ಬೆಂಗಳೂರು, – ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೊಳಗೇರಿ ನಿವಾಸಿಗಳಿಗೆ ಸೂರು ಕಲ್ಪಿಸುವ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 800 ಕೋಟಿ ರೂ.ಗಳ ಭಾರೀ ಅವ್ಯವಹಾರವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಈ ಸಂಬಂಧ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಆರ್.ವಿ.ದೇವರಾಜ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲು ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವ್ಯವಹಾರ ಆರೋಪದ ಬಗ್ಗೆ ಸುಮಾರು 227 ಪುಟಗಳ ದಾಖಲೆಗಳ ಬಿಡುಗಡೆ ಮಾಡಿದ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆ (ಎಲ್ಲರಿಗೂ ಸೂರು) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ 4 ಸಾವಿರ ಕೋಟಿ ರೂ.ಗಳ ಯೋಜನೆಯಲ್ಲಿ ಸುಮಾರು 800 ಕೋಟಿ ರೂ.ಗಳನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು. ಕೊಳಗೇರಿ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯನ್ನು ಅನುಷ್ಠಾನಗೊಳಿಸಲು ಕರೆದಿರುವ ಟೆಂಡರ್ ಕೆಟಿಟಿಪಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಹೇಳಿದರು. ಸರ್ಕಾರ ಮೂರು ಹಂತಗಳಲ್ಲಿ ಮನೆಗಳನ್ನು ನಿರ್ಮಿಸಲು ಟೆಂಡರ್ ಆಹ್ವಾನಿಸಿದೆ. ಮೊದಲ ಹಂತದಲ್ಲಿ 16,293 ಮನೆಗಳನ್ನು ನಿರ್ಮಿಸುವ ಯೋಜನೆ ಅನುಷ್ಠಾನಕ್ಕೆ 882.19 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದೇ ರೀತಿ ಮೂರನೆ ಹಂತದಲ್ಲಿ 49,368 ಮನೆಗಳನ್ನು ನಿರ್ಮಿಸುವ ಸಂಬಂಧ 2661 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಇದರಲ್ಲಿ ಕೇಂದ್ರ 740 ಕೋಟಿ, ರಾಜ್ಯದ ಪಾಲು 745 ಕೋಟಿ ಆಗಿದೆ. ಆದರೆ, ಎರಡನೆ ಹಂತದ ಮನೆಗಳ ನಿರ್ಮಾಣದ ದಾಖಲೆಗಳನ್ನು ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಅವರು ಹೇಳಿದರು.

RELATED ARTICLES  ಉಪನ್ಯಾಸಕರಿಲ್ಲದೇ ಪಾಠ ನಡೆದಿಲ್ಲ, ಪರೀಕ್ಷೆ ಮುಂದೂಡಿ ಅಂತಿದ್ದಾರೆ ವಿದ್ಯಾರ್ಥಿಗಳು!

ಒಂದು ಮತ್ತು ಎರಡನೆ ಹಂತದಲ್ಲಿ ಮುಖ್ಯಮಂತ್ರಿ, ಮಂಡಳಿ ಅಧ್ಯಕ್ಷರು, ಅಧಿಕಾರಿಗಳು 300 ಕೋಟಿ ರೂ.ಗೂ ಹೆಚ್ಚಿನ ಕಮಿಷನ್ ಪಡೆದಿದ್ದಾರೆ. ಮೂರನೆ ಹಂತದ ಯೋಜನೆಯನ್ನು 75 ಪ್ಯಾಕೇಜ್‍ಗಳಲ್ಲಿ ನೀಡಿ ಸುಮಾರು 500 ಕೋಟಿ ರೂ.ಗಳ ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ಮೂರು ಹಂತಗಳಲ್ಲಿ ಒಟ್ಟು 800 ಕೋಟಿಗೂ ಹೆಚ್ಚು ಹಣ ಲಪಟಾಯಿಸಲಾಗಿದೆ ಎಂದು ಹೇಳಿದರು. ಅತ್ಯಂತ ವ್ಯವಸ್ಥಿತವಾಗಿ ಹಣ ಕೊಳ್ಳೆ ಹೊಡೆಯುವ ಸಂಚು ರೂಪಿಸಿ ಯಶಸ್ವಿಯಾಗಿದ್ದಾರೆ. ಮೂರನೆ ಹಂತದ ಯೋಜನೆ ಅನುಷ್ಠಾನಕ್ಕೆ ಕರೆಯಲಾಗಿದ್ದ ಮೊದಲನೆ ಟೆಂಡರ್‍ಅನ್ನು ಸರ್ಕಾರ ಕಮಿಷನ್ ವಿಚಾರ ಒಮ್ಮತ ಏರ್ಪಡದ ಹಿನ್ನೆಲೆಯಲ್ಲಿ ರದ್ದುಪಡಿಸಿದೆ. ಎರಡನೆ ಬಾರಿಗೆ ಟೆಂಡರ್ ಆಹ್ವಾನಿಸಿದ ಸಂದರ್ಭದಲ್ಲಿ ಕಮಿಷನ್ ವಿಷಯದಲ್ಲಿ ಮಂಡಳಿಯ ಅಧ್ಯಕ್ಷರು ಮತ್ತು ಇಲಾಖೆಯ ಅಧಿಕಾರಿ ಕಪಿಲ್ ಮೋಹನ್ ನಡುವೆ ಕಿತ್ತಾಟ ನಡೆದಿದೆ.

RELATED ARTICLES  ದಿನಾಂಕ 12/06/2019 ರ ದಿನ ಭವಿಷ್ಯ ಇಲ್ಲಿದೆ.

ಮುಖ್ಯಮಂತ್ರಿ ಹಾಗೂ ವಸತಿ ಸಚಿವರ ಮಧ್ಯಸ್ಥಿಕೆಯಲ್ಲಿ ರಾಜಿ-ಸಂಧಾನವೂ ಕೂಡ ನಡೆದಿದೆ ಎಂದು ಆರೋಪಿಸಿದ ಅವರು, ಈ ಸಂದರ್ಭದಲ್ಲಿ ಯೋಜನೆಯ ಮೊತ್ತದ ಶೇ.15ರಷ್ಟು ಕಮಿಷನ್‍ಅನ್ನು ತಮಗೆ ಒಪ್ಪಿಗೆಯಾಗಿರುವ ಗುತ್ತಿಗೆದಾರರಿಂದ ಪಡೆದು ಹಂಚಿಕೊಳ್ಳಲು ತೀರ್ಮಾನ ಕೈಗೊಂಡಿದ್ದಾರೆ ಎಂದು ರಮೇಶ್ ಆರೋಪಿಸಿದರು. ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಬಹುತೇಕ ಗುತ್ತಿಗೆದಾರರು ನಕಲಿಯಾಗಿದ್ದಾರೆ. ಇಂತಹವರ ಪರವಾಗಿಯೇ ಮುಖ್ಯಮಂತ್ರಿ ನಿಲುವು ಹೊಂದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಈ ಸರ್ಕಾರ 50 ಸಾವಿರ ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ಮಾಡಿದೆ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ ಅನುಷ್ಠಾನದಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಈ ಅವ್ಯವಹಾರಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಆರ್.ವಿ.ದೇವರಾಜ್ ಹಾಗೂ ಕಪಿಲ್ ಮೋಹನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಸಿಬಿಐ ಮತ್ತು ಲೋಕಾಯುಕ್ತದಲ್ಲೂ ಕೂಡ ದೂರು ದಾಖಲಿಸಲಾಗುವುದು ಎಂದು ರಮೇಶ್ ತಿಳಿಸಿದ್ದಾರೆ.