ಮೂಡಿಗೆರೆ: ತಾಲ್ಲೂಕಿನಲ್ಲಿ ಹತ್ತು ದಿನಗಳ ಹಿಂದೆ ಸುರಿದ ಮಳೆಗೆ ಕಾಫಿ ಗಿಡಗಳಲ್ಲಿ ಮೊಸರು ಚೆಲ್ಲಿದಂತೆ ಹೂವು ಅರಳತೊಡಗಿದ್ದು, ಕಾಫಿ ಬೆಳೆಗಾರನ ಮುಖದಲ್ಲಿ ಮಂದಹಾಸ ಮೂಡಿದೆ.
ಬಣಕಲ್, ಕೊಟ್ಟಿಗೆಹಾರ, ಬಾಳೂರು, ಮೂಡಿಗೆರೆ, ಕಳಸ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಮೂರು ದಿನಗಳಿಂದ ಕಾಫಿ ತೋಟಗಳಲ್ಲಿ ಹೂವಿನ ಚೆಲುವು ನಳನಳಿಸಿದೆ.
ಹೂವಿನ ಮೇಲೆ ಮಳೆ ಸುರಿಯಬಹುದೇನೋ ಎಂಬ ಆತಂಕದಲ್ಲಿದ್ದ ಬೆಳೆಗಾರರಿಗೆ, ಮಳೆರಾಯ ಸ್ಪಂದಿಸಿದ್ದು, ಮೂರ್ನಾಲ್ಕು ದಿನಗಳಿಂದ ಮಳೆ ಕಾಣಿಸಿಕೊಳ್ಳದೆ ಇರುವುದರಿಂದ ಹೂವು ಮಾಗಲು ನೆರವಾಗಿ ಕಾಫಿ ಬೆಳೆಗಾರರ ಹರ್ಷ ಇಮ್ಮಡಿಗೊಳಿಸಿದೆ.
20 ದಿನಗಳಿಂದ ಬೇಸಿಗೆಯ ಬಿಸಿಲು ಹೆಚ್ಚಾಗಿದ್ದರಿಂದ, ರೋಬಸ್ಟಾ ಹಾಗೂ ಅರೇಬಿಕಾ ಕಾಫಿ ಗಿಡಗಳಲ್ಲಿ ಉತ್ತಮವಾಗಿ ಮೊಗ್ಗು ಕಟ್ಟಿದ್ದವು. ಮೊಗ್ಗಿನ ಮೇಲೆ ಬೆಳೆಗಾರರ ನಿರೀಕ್ಷೆಯಂತೆ ಮಳೆ ಸುರಿದಿದ್ದರಿಂದ, ರೋಬಸ್ಟಾ ಹಾಗೂ ಅರೇಬಿಕಾ ಎರಡೂ ತಳಿಗಳಲ್ಲೂ ಉತ್ತಮ ಹೂವಾಗಿದ್ದು, ಬಂಪರ್ ಬೆಳೆ ಬರುವ ನಿರೀಕ್ಷೆಯಿದೆ. ಮುಂದಿನ ಎಂಟತ್ತು ದಿನಗಳಲ್ಲಿ ಪನ್ನೀರಿನಂತೆ ಮಳೆ ಸುರಿದರೆ ರೈತರಿಗೆ ವರವಾಗಲಿದೆ.
ಕಾಫಿ ತೋಟಗಳಲ್ಲಿ ದೃಷ್ಟಿ ಹಾಯಿಸಿದಷ್ಟೂ ಬೆಳ್ಳನೆಯ ಹೂಗೊಂಚಲು ಕಂಗೊಳಿಸುತ್ತಿವೆ. ಹೆದ್ದಾರಿಯ ಇಕ್ಕೆಲದಲ್ಲಿರುವ ಕಾಫಿ ತೋಟಗಳಂತೂ ದಾರಿಹೋಕರನ್ನು ತನ್ನತ್ತ ಸೆಳೆಯುತ್ತಿದ್ದು, ಕಾಫಿ ಹೂವಿನ ಪರಿಮಳ ಇಡೀ ಪ್ರದೇಶವನ್ನೇ ವ್ಯಾಪಿಸಿದೆ.
ಕಳೆದ ಬಾರಿ ಪರಿಸರಣ ಮಳೆ ಕೈಕೊಟ್ಟಿದ್ದರಿಂದ ಕಾಫಿ ಹೂವರಳಲು ಅಡ್ಡಿ ಉಂಟಾಗಿ, ವರ್ಷದ ಬೆಳೆಯಲ್ಲಿ ಶೇ 40ಕ್ಕೂ ಅಧಿಕ ಇಳುವರಿ ಕುಂಠಿತವಾಗಿತ್ತು. ಜತೆಗೆ ಬೆಲೆಯ ಏರಿಳಿತದಿಂದಲೂ ಕಾಫಿ ಬೆಳೆಗಾರನಿಗೆ ನಷ್ಟ ಉಂಟಾಗಿದ್ದು, ರೈತರು ವಾರ್ಷಿಕ ವೆಚ್ಚಕ್ಕೆ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.