ಮೂಡಬಿದಿರೆ: ಪುರಸಭಾ ತ್ಯಾಜ್ಯ ವಿಲೇವಾರಿ ಘಟಕವಿರುವ ಕರಿಂಜೆ ಮಾರಿಂಜ ಗುಡ್ಡದ ಪರಿಸರದಲ್ಲಿ ಬೇಟೆಯಾಡಲೆಂದು ತೆರಳಿದ್ದ ಗೆಳೆಯರಿಬ್ಬರ ಶವಗಳು ಕರಿಂಜೆ ಅರಂತ ಬಾಕ್ಯಾರು ಗದ್ದೆಯಲ್ಲಿ ಗುರುವಾರ ಪತ್ತೆಯಾಗಿವೆ. ದುರ್ಘ‌ಟನೆಗೆ ವಿದ್ಯುತ್‌ ಸ್ಪರ್ಶ ಕಾರಣವೇ ಅಥವಾ ಕಾಡುಪ್ರಾಣಿಗಳಿಂದ ಸಾವು ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮೂಡಬಿದಿರೆ ಪೇಪರ್‌ಮಿಲ್‌ ಬಳಿಯ ಉದ್ಯಮಿ ಗ್ರೇಶನ್‌ ರೋಡ್ರಿಗಸ್‌ (34) ಮತ್ತು ಅವರ ಗೆಳೆಯ, ಕರಿಂಜೆ ಕಕ್ಕೆಬೆಟ್ಟು ಬಳಿಯ ಕೃಷಿಕ ಪ್ರವೀಣ್‌ ತಾವ್ರೋ (32) ಮೃತಪಟ್ಟವರು.

ಸಾವಿಗೀಡಾಗಿರುವ ಪ್ರವೀಣ್‌ ತಾವ್ರೋ ಮತ್ತು ಗ್ರೇಶನ್‌.
ತಿಳಿಸದೆ ಹೋಗಿದ್ದರು.ಬೇಟೆಗೆ ಹೋಗುವ ಹವ್ಯಾಸವಿರುವ ಗ್ರೇಶನ್‌ ರೋಡ್ರಿಗಸ್‌ ಮತ್ತು ಪ್ರವೀಣ್‌ ತಾವ್ರೋ ಅವರು ಕಳೆದ ಸೋಮವಾರ ಕರಿಂಜೆ ಮಾರಿಂಜಗುಡ್ಡದ ಬದಿಯ ಕಾಡಿಗೆ ಹೋಗಿ ಬರುವಾಗ ಮೊಲವೊಂದನ್ನು ತಂದಿದ್ದರು ಎನ್ನಲಾಗಿದೆ. ಮರುದಿನ ಅವರು ಮತ್ತೆ ಬೇಟೆಗೆ ಹೋಗಿದ್ದು, ಆಗ ಈ ದುರ್ಘ‌ಟನೆ ನಡೆದಿರುವುದು ಯಾರ ಗಮನಕ್ಕೂ ಬರಲಿಲ್ಲ ಎನ್ನಲಾಗಿದೆ. ಮಂಗಳವಾರ ಕರಿಂಜೆಗುತ್ತು ಶಾಲೆಯ ಬಳಿಯ ನಿವಾಸಿ ಗ್ರೇಶನ್‌ ಅವರು ತನ್ನ ಮಿತ್ರ, ಆಟೋರಿಕ್ಷಾ ಚಾಲಕ ಕುಕ್ಯಟ್ಟೆಗುತ್ತು ಯಶವಂತ ಶೆಟ್ಟಿ ಅವರ ಮನೆಯಂಗಳದಲ್ಲಿ ತಮ್ಮ ಮೆರೂನ್‌ ಬಣ್ಣದ ಬೊಲೆರೋ ವಾಹನ ಇರಿಸಿ ಪ್ರವೀಣ್‌ ಜತೆ ಮುಂದೆ ಕಾಲ್ನಡಿಗೆಯಲ್ಲಿ ಕಾಡಿನತ್ತ ಸಾಗಿದ್ದರು. ಆದರೆ ಗ್ರೇಶನ್‌ ರೋಡ್ರಿಗಸ್‌ ಮತ್ತು ಪ್ರವೀಣ್‌ ಅವರು ಶಿಕಾರಿಗೆ ಹೋಗಿದ್ದ ವಿಚಾರ ಅವರ ಮನೆಯವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.

ಮಂಗಳವಾರ ರಾತ್ರಿ ಕಾಡಿನತ್ತ ತೆರಳಿದ್ದ ಈರ್ವರೂ ಬುಧವಾರವೂ ಬಾರದೆ ಇರುವುದರಿಂದ ನಾಪತ್ತೆಯಾಗಿರುವುದು ಖಚಿತವಾಗಿ ಹತ್ತಿರದ ಸಂಬಂಧಿಕರ ಮನೆಗಳಲ್ಲಿ, ಆಸುಪಾಸಿನ ಊರುಗಳಲ್ಲಿ ಹುಡುಕಾಟ ಆರಂಭಿಸಲಾಗಿತ್ತು. ಆದರೆ ಪೊಲೀಸ್‌ ಠಾಣೆಗೆ ಮಾಹಿತಿ ಇರಲಿಲ್ಲ. ಗುರುವಾರ ತನ್ನ ರಿಕ್ಷಾದಲ್ಲಿ ಪ್ರಯಾಣಿಸುವ ಸಂದರ್ಭ ಯಶವಂತ ಶೆಟ್ಟಿ ಅವರು ಗ್ರೇಶನ್‌ ಅವರ ಪತ್ನಿಯಲ್ಲಿ ‘ಗ್ರೇಶನ್‌ ಎಲ್ಲಿ? ಅವರ ಕಾರು ನಮ್ಮಲ್ಲಿದೆ, ಕಾರನ್ನು ಒಯ್ಯಲು ಹೇಳಿ’ ಎಂದು ಹೇಳಿದ್ದರು. ಆಗಷ್ಟೇ ಗ್ರೇಶನ್‌ ಅವರ ಪತ್ನಿಗೆ ತನ್ನ ಪತಿ ಯಶವಂತ ಅವರ ಮನೆಯಲ್ಲಿ ವಾಹನ ನಿಲ್ಲಿಸಿ ನಾಪತ್ತೆಯಾಗಿರುವ ವಿಷಯ ತಿಳಿದುಬಂದಿದೆ. ಈ ನಡುವೆ ಯಾರೋ ಪೊಲೀಸ್‌ ಠಾಣೆಗೆ ಫೋನ್‌ ಮಾಡಿ ಈ ಯುವಕರ ನಾಪತ್ತೆ ವಿಚಾರವನ್ನು ತಿಳಿಸಿದ್ದಾರೆಂದು ತಿಳಿದುಬಂದಿದೆ.

RELATED ARTICLES  ದ್ವೇಷ ಬಿಟ್ಟು ಸಾಮರಸ್ಯದ ಬದುಕಿನ ದೇಶ ಕಟ್ಟೋಣ: ಡಾ. ಹೆಗ್ಗಡೆ

ಕೆಸರುಗದ್ದೆಯಲ್ಲಿ ಪತ್ತೆಯಾದವು

ಗುರುವಾರ ಈ ಪರಿಸರದಲ್ಲಿ ಮಿಜಾರಿನ ಶಿಕಾರಿ ಪರಿಣತರಾದ ಅನೇಕ ಮಂದಿ ಊರವರೊಂದಿಗೆ ಮುಂಜಾನೆಯಿಂದ ಇಳಿ ಹಗಲಿನವರೆಗೆ ಹುಡುಕಾಟ ನಡೆಸಿದಾಗ ಕರಿಂಜೆ ಅರಂತ ಬಾಕ್ಯಾರು ಎಂಬಲ್ಲಿರುವ ಕೆಸರುಗದ್ದೆ (ಗಂಪಕಂಡ) ಯಲ್ಲಿ ಎರಡು ಶವಗಳು ಪತ್ತೆಯಾಗಿವೆ.

ವಿದ್ಯುತ್‌ ಸ್ಪರ್ಶ?

ಹೊಲಗದ್ದೆಗಳ ಬದಿಯಲ್ಲೇ ಉರುಳಾಡಿಕೊಂಡ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಸನಿಹವೇ ಟಾರ್ಚ್‌ ಲೈಟು, ಬಂದೂಕು, ನೀರಿನ ಬಾಟಲಿ ಕಂಡುಬಂದಿರುವುದರಿಂದ ಶಿಕಾರಿಗೆ ಹೋಗಿರುವುದು ಖಚಿತವಾಗಿದೆ. ಆದರೆ ಕಾಡು ಪ್ರಾಣಿ, ವಿಶೇಷವಾಗಿ ಕಾಡುಹಂದಿಗಳ ಸ್ಥಳೀಯ ಬೇಟೆಗಾರರು ವಿದ್ಯುತ್‌ ಕಂಬದಿಂದ ತಂತಿಯ ಮೂಲಕ ಗದ್ದೆ ಬದಿಯವರೆಗೆ ವಿದ್ಯುತ್‌ ಪ್ರವಹಿಸುವಂತೆ ಮಾಡಿದ್ದನ್ನು ಗಮನಿಸದೆ ಈ ಗೆಳೆಯರು ವಿದ್ಯುತ್‌ ಸ್ಪರ್ಶಕ್ಕೆ ಸಿಲುಕಿ ಸಾವನ್ನಪ್ಪಿದರೇ ಎಂಬ ಸಂಶಯ ಉಂಟಾಗಿದೆ.

ಈ ಭಾಗದಲ್ಲಿ ಹೊಲಗದ್ದೆಗಳಿವೆಯಾದರೂ ಕೃಷಿ ಕಾರ್ಯ ನಡೆಸದೆ ಹಡಿಲು ಬಿದ್ದಿವೆ. ಹಾಗಾಗಿ ಹೊಲದ ಕೃಷಿಗೆ ಕಾಡುಪ್ರಾಣಿಗಳಿಂದ ತೊಂದರೆ ಆಗುವುದನ್ನು ತಪ್ಪಿಸಲು ವಿದ್ಯುತ್‌ ತಂತಿ ಎಳೆದಿದ್ದಾರೆ ಎನ್ನುವುದಕ್ಕಿಂತ ಕಾಡುಪ್ರಾಣಿಗಳನ್ನು ಕೊಲ್ಲಲು ಸ್ಥಳೀಯರು ಮಾಡಿದ ಕೃತ್ಯ ಇದಾಗಿರಬೇಕು ಎನ್ನಲಾಗಿದೆ. ಯುವಕರಿಬ್ಬರ ಸಾವು ಕಾಡುಪ್ರಾಣಿಗಳಿಂದ ಉಂಟಾಗಿರುವ ಸಾಧ್ಯತೆ ಕಡಿಮೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

RELATED ARTICLES  ಶ್ರೀಭಾರತೀ ವಿದ್ಯಾಲಯದಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ

ಗ್ರೇಶನ್‌ ರೋಡ್ರಿಗಸ್‌ ವಿವಾಹಿತರಾಗಿದ್ದು, ಪತ್ನಿ ಮೂಡಬಿದಿರೆಯಲ್ಲಿ ಶಿಕ್ಷಕಿ. ಈ ದಂಪತಿಗೆ ಪುಟ್ಟ ಹೆಣ್ಣು ಮಗುವಿದೆ. ಗ್ರೇಶನ್‌ ತಮ್ಮ ಮನೆಯಿರುವ ಪೇಪರ್‌ಮಿಲ್‌ ಬಳಿ ವಾಹನ ಸರ್ವೀಸ್‌ ಸ್ಟೇಶನ್‌ ಹೊಂದಿದ್ದು, ಅಲಂಗಾರ್‌ನಲ್ಲಿರುವ ಇನ್ನೊಂದು ಸರ್ವೀಸ್‌ ಸ್ಟೇಶನ್‌ನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಪ್ರವೀಣ್‌ ಅವಿವಾಹಿತರು.

ಸ್ಥಳಕ್ಕೆ ಪಣಂಬೂರು ಉಪವಿಭಾಗದ ಎಸಿಪಿ ರಾಜೇಂದ್ರ ಕುಮಾರ್‌, ಮೂಡಬಿದಿರೆ ನಿರೀಕ್ಷಕ ರಾಮಚಂದ್ರ ನಾಯಕ್‌, ಎಸ್‌ಐ ದೇಜಪ್ಪ ಹಾಗೂ ಸಿಬಂದಿ ಸಂಜೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಹಂದಿ ಓಡಾಡಿದ ಕುರುಹು

ಗೆಳೆಯರಿಬ್ಬರ ಶವ ಪತ್ತೆಯಾಗಿರುವ ಗದ್ದೆಯಲ್ಲಿ ಹಂದಿಗಳು ಓಡಾಡಿದ ಕುರುಹು ಇದೆ. ಈ ಗದ್ದೆಯಲ್ಲಿ ಕೆಸರು ಕೂಡ ಇರುವುದರಿಂದ ಹಂದಿಗಳು ಅಲ್ಲಲ್ಲಿ ಗುಂಡಿ ತೋಡಿ ಹೊರಳಾಡಿದ ಗುರುತು ಕೂಡ ಇದೆ. ಆದುದರಿಂದ ಹಂದಿ ಓಡಾಡುವುದು ಗೊತ್ತಿದ್ದವರೇ ಇಲ್ಲಿ ಹಂದಿ ಹಿಡಿಯಲು ವಿದ್ಯುತ್‌ ತಂತಿ ಹಾಕಿರುವ ಸಾಧ್ಯತೆ ಹೆಚ್ಚು. ಗುರುವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ವಿದ್ಯುತ್‌ ಪ್ರವಹಿಸಲು ತಂತಿ ಹಾಕಿದ ಕುರುಹು ಇರಲಿಲ್ಲ. ತಂತಿ ಹಾಕಿದವರು ಮರುದಿನ ಬಂದು ಇಬ್ಬರು ಸತ್ತಿರುವುದನ್ನು ಗಮನಿಸಿ ತಂತಿ ಕಿತ್ತು ಹೋಗಿರುವ ಸಾಧ್ಯತೆಯೂ ಇದೆ.