ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರದಲ್ಲಿಯೇ ಅವರನ್ನು ಸೋಲಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದ್ದು, ಸಿಎಂ ವಿರುದ್ಧ ಖಡಕ್ ಅಭ್ಯರ್ಥಿ ನಿಲ್ಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿಗಳನ್ನು ಸೋಲಿಸಲು ಇಬ್ಬರು ಮಾಜಿ ಮುಖ್ಯಮಂತ್ರಿಗಳು ಶಪಥ ಮಾಡಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಅಖಾಡದಲ್ಲಿ ಬಿಜೆಪಿ ಯುದ್ಧ ನೀತಿಗೆ ಮುಂದಾಗಿದೆ. ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಬಿಎಸ್‌ವೈ ಅವರ ಪುತ್ರ ವಿಜಯೇಂದ್ರರ ಸ್ಪರ್ಧೆ ಖಚಿತ ಎನ್ನಲಾಗುತ್ತಿದೆ.
ವರುಣಾದಲ್ಲಿ 45 ಸಾವಿರ ವೀರಶೈವ ಲಿಂಗಾಯತ ಮತದಾರರಿದ್ದು, 30 ಸಾವಿರ ಒಕ್ಕಲಿಗ ಮತದಾರರು ಇದ್ದಾರೆ. ಹಾಗಾಗಿ ಒಟ್ಟು 75 ಸಾವಿರ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಒಕ್ಕಲಿಗರ ಮತ ಸೆಳೆಯಲು ಎಚ್.ಡಿ.ಕುಮಾರಸ್ವಾಮಿ ನೆರವು ಪಡೆಯಬಹುದಾ ಎನ್ನುವ ಪ್ರಶ್ನೆಗಳು ಹರಿದಾಡುತ್ತಿವೆ.
ಚುನಾವಣೆ ಫಲಿತಾಂಶದಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕರಾಗಲಿದ್ದು, ಲಿಂಗಾಯುತ ಮತ ಒಗ್ಗಟ್ಟಾದರೆ ಕೈ ಅಭ್ಯರ್ಥಿ ಗೆಲುವು ಕಷ್ಟವಾಗಲಿದೆ.
ವಿಜಯೇಂದ್ರರನ್ನು ಕಣಕ್ಕಿಳಿಸಲು ಒತ್ತಾಯ
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಎಸ್ ವೈ ಕಿರಿಯ ಪುತ್ರ ಬಿವೈ ವಿಜಯೇಂದ್ರರನ್ನು ಕಣಕ್ಕಿಳಿಸಬೇಕೆಂದು ವರುಣಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಂದ ಬಿಎಸ್ ವೈ ಮೇಲೆ ಒತ್ತಡ ಹೇರಲಾಗಿದೆ. ಕಳೆದ 5 ದಿನಗಳ ಹಿಂದೆ ಡಾಲರ್ಸ್ ಕಾಲನಿಯ ನಿವಾಸಕ್ಕೆ ಭೇಟಿ ನೀಡಿದ್ದ ವರುಣಾ ಕ್ಷೇತ್ರದ 50ಕ್ಕೂ ಹೆಚ್ಚು ಬಿಜೆಪಿ ಪ್ರಮುಖ ನಾಯಕರು, ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇರುವುದರಿಂದ ವಿಜಯೇಂದ್ರರಿಗೆ ವರುಣಾ ಕ್ಷೇತ್ರದ ಟಿಕೆಟ್ ನೀಡಿದರೆ ಸಿದ್ದರಾಮಯ್ಯ ವಿರುದ್ಧ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. .
ಈ ಕುರಿತು ಹೈಕಮಾಂಡ್ ಜತೆ ಮಾತನಾಡುವ ಭರವಸೆಯನ್ನು ಬಿಎಸ್ ಯಡಿಯೂರಪ್ಪ ನೀಡಿದ್ದಾರೆ.