ಭಟ್ಕಳ: ಸಮಾಜ ಅಭಿವೃದ್ಧಿಯಾಗಬೇಕಾದರೆ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾಗುತ್ತದೆ ಎಂದು ಶಾಸಕ ಮಂಕಾಳ ಎಸ್. ವೈದ್ಯ ಹೇಳಿದರು.
ಅವರು ಇಲ್ಲಿನ ರಾಮನಾಥ ಶ್ಯಾನಭಾಗ ಲಲಿತ ಕಲಾ ಸಭಾ ಭವನದಲ್ಲಿ ಎರ್ಪಡಿಸಲಾಗಿದ್ದ ದೈವಜ್ಞ ಪ್ರಗತಿಪರ ಫ್ರೆಂಡ್ಸ್ ಟ್ರಸ್ಟ್ ಇದರ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿಯೊಂದು ಸಮಾಜವೂ ಕೂಡಾ ಇಂದು ಶಿಕ್ಷಣಕ್ಕೆ ಆದ್ಯತೆಯನ್ನು ನೀಡಬೇಕಾಗಿದೆ. ಶಿಕ್ಷಣವೇ ಮುಖ್ಯವಾಗಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡಾ ಉತ್ತಮ ಶಿಕ್ಷಣ, ಆರೋಗ್ಯ ನೀಡುವ ಉದ್ದೇಶದಿಂದ ಆರಂಭಗೊಂಡ ಟ್ರಸ್ಟ್‍ನ ಕಾರ್ಯ ಶ್ಲಾಘನೀಯ ಎಂದರು.
ನನ್ನ ಕ್ಷೇತ್ರದ ಜನತೆಗೆ ಶಿಕ್ಷಣ ದೊರೆಯಬೇಕೆನ್ನುವುದು ನನ್ನ ಆಶಯ, ನನ್ನ ಕ್ಷೇತ್ರದಲ್ಲಿ ಇಂತಹ ಒಂದು ಟ್ರಸ್ಟನ್ನು ಸ್ಥಾಪಿಸಿಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವುದು ಸಂತಸ ತಂದಿದ್ದು ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಳ್ಳಲು ವಯಕ್ತಿಕವಾಗಿಯೂ ಧನ ಸಹಾಯ ಮಾಡುವ ಭರವಸೆಯನ್ನು ನೀಡಿದರು.
ಹಿಂದೆ ಹಣ ಇದ್ದgವರಿಗೆ ಮಾತ್ರ ಶಿಕ್ಷಣ ಪಡೆಯುವ ಅವಕಾಶವಿತ್ತು, ಆದರೆ ಇಂದು ಹಾಗಿಲ್ಲ, ಕೌಶಲ್ಯವಿದ್ದವರಿಗೆ ಶಿಕ್ಷಣ ಪಡೆಯುವುದು ಸುಲಭ ಸಾಧ್ಯವಾಗಿದೆ. ಎಲ್ಲಾ ಕಡೆಗಳಲ್ಲಿಯೂ ಕೂಡಾ ಶೇಖಡಾವಾರು ಅಂಕವೇ ಮುಖ್ಯವಾಗಿದ್ದು ಉತ್ತಮ ಅಂಕಗಳಿಸಿದವರು ಯಾವ ಶಿಕ್ಷಣವನ್ನೂ ಪಡೆಯಲು ಸಾಧ್ಯವಾಗಿರುವ ವಾತಾವರಣ ಇದೆ ಎಂದರು. ನೂತನವಾಗಿ ಆರಂಭವಾಗಿರುವ ಟ್ರಸ್ಟ್ ಉತ್ತಮ ಶ್ರೇಯಾಂಕದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಶಿಕ್ಷಣ ದೊರಕಿಸಿಕೊಳ್ಳಲು ಅನುಕೂಲ ಮಾಡಿಕೊಡುವುದರೊಂದಿಗೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ನೆರವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ರತ್ನಾಕರ ರವಳಪ್ಪ ಶೇಟ್, ಪಿ.ಡಬ್ಲುಡಿ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ವಿನಾಯಕ ಶೇಟ್, ಶ್ರೀ ಜ್ಞಾನೇಶ್ವರಿ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲ ಡಾ. ಆರ್. ನರಸಿಂಹ ಮೂರ್ತಿ, ಡಿ.ವೈ.ಎಸ್.ಪಿ. ವೆಲೆಂಟೈನ್ ಡಿಸೋಜ, ಶ್ರೀನಿವಾಸ ಕೊಲ್ಲೆ, ರಾಮದಾಸ ಶೇಟ್ ಮುಂತಾದವರು ಉಪಸ್ಥಿತರಿದ್ದರು.
ಪ್ರತೀಕ್ಷಾ ಶೇಟ್ ಪ್ರಾರ್ಥಿಸಿದರು. ಸವಿತಾ ಶೇಟ್ ಸ್ವಾಗತಿಸಿದರು. ಟ್ರಸ್ಟ್‍ನ ಅಧ್ಯಕ್ಷ ರೂಪೇಶ್ ಕೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ನಾಯ್ಕ ನಿರ್ವಹಿಸಿದರು.