muralidhar 2

ಸಂತೋಷ ಅಥವಾ ಕಷ್ಟ ಎಂದರೆ ಒಬ್ಬರೇ ಅನುಭವಿಸುವ ಭಾವನೆಯಲ್ಲ. ಕೆಲವೊಮ್ಮೆ ಸಂತೋಷದಿಂದಿರುವಾಗ ಸ್ನೇಹಿತರು ಅಥವಾ ಮನೆಯವರು ಏನಪ್ಪಾ? ಇವತ್ತು ಇಷ್ಟು ಸಂತೋಷದಿಂದ ಇದ್ದೀಯಾ? ಏನು ಸಮಾಚಾರ? ಎಂದು ಕೇಳುವುದುಂಟು. ಅಂದರೆ ಮನಸ್ಸಿಗೆ ಸಂತೋಷ ಉಂಟಾದರೆ ಬೇರೆಯವರಿಗೂ ಅದರ ಲಕ್ಷಣಗಳು ಗೋಚರಿಸುತ್ತವೆ. ಇದಕ್ಕೆ ವಿರುದ್ದವಾಗಿ ಏನಾದರೂ ಕಷ್ಟದ ಸುಳಿಯಲ್ಲಿ ಸಿಲುಕಿಕೊಂಡು ಮೌನದಿಂದ ಇದ್ದಾಗಲೂ ಸಹ ಈ ರೀತಿಯಾದ ಪ್ರಶ್ನೆಯನ್ನು ಮಾಡಬಹುದು. ಏನಪ್ಪಾ ಮೈಯಲ್ಲಿ ಹುಷಾರಿಲ್ಲವೇ? ಅಥವಾ ಯಾವುದಾದರೂ ತೊಂದರೆಗೆ ಸಿಕ್ಕಿಕೊಂಡಿದ್ದೀಯಾ? ಎಂಬುದಾಗಿ ಕೇಳಬಹುದು. ಮನುಷ್ಯ ಕಷ್ಟದಲ್ಲಿದ್ದರೂ ಅಥವಾ ಸಂತೋಷದಿಂದ ಇದ್ದರೂ ಎರಡೂ ಸಹ ಮನುಷ್ಯನ ಮುಖ ಲಕ್ಷಣದಿಂದ ತಿಳಿಯುತ್ತದೆ. ಯಾವಾಗಲೂ ಸಂತೋಷ ಅಥವಾ ದುಃಖದಿಂದ ಇರಲು ಸಾಧ್ಯವಿಲ್ಲ. ಯಾವಾಗಲೂ ಸಂತೋಷದಿಂದ ನಗು ನಗುತ್ತಾ ಇದ್ದರೆ ಇವನಿಗೆ ಬುದ್ದಿ ಸರಿ ಇಲ್ಲ ಎನ್ನುತ್ತಾರೆ. ಹಾಗೆಯೇ ಯಾವಾಗಲೂ ದುಃಖದಿಂದ ಇದ್ದರೆ ದುಃಖದ ಮನಸ್ಸಿನವನು ಅಂದರೆ ಸಾಡಿಸ್ಟ್ ಎಂದು ಹೇಳುತ್ತಾರೆ. ಯಾವಾಗಲೂ ಬಹಳ ದುಃಖದಿಂದ ಇದ್ದರೆ ಮನೋರೋಗ ಬರಬಹುದು.

ಕಷ್ಟ ಬಂದಾಗ ಸುಮ್ಮನೆ ಕುಳಿತರೆ ಯಾವ ಕಷ್ಟವೂ ತೀರುವುದಿಲ್ಲ. ಯಾವ ಸಮಸ್ಯೆಯೂ ಬಗೆಹರಿಯವುದಿಲ್ಲ. ಕೆಲವು ಕಷ್ಟಗಳನ್ನು ಸಣ್ಣದಿದ್ದಾಗಲೇ ಪರಿಹರಿಸಲು ಪ್ರಯತ್ನಿಸಿದರೆ ಮುಂದೆ ಆಗುವ ಅನಾಹುತವನ್ನು ತಪ್ಪಿಸಿಕೊಳ್ಳಬಹುದು. ಸಣ್ಣ ಕಷ್ಟ ಬಂದಲ್ಲಿ ಉದಾಸೀನತೆಯಿಂದ ಇಷ್ಟೇ ತಾನೇ ಇದರಿಂದ ಏನಾಗುತ್ತದೋ ನೋಡೋಣ, ನನಗೇನು ಇದರಿಂದ ತೊಂದರೆ ಇಲ್ಲ ಎಂದು ತಿರಸ್ಕಾರ ಭಾವದಿಂದ ನೋಡಿದರೆ ಆ ಒಂದು ಸಣ್ಣ ಸಮಸ್ಯೆ ಹೆಮ್ಮರವಾಗುವ ಅಪಾಯ ಇರುತ್ತದೆ. ಮೊಳಕೆಯಲ್ಲಿಯೇ ಕಿತ್ತುಹಾಕಬೇಕು. ಅದಕ್ಕೆ ಯಾವ ಸಮಸ್ಯೆಯೇ ಅಥವಾ ಕಷ್ಟವೇ ಆಗಿರಲಿ ಗೊತ್ತಾದ ತಕ್ಷಣ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ತಕ್ಷಣ ಸಮಸ್ಯೆ ಬಗೆಹರಿದರೆ ಏನೂ ತೊಂದರೆಯಾಗುವುದಿಲ್ಲ. ಕೆಲವು ಪ್ರಕರಣಗಳನ್ನು ಉದಾಸೀನತೆಯಿಂದ ನೋಡಿ ಸುಮ್ಮನಿದ್ದು ಆ ಸಮಸ್ಯೆ ಮರೆತು ಹೋಗಿದ್ದರೆ ಯಾವತ್ತಾದರೂ ಅದು ಪೆಡಂಭೂತದಂತೆ ಬಂದು ಎದುರು ನಿಲ್ಲಬಹುದು. ಆಗ ಅಯ್ಯೋ ಅಂದೇ ಈ ಸಮಸ್ಯೆ ಬಗೆಹರಿಸಿದ್ದರೆ ಈಗ ಇಷ್ಟು ಕಷ್ಟ ಅನುಭವಿಸಬೇಕಾಗಿರಲಿಲ್ಲ ಎಂದು ಪರಿತಪಿಸಬೇಕಾಗಬಹುದು. ಅದಕ್ಕೆ ಮೊಳಕೆಯಲ್ಲಿಯೇ ಚಿವುಟಿಹಾಕಬೇಕು. ಎಷ್ಟೇ ಕಷ್ಟ ಬಂದರೂ ನೇರವಾಗಿ ಯಾರ ಬಳಿಯೂ ಹೇಳಿಕೊಳ್ಳಲು ಆಗುವುದಿಲ್ಲ. ಯಾರಾದರೂ ತಮ್ಮ ಒಡನಾಡಿಗಳು ಅಥವಾ ಹಿತೈಷಿಗಳು ಕೇಳಿದರೆ ಹೇಳಿ ಅವರಿಂದ ಪರಿಹಾರವನ್ನು ಪಡೆಯುವ ಪ್ರಯತ್ನ ಮಾಡ ಬಹುದಷ್ಟೇ. ಒಳ್ಳೆಯ ಸ್ನೇಹಿತರು ಕಷ್ಟವನ್ನು ಅರಿತು ಅದಕ್ಕೆ ಪರಿಹಾರವನ್ನು ಸೂಚಿಸಿ, ತಾವೂ ಅದಕ್ಕೆ ಸಹಾಯ ಮಾಡಬಹುದು. ಆದರೆ ಅಂತಹ ವ್ಯಕ್ತಿಗಳು ಸಿಕ್ಕುವುದು ಅಪರೂಪವೆಂದೇ ಹೇಳಬಹುದು. ಕಷ್ಟ ಎಂಬುದು ಕೆಲವೊಮ್ಮೆ ಸ್ವಯಂಕೃತವಾಗಿ ಬರಬಹುದು ಅಥವಾ ತಮ್ಮ ಮಕ್ಕಳಿಂದ ಬರಬಹುದು. ಅದನ್ನು ಸೂಕ್ಷ್ಮವಾಗಿ ತಿಳಿಯುವ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು.

RELATED ARTICLES  ಇಹಲೋಕ ತ್ಯಜಿಸಿದ ಡಾ. ಎಂ.ಪಿ ಕರ್ಕಿ

ಮಕ್ಕಳ ಬಗ್ಗೆ ಯಾರಾದರೂ ಬಂದು ನಿಮ್ಮ ಮಗ ಯಾರದ್ದೋ ಸಹವಾಸ ಮಾಡಿದ್ದಾನೆ ನೋಡಿ ಮುಂದೆ ಅಪಾಯ ಎದುರಾಗಬಹುದು ಎಂದು ಹೇಳಿದಾಗಲೂ ಸಹ ಮಗನ ಮೇಲೆ ಅತಿಯಾದ ವಿಶ್ವಾಸ ಇಟ್ಟು, ನನ್ನ ಮಗ ಅಂಥವನಲ್ಲ ಬೇಕಂತಲೇ ನನ್ನ ಮಗನ ಮೇಲೆ ಕೆಟ್ಟ ಹೆಸರು ತರಲು ಆಪಾದನೆ ಮಾಡುತ್ತಿದ್ದಾರೆ ಎಂದು ಉದಾಸೀನ ಮಾಡಿ, ವಿಚಾರವನ್ನು ಹೇಳಿದವರ ಮೇಲೆ ಕೋಪಿಸಿಕೊಂಡು ಅವರನ್ನೇ ಹೀಯ್ಯಾಳಿಸಿ ಸುಮ್ಮನಿದ್ದರೆ, ಮುಂದೆ ದೊಡ್ಡವನಾದ ಮೇಲೆ ದೊಡ್ಡ ಸಮಸ್ಯೆ ಯಾಗಬಹುದು. ಮಕ್ಕಳಲ್ಲಿ ಕೆಟ್ಟ ಬುದ್ದಿ ಬಂದಿದೆ ಎಂದು ತಿಳಿದಾಗ ತಕ್ಷಣ ಮಕ್ಕಳನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಗಾದೆಯಂತೆ, ದೊಡ್ಡವನಾದ ಮೇಲೆ ಏನೂ ಮಾಡಲಾಗದ ಸನ್ನಿವೇಶಕ್ಕೆ ಬಂದು ಜೀವನವೆಲ್ಲಾ ಪರಿತಪಿಸುವಂತೆ ಆಗುತ್ತದೆ. ಆಗ ಮಕ್ಕಳನ್ನು ನಿಂದಿಸುವಂತಾಗುತ್ತದೆ. ಹೆತ್ತವರು ಮಕ್ಕಳನ್ನು ನಿಂದಿಸಿದರೆ, ಬೇರೆಯವರು ಹೆತ್ತವರನ್ನು ನಿಂದಿಸುತ್ತಾರೆ. ಎಂಥಹ ಮಕ್ಕಳನ್ನು ಹಡೆದರು? ಹೆತ್ತವರು ಎಷ್ಟೇ ಒಳ್ಳೆಯವರಾಗಿದ್ದರೂ ಸಹ ಅದು ಲೆಕ್ಕಕ್ಕೆ ಬರುವುದಿಲ್ಲ. ಮಕ್ಕಳ ಅಪರಾಧ ಹೆತ್ತವರ ಒಳ್ಳೆಯತನವನ್ನು ಮರೆಮಾಚಿಸುತ್ತದೆ. ಬಿಳಿ ಹೊಳಪು ಬಣ್ಣದ ಬಟ್ಟೆಯಲ್ಲಿ ಒಂದು ಕಪ್ಪು ಚುಕ್ಕೆಯಾದರೂ ಎಲ್ಲರೂ ಕಪ್ಪುಚುಕ್ಕೆಯ ಮೇಲೆ ದೃಷ್ಟಿ ಇಡುತ್ತಾರೆ ವಿನಃ ಬಟ್ಟೆ ಇಷ್ಟು ಬಿಳುಪಾಗಿದೆ ಎಂದು ನೋಡುವುದಿಲ್ಲ. ಏನಿದು ಕಪ್ಪುಚುಕ್ಕಿ ಬಟ್ಟೆ ಮೇಲೆ ಇದೆ ಎಷ್ಟು ಚೆನ್ನಾಗಿರುವ ಬಟ್ಟೆ ಹಾಕಿದ್ದೀಯಾ? ಇದೆಲ್ಲಿ ಗಲೀಜುಮಾಡಿಕೊಂಡೆ ಎಂದು ಹೇಳುವುದುಂಟು. ಹಾಕಿರುವ ಬಟ್ಟೆ ಎಷ್ಟೇ ಬಿಳಿ ಹೊಳಪಿಂದ ಕಂಗೊಳಿಸುತ್ತಿದ್ದರೂ ಒಂದು ಸಣ್ಣ ಚುಕ್ಕಿ ಎಲ್ಲವನ್ನೂ ಮರೆಮಾಡುತ್ತದೆ.

RELATED ARTICLES  ನೆರೆ ಪರಿಹಾರ ಧನದಲ್ಲಿ ಶಾಸಕಿ ರೂಪಾಲಿ ನಾಯ್ಕ 25% ಕಮಿಶನ್ ದಂಧೆ : ಆನಂದ್ ಗಂಭೀರ ಆರೋಪ

ಚಿಕ್ಕ ಮಕ್ಕಳು ಅಂದವಾಗಿದ್ದರೆ ಯಾರ ದೃಷ್ಠಿತಾಗಬಾರದೆಂದು ಮಕ್ಕಳ ಮುಖದಲ್ಲಿ ಒಂದು ಸಣ್ಣ ಚುಕ್ಕಿ ಇಡುತ್ತಾರೆ. ಮಕ್ಕಳ ಮುಖದಲ್ಲಿರುವ ಒಂದು ಚುಕ್ಕಿ ಮಕ್ಕಳಿಗೆ ದೃಷ್ಠಿತಾಗದಂತಾಗಿ ಆ ಮಕ್ಕಳ ಅಂದ ಕೆಡದಂತೆ ಇನ್ನೂ ವೃದ್ದಿಸುತ್ತದೆ. ಆದರೆ ಇದು ಮನುಷ್ಯನ ಗುಣಗಳಿಗೆ ವಿರುದ್ದವಾಗಿರುತ್ತದೆ. ಎಷ್ಟೇ ಒಳ್ಳೆಯುವನಾಗಿದ್ದರೂ ಒಂದು ಸಣ್ಣ ಘಟನೆಯು ಒಬ್ಬ ವ್ಯಕ್ತಿಯ ಒಳ್ಳೆಯತನವನ್ನು ಮರೆಮಾಚಬಹುದು. ಯಾವುದಾದರೂ ತಪ್ಪುಮಾಡಿದರೆ ಎಷ್ಟು ಒಳ್ಳೆಯ ಮನುಷ್ಯನಂತೆ ಇದ್ದ. ಆದರೆ ಇಂತಹ ಕೆಟ್ಟ ಕೆಲಸವನ್ನು ಮಾಡಿದ್ದಾನೆ, ಅವನಿಗೆ ತಿಳಿದಿರಲಿಲ್ಲವೇ? ಎಂದು ಪ್ರಶ್ನಿಸುವರೇ ಜಾಸ್ತಿ. ಒಳ್ಳೆಯ ಮನಸ್ಸಿನವ ತಪ್ಪು ಮಾಡಿದರೆ ಅವನ ಮನಸ್ಸು ಎಷ್ಟು ನೊಂದುಕೊಳ್ಳುತ್ತದೆ ಎಂದು ಅವನಿಗೆ ಮಾತ್ರ ತಿಳಿಯುತ್ತದೆ. ಬೇರೆಯವರಿಗೆ ಅವನ ಭಾವನೆ ತಿಳಿಯುವುದಿಲ್ಲ. ತಪ್ಪು ಮಾಡಿದ ಎಂದು ಹೇಳುತ್ತಾರೆ ವಿನಃ ಅದಕ್ಕೆ ಕಾರಣ ಏನು? ಎಂಬುದನ್ನು ತಿಳಿಯುವುದಿಲ್ಲ. ಯಾರೂ ಉದ್ದೇಶ ಪೂರ್ವಕವಾಗಿ ತಪ್ಪು ಮಾಡುವುದಿಲ್ಲ ಎಂದು ಭಾವಿಸುವುದಿಲ್ಲ. ಸಂತೋಷವಾದರೆ ಮಾತ್ರ ಬೇರೊಬ್ಬರ ಬಳಿ ಹೇಳಿಕೊಳ್ಳಬಹುದು ಆದರೆ ಕಷ್ಟಬಂದಲ್ಲಿ ಯಾರ ಬಳಿಯೂ ಹೇಳಿಕೊಳ್ಳಲು ಮನಸ್ಸು ಬರುವುದಿಲ್ಲ. ಬಲವಂತದಿಂದ ಕೇಳಿದರೆ ಮಾತ್ರ ಅವರಿಂದ ಏನಾದರೂ ಪರಿಹಾರ ಸಿಗುತ್ತದೆ ಎಂದು ಅರಿತುಕೊಂಡು ಸೂಕ್ಷ್ಮವಾಗಿ ಹೇಳಬಹುದು. ಇಲ್ಲದಿದ್ದರೆ ಆಡಿಕೊಳ್ಳುವವರ ಮುಂದೆ ಜಾರಿ ಬಿದ್ದಂತೆ ಆಗುತ್ತದೆ.
ಮುಂದುವರೆಯುತ್ತದೆ.