ಮಂಗಳೂರು ನಗರದಲ್ಲಿ ಅಲ್ಲಲ್ಲಿ ಕೆಲವು ಸಣ್ಣ- ಪುಟ್ಟ ಉದ್ಯಾನಗಳಿವೆ. ಆದರೆ ಅಲ್ಲಿ ಮಕ್ಕಳಿಗೆ ಆಟವಾಡಲು ಬೇಕಾದ ಸೌಕರ್ಯ, ಸಲಕರಣೆಗಳಿಲ್ಲ. ಹಾಗಾಗಿ ಹೆಚ್ಚಿನ ಮಕ್ಕಳು ತಮ್ಮ ಪೋಷಕರೊಂದಿಗೆ ಕದ್ರಿ ಉದ್ಯಾನವನಕ್ಕೆ ಹೋಗುವುದು ರೂಢಿ. ಯಾಕೆಂದರೆ ಇಲ್ಲಿ ಜಾರುಬಂಡಿ, ತೂಗುಯ್ನಾಲೆಗಳಲ್ಲಿ ಕುಳಿತು ಆಟವಾಡಬಹುದು. ಜತೆಗೆ ಇಲ್ಲಿರುವ ಪುಟಾಣಿ ರೈಲು ಓಡಾಟ ಯಾವಾಗ ಪ್ರಾರಂಭಿಸುತ್ತದೋ ಎಂಬುದನ್ನೂ ಹೆಚ್ಚಿನ ಹೆತ್ತವರು, ಮಕ್ಕಳು ಎದುರು ನೋಡುತ್ತಿದ್ದಾರೆ.
ಕದ್ರಿ ಉದ್ಯಾನವನ ಸಾಕಷ್ಟು ಅಭಿವೃದ್ಧಿಗೊಂಡಿದ್ದರೂ ಕೂಡ ಮಕ್ಕಳು ಆಟವಾಡುವ, ಮೋಜು ಮಸ್ತಿ ಮಾಡುವ ಜಾರು ಬಂಡಿ, ತೂಗುಯ್ನಾಲೆಗಳು ನಿರ್ವಹಣೆ ಇಲ್ಲದೆ ತುಕ್ಕು ಹಿಡಿದು ಅಪಾಯಕಾರಿಯಾಗಿವೆ. ಇದರಿಂದ ಮಕ್ಕಳ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ. ಕನಿಷ್ಠ ಪಕ್ಷ ಇವುಗಳಿಗೆ ಪೈಂಟ್ ಬಳಿಯಬಾರದೇ? ಜತೆಗೆ ಇಲ್ಲಿರುವ ಬೆಂಚುಗಳಲ್ಲಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಕುಳಿತುಕೊಳ್ಳಲೂ ಜಾಗವಿಲ್ಲ.
ಕೆಲವರು ರಾತ್ರಿ, ಹಗಲು ಇಲ್ಲಿನ ಬೆಂಚುಗಳ ಮೇಲೆ ಮಲಗುತ್ತಾರೆ. ಇದನ್ನೆಲ್ಲ ನೋಡಿಕೊಳ್ಳಲು ಯಾರೂ ಇಲ್ಲದಂತಾಗಿದೆ. ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಗೊಳ್ಳುತ್ತಿರುವ ಮಂಗಳೂರಿಗೆ ಪ್ರಮುಖ ಪ್ರವಾಸಿ ತಾಣವಾಗಿರುವ ಕದ್ರಿ ಉದ್ಯಾನದ ಅವ್ಯವಸ್ಥೆಗಳೂ ಸರಿಯಾಗಬೇಕಿದೆ. ಪ್ರವಾಸಿಗರಿಗೆ
ಸುಂದರ, ಸುರಕ್ಷಿತ ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕಿದೆ.
ಜೆ.ಎಫ್. ಡಿ’ಸೋ ಜಾ, ಅತ್ತಾವರ