ನವದೆಹಲಿ, -ಯುವಕ-ಯುವತಿಯ ಒಪ್ಪಿತ ಮದುವೆಗೆ ಅಡ್ಡಿಪಡಿಸುವ ಕಾಪ್ (ಸಮುದಾಯ) ಪಂಚಾಯಿತಿಗಳಿಗೆ ಸುಪ್ರೀಂಕೋರ್ಟ್ ಇಂದು ಕಡಿವಾಣ ಹಾಕಿದೆ. ಈ ಮಹತ್ವದ ತೀರ್ಪು ನೀಡಿರುವ ಸರ್ವೋಚ್ಚ ನ್ಯಾಯಾಲಯವು ಇಂಥ ಮದುವೆಗಳಲ್ಲಿ ಹಸ್ತಕ್ಷೇಪ ಮಾಡುವುದು ಅಕ್ರಮ ಮತ್ತು ಕಾನೂನು ಬಾಹಿರ ಎಂದು ತಿಳಿಸಿದೆ.
ಪರಸ್ಪರ ಒಪ್ಪಿ ವಿವಾಹವಾಗುವ ಪ್ರೇಮಿಗಳೂ ಸೇರಿದಂತೆ ಇಂಥ ದಂಪತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‍ನ ಈ ತೀರ್ಪು ಮಹತ್ವದ್ದಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ಇಂಥ ವಿವಾಹಗಳಿಗೆ ಅಡ್ಡಿಪಡಿಸುವುದನ್ನು ತಡೆಗಟ್ಟಲು ಕೆಲವು ಮಾರ್ಗಸೂಚಿಗಳನ್ನೂ ನೀಡಿದೆ.
ಇಬ್ಬರು ವಯಸ್ಕ ಯುವಕ-ಯುವತಿ ಪರಸ್ಪರ ಮನಪೂರ್ವಕವಾಗಿ ಒಪ್ಪಿ ವಿವಾಹವಾಗಲು ಬಯಸಿದರೆ, ಅದಕ್ಕೆ ಕಾಪ್ ಅಥವಾ ಸಮುದಾಯ ಪಂಚಾಯಿತಿಗಳು ಅಡ್ಡಿಪಡಿಸಬಾರದು. ಸಮುದಾಯ ಪಂಚಾಯಿತಿಗಳಂಥ ಅಕ್ರಮ ಜಮಾವಣೆ ಮೂಲಕ ಇಂಥ ಮದುವೆಗಳನ್ನು ತಡೆಯುವುದು ಅಕ್ರಮ ಮತ್ತು ಕಾನೂನುಬಾಹಿರ ಎಂದು ಪೀಠವು ಸ್ಪಷ್ಟಪಡಿಸಿತು.
ಮರ್ಯಾದೆ ಹತ್ಯೆಯಿಂದ ದಂಪತಿ ರಕ್ಷಣೆ ಕೋರಿ 2010ರಲ್ಲಿ ಶಕ್ತಿ ವಾಹಿನಿ ಎಂಬ ಎನ್‍ಜಿಒ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆಗಿನಿಂದಲೂ ಈ ಪ್ರಕರಣದ ವಿಚಾರಣೆ ಮುಂದುವರಿದಿತ್ತು. ಇಂದು ಈ ಕುರಿತು ಅಂತಿಮ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಈ ಸಂಬಂಧ ಸಂಸತ್ತಿನಲ್ಲಿ ಸೂಕ್ತ ಶಾಸನವೊಂದು ಜಾರಿಗೆ ಬರುವ ತನಕ ತಾನು ನೀಡಿರುವ ಮಾರ್ಗಸೂಚಿಗಳು ಅಸ್ತಿತ್ವದಲ್ಲಿ ಇರುತ್ತವೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.