ಲೇಖಕರು :- ನಾರಾಯಣ ಭಟ್, ಹುಳೇಗಾರು

“ಆನಂದಮಯ ಈ ಜಗಹೃದಯ ದೇವರ ದಯೆ ಕಾಣೋ” ಎನ್ನುವ ಕವಿ ನುಡಿಯಂತೆ ಅಮೃತಸಿಂಚನವನ್ನುಂಟುಮಾಡುತ್ತಿರುವ ಶ್ರೀ ಭೀಮಲಿಂಗೇಶ್ವರ ದೇವಸ್ಥಾನವು ನೈಸರ್ಗಿಕ ಸೌಂದರ್ಯದ ತವರೂರಾದ ಶಿವಮೊಗ್ಗೆ ಜಿಲ್ಲೆಯ ಸಾಗರ ತಾಲ್ಲೂಕಿನ ಕೋಗಾರು ಸಮೀಪದಲ್ಲಿದೆ. ಸಾಗರ – ಕಾರ್ಗಲ್ – ಭಟ್ಕಳ ಮಾರ್ಗವಾಗಿ ಹೋದರೆ ಕೋಗಾರಿನಿಂದ 2 ಕಿ.ಮೀ ಪ್ರಕೃತಿ ಗರ್ಭವನ್ನು ಸೀಳಿಕೊಂಡು ಮುಂದೆ ಹೋದಾಗ ಇದ್ದಕ್ಕಿದ್ದಂತೆ ಕಾಣುವ ಅಪರೂಪದ ಪುಣ್ಯ ಸ್ಥಳವೇ ಶ್ರೀ ಭೀಮಲಿಂಗೇಶ್ವರ ದೇವಸ್ಥಾನ.
ಪ್ರಕೃತಿಯ ವೈಭವ :
ಮಣ್ಣಲ್ಲಿ ಬೇರುಬಿಟ್ಟು ಮುಗಿಲೆತ್ತರಕ್ಕೆ ದೃಷ್ಟಿಯಿಟ್ಟ ಹರನ ಜಟೆಯಂತೆ ಇಳಿಬಿದ್ದ ಕಪ್ಪು ಬಂಡೆ, ಪಚ್ಚಿಮ ಘಟ್ಟಗಳ ಅದ್ಭುತ ರಮ್ಯ ಮನಮೋಹಕ ಹಿನ್ನಲೆ, “ಇಳಿದು ಬಾ ತಾಯೆ ಇಳಿದು ಬಾ; ಹರನ ಜಟೆಯಿಂದ ಸಕಲ ಜೀವರಾಶಿಗಳಿಗೆ ಉಣಿಸಿ ಬಾ” ಎನ್ನುವ ಹಾಗೆ ಶತಶತಮಾನಗಳಿಂದ ದಣಿವರಿಯದೆ, ಕಪ್ಪು ಬಂಡೆಯ ಮೇಲಿಂದ ಧುಮುಕುತ್ತಿರುವ ಪವಿತ್ರ ಜಲಧಾರೆ, ಈ ಅದ್ಭುತ ದೃಶ್ಯಗಳು ನಿಜವಾಗಿಯೂ ಮಾನವ ಪ್ರಪಂಚದ ಎಲ್ಲಾ ಸಾಧ್ಯತೆಗಳಿಗೆ ಹೊರತಾಗಿ ನೆಲಕ್ಕೊಂದು ಆನಂದದ ಭವ್ಯತೆಯನ್ನು, ಸೌಂದರ್ಯದ ಪರಾಕಾಷ್ಠತೆಯನ್ನು, ದಿವ್ಯ ಅನುಭೂತಿಯನ್ನು ನೀಡುತ್ತಿದೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ, ಕೆಲಕಾಲ ಇಲ್ಲೇ ತಂಗಬೇಕೆನ್ನುವ ಅಪರೂಪದ ಶಾಂತಿ ಸ್ಥಳವಿದು.
ಇಡೀ ಬೆಟ್ಟವನ್ನೇ ಕೊರೆದಂತೆ ನಿರ್ಮಾಣವಾಗಿರುವ ಕಲ್ಲಿನ ಮಂಟಪ, ದೇವರಗುಡಿ, ನುಣುಪಾದ ಶಿವಲಿಂಗ, ವರ್ಷಪೂರ್ತಿ ಅಭಿಶಿಕ್ತವಾಗುತ್ತಿರುವ ಚೇತೋಹಾರಿ ಜಲಸಿಂಚನ, ಪಕ್ಷಿಗಳ ಇಂಚರ, ಕಾಡಿನ ಮಧ್ಯೆ ಅನುರಣನಗೊಳ್ಳುತ್ತಿರುವ ಮಂತ್ರಘೋಷ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ. ಇಲ್ಲಿ ಶಿಲ್ಪ ಕಲೆಯ ಸೂಕ್ಷ್ಮತೆ ಇಲ್ಲದಿದ್ದರೂ ಪ್ರಾಕೃತಿಕ ಹಾಗೂ ಆಧ್ಯಾತ್ಮಿಕ, ಸುಂದರ ಸಮ್ಮಿಲನದ ಪರಿವೇಷವನ್ನು ಕಾಣಬಹುದು. ಸಂತಸದ ಸಮೃದ್ಧಿಯನ್ನು ಸವಿಯಬಹುದು.
ಐತಿಹಾಸಿಕ ನೋಟ :
ಶಾಂತಿರಸವೇ ಮೈತುಂಬಿ ನಿಂತಂತಿರುವ ಪ್ರಕೃತಿಯ ಸಂದರ ಚಿತ್ತಾರದ ಮಧ್ಯೆ ಈ ದೇವಸ್ಥಾನ ಇತಿಹಾಸಕ್ಕೊಂದು ಸಾಕ್ಷಿಯಾಗಿ ನಿಲ್ಲುತ್ತದೆ. ದ್ವಾಪರ ಯುಗದಲ್ಲಿ ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೆಲಕಾಲ ತಂಗಿದ್ದರಂತೆ. ಅದು ಮಹಾ ಶಿವರಾತ್ರಿಯ ಸಮಯವಾದ್ದರಿಂದ ಧರ್ಮರಾಯನು ತನ್ನ ಶಿವಪೂಜೆಗೆ ಕಾಶಿಯಿಂದ ಶಿವಲಿಂಗವನ್ನು ತರಿಸಿ, ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದನೆಂಬ ಪ್ರತೀತಿ ಇದೆ. ಇತಿಹಾಸದ ಈ ಪುಟ ತೆರೆದುಕೊಳ್ಳುತ್ತಿದ್ದಂತೆ ಒಂದೊಂದು ಐತಿಹ್ಯಗಳು, ಕುತೂಹಲಗಳನ್ನು ಹುಟ್ಟಿಸುತ್ತಾ ಸಾಗುತ್ತದೆ. ನೀರಿಗಾಗಿ ಅರ್ಜುನನು ತನ್ನ ಶರವನ್ನು ಪ್ರಯೋಗಿಸಿ, ಒಂದು ನದಿಯನ್ನೇ ಸೃಷ್ಟಿಸಿದಂತೆ. ಹಾಗಾಗಿಯೇ “ಸರಳ ಹೊಳೆ” ಎನ್ನುವ ಹೆಸರಿನಿಂದಲೇ ಇಂದಿಗೂ ಸಹ ಸಮೃದ್ಧವಾಗಿ ಹರಿಯುತ್ತಿರುವುದು ಇದರ ವಿಶೇಷ. ಇದಕ್ಕೆ ಪೂರಕವೆನ್ನುವಂತೆ ಈ ದೇಗುಲದ ಪಕ್ಕದಲ್ಲಿರುವ ಅರಣ್ಯವೇ “ಹಿಡಿಂಬಾ ವನ” ಎನ್ನುವ ಖ್ಯಾತಿ ಪಡೆದಿದೆ. ಶಿವಶಕ್ತಿಯ ಸಮ್ಮಿಲನದ ಈ ಸ್ಥಳ ಇತಿಹಾಸದಲ್ಲಿ ನೆನಪಾಗಿ ಕಾಡುತ್ತದೆ.
ಈ ಪುಣ್ಯ ಸ್ಥಳದ ಬಗ್ಗೆ ಕೇಳಿ ತಿಳಿದುಕೊಂಡ ಮೈಸೂರು ಮಹಾರಾಜರು 1705ರಲ್ಲಿ ಈ ಸ್ಥಳಕ್ಕೆ ಭೇಟಿಕೊಟ್ಟು ಅತ್ಯಂತ ಆಕರ್ಷಿತರಾಗಿ ವಿಶೇಷ ಪೂಜೆ ಸಲ್ಲಿಸಿ ಪಾವನರಾದುದು ಇತಿಹಾಸದ ಮತ್ತೊಂದು ಪುಟ. ಅಷ್ಟೇ ಅಲ್ಲ, ಅಲ್ಲಿಂದ ಹೋಗುವಾಗ ಭಕ್ತಿ ಪೂರ್ವಕವಾಗಿ ಅವರು ನೀಡಿದ ಬೆಳ್ಳಿ-ಬಂಗಾರದ ಆಭರಣಗಳು ಇಂದಿಗೂ ಸುರಕ್ಷಿತವಾಗಿವೆ. ಪ್ರತೀ ಶಿವರಾತ್ರಿಯಲ್ಲಿ ಈ ಆಭರಣಗಳಿಂದಲೇ ಅಲಂಕಾರ ಶೋಭಿತನಾಗುವ ಭೀಮೇಶ್ವರನು ಭಕ್ತರ ಭಾವಪೂರ್ಣತೆಗೆ ಸಾಕ್ಷಿಯಾಗಿ ನಿಲ್ಲುತ್ತಾನೆ. ಇಂತಹ ಇತಿಹಾಸದ ಪುಟಪುಟಗಳನ್ನು ತೆರೆದು ನೋಡಿದರೆ ಈ ಸ್ಥಳ ಸಂಶೋಧಕರಿಗೊಂದು ಕುತೂಹಲ ಹುಟ್ಟಿಸಿದರೆ ಆಶ್ಚರ್ಯಪಡಬೇಕಾಗಿಲ್ಲ.

RELATED ARTICLES  ಉತ್ತಮ ಆರೋಗ್ಯಕ್ಕಾಗಿ ತುಪ್ಪ