಳನ್ನು ಹಾಡುತ್ತಿದ್ದರು.ಅಂಬಿಗರ ಜನಪದ ಹಾಡುಗಳು ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಸಂದರ್ಭದಲ್ಲಿ ನೀಲಾವತಿ ಅವರು ಆ ಜನಾಂಗದ ಹಾಡುಗಾರರಾಗಿ ನಮ್ಮ ನಡುವೆ ಬದುಕಿದ್ದಾರೆ.ಬಡತನ,ಬಿಡುವಿರದ ದುಡಿಮೆ ಮತ್ತು ಪೌಷ್ಠಿಕ ಆಹಾರದ ಕೊರತೆಯಿಂದ ಬಳಲಿ ಬೆಂಡಾದ ಅವರಿಗೆ ಬಹುಪಾಲು ಹಾಡುಗಳು ಮರೆತು ಹೋಗಿವೆ.ಏಳೆಂಟು ವರ್ಷದ ಹಿಂದೆ ಗಂಡ ಕಾಲವಾದ ನಂತರ ತವರಿಗೆ ಬಂದು ಅಲ್ಲಿ ತೆಂಗಿನ ಗರಿಯ ತಟ್ಟಿಯ ಕಿರು ಮಾಡ(ಓರಿ)ಯಲ್ಲಿ ಬದುಕುತ್ತಿದ್ದಾರೆ.
ಹಿರಿಯ ಮಗ ದಯಾನಂದ ಅನಾರೋಗ್ಯದಿಂದ ಕೆಲಸ ಮಾಡಲಾಗದೆ ಮನೆಯಲ್ಲಿ ಇದ್ದಾರೆ.ಎರಡನೆ ಮಗ ಜಗದೀಶ ಕೂಲಿ ಮಾಡಿ ಬದುಕುತ್ತಿದ್ದಾರೆ.ಮೂವರು ಹೆಣ್ಣು ಮಕ್ಕಳ ಮದುವೆ ಮಾಡಿ ಕೊಟ್ಟಿದ್ದಾರೆ. ಗಂಡ ತೀರಿದ ಬಳಿಕ ಕುಮಟಾದ ಕೆಲವರ ಮನೆಯ ಮನೆಯ ಕಸ ಮುಸುರೆ ಕೆಲಸ ಮಾಡಿದ ನೀಲಾವತಿ ಅವರು ವಯಸ್ಸಾದ ಕಾರಣ ಆ ಕೆಲಸವನ್ನು ಬಿಟ್ಟಿದ್ದಾರೆ.ಬಡತನವನ್ನೆ ಉಂಡು,ಉಟ್ಟು,ಹಾಸಿ,ಹೊದೆದು ಬದುಕುತ್ತಿದ್ದಾರೆ.
‘ಅಂಬಿಗ ನಾ ನಿನ್ನ ನಂಬಿದೆ ಜಗದಂಬಾ ರಮಣ ನಾ ನಿನ್ನ ನಂಬಿದೆ’ ಎಂದು ಪುರಂದರ ದಾಸರು ದೇವರನ್ನೆ ಅಂಬಿಗ ಎಂದು ಕರೆದರು.ಆದರೆ ಅಂಬಿಗರ ಬದುಕಿನ ಹಾಡು ಪಾಡು ಆ ದೇವರಿಗೆ ಗೊತ್ತು.ನದಿಯ ದಡದಲ್ಲಿ ನಿಂತವರನ್ನು ತಮ್ಮ ದೋಣಿಯಿಂದ ಸುರಕ್ಷಿತವಾಗಿ ದಾಟಿಸುವ ಅಂಬಿಗರಲ್ಲಿ ಬಹುಪಾಲು ಜನರು ಬಾಳಿನ ದಡವನ್ನು ಸೇರಲು ಸಾಧ್ಯವಾಗದೆ ನಡು ನೀರಿನಲ್ಲಿ ನಿಂತಿದ್ದಾರೆ.ಅಂತಹ ಅಂಬಿಗ ಜನಾಂಗದ ನೀಲಾವತಿ ಅಂಬಿಗರನ್ನು ಸುಮನಶ್ರೀ ಪ್ರಶಸ್ತಿಗೆ ಆಯ್ಕೆ ಸಮಿತಿಯ ಗೌರವ ಸಲಹೆಗಾರರಾದ ಬಿ.ವಿ.ನಾಯಕ ಸಗಡಗೇರಿ ಸಂಚಾಲಕರಾದ ಡಾಶ್ರೀಪಾದ ಶೆಟ್ಟಿ ಸದಸ್ಯರಾದ ಪ್ರೊ.ಬೀರಣ್ಣ ನಾಯಕ ಮೊಗಟಾ,ದೇವಿದಾಸ ಸುವರ್ಣ,ಹೊನ್ನಪ್ಪಯ್ಯ ಗುನಗ,ವಿನೋದ ಅಂಬಿಗ ಇವರು ಆಯ್ಕೆ ಮಾಡಿದ್ದು,ಪ್ರಶಸ್ತಿಯು ೫೦೦೦ರೂ ನಗದು,ಪ್ರಶಸ್ತಿ ಫಲಕ,ಸ್ಮರಣಿಕೆ ಗಳೊಂದಿಗೆ ವಿದ್ಯುಕ್ತವಾಗಿ ಸನ್ಮಾನಿಸಲಾಗುವುದು.ನೀಲಾವತಿ ಅವರಿಗೆ ಸದ್ಯದಲ್ಲಿಯೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಲೋಚನಾ ವೇದಿಕೆಯ ಅಧ್ಯಕ್ಷ ಡಾ.ಶ್ರೀಪಾದ ಶೆಟ್ಟಿ ತಿಳಿಸಿದ್ದಾರೆ.