ಬೆಂಗಳೂರು,- ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಮತದಾನದ ಅರಿವು ಮೂಡಿಸಲು ಮುಂದಾಗಿರುವ ಚುನಾವಣಾ ಆಯೋಗ ಇದಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿರುವ ಪ್ರಮುಖರನ್ನು ಬಳಸಿಕೊಳ್ಳಲು ಮುಂದಾಗಿದೆ. ಬಾಲಿವುಡ್‍ನ ಖ್ಯಾತ ನಟಿ ಹಾಗೂ ಕನ್ನಡತಿ ದೀಪಿಕಾ ಪಡುಕೋಣೆ, ಸಾಹಿತಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಚಂದ್ರಶೇಖರ್ ಕಂಬಾರ, ಗಿರೀಶ್ ಕಾರ್ನಾಡ್, ಐಟಿ ದಿಗ್ಗಜ ನಾರಾಯಣಮೂರ್ತಿ, ಪತ್ನಿ ಸುಧಾಮೂರ್ತಿ, ಸಾಲುಮರದ ತಿಮ್ಮಕ್ಕ , ಖ್ಯಾತ ಹೃದಯತಜ್ಞ ಡಾ.ದೇವಿಶೆಟ್ಟಿ , ಅಂತಾರಾಷ್ಟ್ರೀಯ ಅಥ್ಲೆಟಿಕ್ ಅಶ್ವಿನಿ ಪೋನ್ನಪ್ಪ ಸೇರಿದಂತೆ ಮತ್ತಿತರರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಚುನಾವಣಾ ಆಯೋಗ ಮತದಾನದ ಬಗ್ಗೆ ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ನಿರೀಕ್ಷೆಗೆ ತಕ್ಕಂತೆ ಶೇಕಡವಾರು ಮತದಾನ ನಡೆಯುವುದಿಲ್ಲ. ಇದಕ್ಕಾಗಿ ಚುನಾವಣೆ ಆಯೋಗ ಸಿನಿಮಾ, ಕ್ರೀಡೆ, ಐಟಿ, ಶಿಕ್ಷಣ , ಸಾಹಿತ್ಯ,ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪ್ರಮುಖರನ್ನು ಬಳಸಿಕೊಳ್ಳುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸಲು ತೀರ್ಮಾನಿಸಿದೆ.

RELATED ARTICLES  ದಿವ್ಯ ಭವ್ಯ ಹವ್ಯ ಲೋಕದ ಅನಾವರಣಕ್ಕೆ ಕ್ಷಣಗಣನೆ

ಕೇಂದ್ರ ಚುನಾವಣಾ ಆಯೋಗ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಒಂದೆರಡು ದಿನಗಳಲ್ಲಿ ಪೂರ್ವ ಸಿದ್ಧತಾ ಸಭೆ ನಡೆದ ನಂತರ ದೆಹಲಿಯಲ್ಲಿ ದಿನಾಂಕ ಘೋಷಣೆಯಾಗಲಿದೆ. ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿ ಮಾಡಿದರೂ ಮತದಾನದ ಅಭಿಯಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದಕ್ಕಾಗಿ ಆಯೋಗವು ವಿವಿಧ ಕ್ಷೇತ್ರಗಳ ಗಣ್ಯರ ಪಟ್ಟಿಯನ್ನು ಸಿದ್ದಪಡಿಸಿದ್ದು, ಜನಜಾಗೃತಿ ನಡೆಯಲಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಆಯೋಗ ಈ ರೀತಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಬಳಸಿಕೊಂಡ ಪರಿಣಾಮ ಶೇ.71.3ರಷ್ಟು ಮತದಾನವಾಗಿತ್ತು.

ಅಂದರೆ ಕಳೆದ 35 ವರ್ಷಗಳ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಮತದಾನ ನಡೆದಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಈಗ ಇದೇ ತಂತ್ರವನ್ನು ಆಯೋಗ ಅನುಸರಿಸಲಿದ್ದು , ಆಯೋಗ ಪ್ರಮುಖರ ಜೊತೆ ಮಾತುಕತೆ ನಡೆಸಿದೆ. ಅಭಿಯಾನದಲ್ಲಿ ಪಾಲ್ಗೊಳ್ಳಲು ಎಲ್ಲರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಪಕ್ಷ ವ್ಯಕ್ತಿ ಪರ ಪ್ರಚಾರ ನಡೆಸದೆ ಮತದಾನದ ಪಾವಿತ್ರ್ಯ ತಮ್ಮ ಹಕ್ಕು ಚಲಾಯಿಸುವುದರಿಂದ ಉಂಟಾಗುವ ಪರಿಣಾಮ, ಮತ ಏಕೆ ಹಾಕಬೇಕು, ಹಾಕುವುದರಿಂದ ಸಿಗುವ ಅನುಕೂಲಗಳು, ಇದರ ಮಹತ್ವದ ಬಗ್ಗೆ ಜಾಗೃತಿಯನ್ನು ಮೂಡಿಸಲಿದ್ದಾರೆ.

RELATED ARTICLES  ಗೋವಧೆಯನ್ನು ನಡೆಸಲು ನಾವು ‌ಯಾವುದೇ ಕಾರಣಕ್ಕೂ ಆಸ್ಪದ‌ ಕೊಡುವುದಿಲ್ಲ 'ಭಾರತೀಯ ಗೋಪರಿವಾರ'

ಆಯೋಗವು ಖ್ಯಾತ ಕ್ರಿಕೆಟ್ ಆಟಗಾರರಾದ ರಾಹುಲ್ ದ್ರಾವಿಡ್, ಜವಗಲ್ ಶ್ರೀನಾಥ್, ಚಿತ್ರ ನಿರ್ಮಾಪಕ ಯೋಗರಾಜ್ ಭಟ್, ಸುದೀಪ್, ಯಶ್, ಶೃತಿ ಹರಿಹರನ್, ರಶ್ಮಿಕಾ ಮಂಡಣ್ಣ ಸೇರಿದಂತೆ ಮತ್ತಿತರರು ಕೂಡ ಪಾಲ್ಗೊಳ್ಳು ಒಲವು ತೋರಿದ್ದಾರೆ. ಎಲ್ಲರ ಒಪ್ಪಿಗೆ ಪಡೆದು ಆಯೋಗವು ಮತದಾನದ ಅಭಿಯಾನವನ್ನು ಶೀಘ್ರದಲ್ಳೇ ಆರಂಭಿಸಲಿದೆ.