ನವದೆಹಲಿ,- ಕರ್ನಾಟಕದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿರುವ ಲಿಂಗಾಯಿತ ಮತ್ತು ವೀರಶೈವ ಲಿಂಗಾಯಿತ ಹೆಸರಿನಡಿ ಪ್ರತ್ಯೇಕ ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕಳೆದ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ತಮ್ಮ ಸಂಪುಟದ ಸಹೋ ದ್ಯೋಗಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಗೃಹಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ , ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹಾಗೂ ಕರ್ನಾಟಕದ ಪರವಾಗಿ ರಾಜ್ಯದ ಪ್ರಭಾವಿ ಸಚಿವರೊಬ್ಬರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಕಳೆದ ಸೋಮವಾರ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೆಗೆದು ಕೊಂಡಿರುವ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈ ಹಿಂದೆ ಅಂದರೆ 2013ರಲ್ಲಿ ಅಂದಿನ ಯುಪಿಎ ಸರ್ಕಾರ ಕರ್ನಾಟಕ ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ನಿದರ್ಶನವೇ ನಮ್ಮ ಮುಂದಿರುವಾಗ ಅದನ್ನು ಹೇಗೆ ಒಪ್ಪಿಕೊಳ್ಳಬೇಕು ಎಂಬ ಪ್ರಶ್ನೆಯನ್ನು ರಾಜ್ಯದ ಸಚಿವರು ಮುಂದಿಟ್ಟಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ ವಿಲಾಸ್ ಪಾಸ್ವಾನ್, ಕರ್ನಾಟಕ ಸರ್ಕಾರ ಮುಂದಿನ ವಾರ ಕಳುಹಿಸಲಿರುವ ಪ್ರಸ್ತಾವನೆಯನ್ನು ಸಾರಾ ಸಗಟವಾಗಿ ತಿರಸ್ಕರಿಸಬೇಕೆಂದು ಪ್ರಧಾನಿ ಮೇಲೆ ಒತ್ತಡ ಹಾಕಿದ್ದಾರೆ. ವೀರಶೈವ-ಲಿಂಗಾಯಿತರಿಗೆ ಪ್ರತ್ಯೇಕ ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ನೀಡುವ ಮೀಸಲಾತಿಗೆ ಹೊಡೆತ ಬೀಳುತ್ತದೆ.

RELATED ARTICLES  ಹಿರೇಗುತ್ತಿ ಹೈಸ್ಕೂಲಿಗೆ ಶ್ರೀದೇವಿ ಹಳ್ಳೇರ ಪ್ರಥಮ.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಳ ಮಾಡುವಂತಿಲ್ಲ. ಈಗಿರುವ ನಿಯಮದಂತೆ ದಲಿತರು, ಬುದ್ಧರು, ಸಿಖ್ ಹಾಗೂ ಹಿಂದೂ ಸಮುದಾಯದಲ್ಲಿರುವ ಕೆಲವರಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲು ಅವಕಾಶವಿದೆ. ಉಳಿದಂತೆ ಹೊಸದಾಗಿ ಧರ್ಮ ಸೃಷ್ಟಿಸಿದ ತಕ್ಷಣ ಅವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ದಲಿತರಿಗೆ ನೀಡುತ್ತಿರುವ ಮೀಸಲಾತಿಯಲ್ಲಿ ಕಡಿತಗೊಳಿಸಿದರೆ ದೇಶಾದ್ಯಂತ ಜನರು ಕೇಂದ್ರ ಸರ್ಕಾರದ ವಿರುದ್ದ ದಂಗೆ ಏಳಲಿದ್ದಾರೆ. ಈ ಪ್ರಸ್ತಾವನೆ ಯನ್ನು ತಿರಸ್ಕರಿಸುವುದೇ ಸೂಕ್ತ. ಇಲ್ಲದಿದ್ದರೆ ಶೈತ್ಯಗಾರಕ್ಕೆ ಹಾಕುವುದೇ ಲೇಸು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

RELATED ARTICLES  ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಪರೀಕ್ಷೆ ಇಲ್ಲದೆಯೇ ಪಾಸ್..!