ವರದಿ :- ಎಮ್.ಎಸ್.ಶೋಭಿತ್ ಮೂಡ್ಕಣಿ
ಸಿದ್ದಾಪುರ: ಭಾನ್ಕುಳಿಮಠದಲ್ಲಿ ರಾಜ್ಯ-ದೇಶದಲ್ಲಿ ಕಾಣಸಿಗದ ಸ್ವರ್ಣಯುಗವು ಗೋಸ್ವರ್ಗದ ಮೂಲಕ ಗೋಚರಿಸಲಿದೆ. ಗೋವಂಶದ ಭಾಗ್ಯೋದಯ ಇದಾಗಲಿದೆ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
ಪಟ್ಟಣದ ಗೌತಮದಲ್ಲಿ ನಡೆದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಭಾನ್ಕುಳಿ ಮಠದಲ್ಲಿ ನಿರ್ವಿುಸುತ್ತಿರುವ ಗೋಸ್ವರ್ಗದ ಕುರಿತು ಶ್ರೀಗಳು ವಿವರಣೆ ನೀಡಿದರು. ಭಾನ್ಕುಳಿಮಠದ ಪರಿಸರದಲ್ಲಿ ನಿರ್ವಣವಾಗುತ್ತಿರುವ ಗೋಸ್ವರ್ಗವು ಎರಡು ಪರ್ವತಗಳು(ಗುಡ್ಡಗಳು) ಸಂಧಿಸುವ ಸ್ಥಳವಾಗಿದೆ. ಪೂರ್ವ ಪಶ್ಚಿಮದಲ್ಲಿ ತಗ್ಗನ್ನು ಹೊಂದಿರುವ ಈ ತಾಣದಲ್ಲಿನ ಜಲದಲ್ಲಿಯೇ ಸಪ್ತ ಸಾನ್ನಿಧ್ಯವಿದೆ. ಶಿಲಾಮಯ ಮಂಟಪ ನಿರ್ವಿುಸಿ ಪೂಜೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಒಂದು ಕಡೆ ಭಜನೆ-ಕೀರ್ತನೆಗಳು ಕೇಳಿ ಬರುವಂತೆ ಮಾಡಲಾಗುತ್ತದೆ. 30 ಸಾವಿರ ಚದರ ಅಡಿಗಳ ವಿಸ್ತೀರ್ಣದ ಪ್ರದೇಶದಲ್ಲಿ ಗೋವುಗಳು ವಿಶ್ರಾಂತಿ ಪಡೆಯುವ ಗೋ ವಿರಾಮ-ನೆರಳಿನ ಸ್ಥಳ, 70 ಸಾವಿರ ಚದರ ಅಡಿಗಳಷ್ಟು ಸ್ಥಳದಲ್ಲಿ ಗೋ ವಿಹಾರ ಹೀಗೆ ಒಟ್ಟು ಒಂದು ಲಕ್ಷ ಚದರ ಅಡಿಗಳ ಜಾಗದಲ್ಲಿ ಗೋ ಸ್ವರ್ಗ ತಲೆಯೆತ್ತಲಿದೆ. ಇಡೀ ಗೋ ಸ್ವರ್ಗವನ್ನು ಪ್ರದಕ್ಷಿಣೆ ಮಾಡಲು ಹಾಗೂ ತೀರ್ಥಸ್ನಾನ ಮಾಡಲು ವ್ಯವಸ್ಥೆಯಿರುತ್ತದೆ. ಒಂದು ಸಾವಿರ ಟನ್ಗಳಷ್ಟು ಆಹಾರವನ್ನು ದಾಸ್ತಾನು ಮಾಡುವ ಗೋದಾಮು, ಕೃಷ್ಣನ ರೂಪವಾದ ಗೋಪಾಲಕರಿಗಾಗಿ ಗೋಪಾಲ ಭವನ, ಗೋವರ್ಧನ, ಗೋಧಾರಾ, ಗೋನಂದನ ಸಹ ಇಲ್ಲಿ ನಿರ್ವಣವಾಗಲಿದೆ. ನಂದಿಶಾಲೆ, ಧೇನುಶಾಲೆ, ವತ್ಸಶಾಲೆ ತಲೆಯೆತ್ತಲಿದೆ. ಗೋಮಾತೆಗೆ ನಿರಂತರ ಮೇವಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಅದು ಬಯಸಿದ ಆಹಾರವನ್ನೇ ನೀಡಲಾಗುತ್ತದೆ. ಕರುಗಳ ಹಕ್ಕಿನ ಹಾಲನ್ನು ಕಸಿಯದೇ ಉಳಿದವನ್ನು ಮಾತ್ರ ಕರೆಯಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಿದ್ದಾಪುರ ಮಂಡಲದವರು ಶ್ರೀಗಳವರಲ್ಲಿ ವಿಲಂಬ ಸಂವತ್ಸರದ ಚಾತುರ್ವಸ್ಯ ವ್ರತವನ್ನು ಭಾನ್ಕುಳಿ ಶ್ರೀ ರಾಮದೇವರಮಠದಲ್ಲಿ ನಡೆಸಿಕೊಡುವಂತೆ ವಿನಂತಿಸಿದರು.
ಶ್ರೀಮಠದ ಕಾರ್ಯನಿರ್ವಹಣಾ ಅಧಿಕಾರಿ ಕೆ.ಜಿ. ಭಟ್ಟ, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರೀ ಅಕ್ಕ ಬೇರ್ಕಡವು, ವಿವಿಧ ವಿಭಾಗಗಳ ಪ್ರಮುಖ ಪದಾಧಿಕಾರಿಗಳಾದ ಹರಿಪ್ರಸಾದ ಪೆರಿಯಪ್ಪು, ಆರ್.ಎಸ್. ಹೆಗಡೆ ಹರಗಿ, ಕೃಷ್ಣಪ್ರಸಾದ ಎಡಪ್ಪಾಡಿ, ಶಾಂತಾರಾಮ ಹಿರೇಮನೆ, ಶಿವರಾಮ ಭಟ್ಟ ಹಕ್ಕೊತ್ತಲು, ಎಂ.ಜಿ. ರಾಮಚಂದ್ರ ಮರ್ಡಮನೆ, ಶಾರದಾ ಜಯಗೋವಿಂದ, ಪ್ರಮೋದ ಪಂಡಿತ, ಎಸ್.ಜಿ.ಭಟ್ಟ ಕಬ್ಬಿನಗದ್ದೆ ಇತರರಿದ್ದರು.