ಮಂಡ್ಯ: ಜಿಲ್ಲಾದ್ಯಂತ ಅಳವಡಿಸಲಾಗಿರುವ ಸರ್ಕಾರಿ ಹಾಗೂ ಸರ್ಕಾರೇತರ ಜಾಹೀರಾತು ಫಲಕಗಳು, ಫ್ಲೆಕ್ಸ್, ಬ್ಯಾನರ್ ಹಾಗೂ ಇತರೆ ಪ್ರಚಾರ ಸಾಮಗ್ರಿಗಳನ್ನು 24 ಗಂಟೆಯೊಳಗೆ ತೆರವುಗೊಳಿಸಲು ಕ್ರಮವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚುನಾವಣಾ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರ ಪ್ರದೇಶದಲ್ಲಿ ಮುಖ್ಯಾಧಿಕಾರಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲು ಮುಂದಾಗಬೇಕು. ಅಲ್ಲದೆ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ವತಿಯಿಂದ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ ಹಾಗೂ ಇತರೆ ಪ್ರಚಾರ ಸಾಮಗ್ರಿಗಳನ್ನು ಶೀಘ್ರ ತೆರವುಗೊಳಿಸಬೇಕು ಎಂದು ಹೇಳಿದರು.

ಈಗಾಗಲೇ ಅನುಮತಿ ಪಡೆದು ಹಾಗೂ ಪಡೆಯದೆ ರಾಜಕೀಯ ಪಕ್ಷಗಳು ಅಳವಡಿಸಿರುವ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಬೇಕು. ಅನುಮತಿ ಪಡೆಯಲು ನೀಡಿರುವ ಹಣವನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಅನುಮತಿ ರದ್ದುಗೊಳಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಪ್ರಚಾರ ಸಾಮಗ್ರಿಯನ್ನು ಶೀಘ್ರ ತೆರವುಗೊಳಿಸುವುದಲ್ಲದೇ, ಖಾಸಗಿ ಸ್ಥಳಗಳಲ್ಲಿ ಅಳವಡಿಸಲು ಇಚ್ಛಿಸುವ ವ್ಯಕ್ತಿಗಳು, ಮಾಲೀಕರ ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ತಿಳಿಸಿದರು.

RELATED ARTICLES  Covid Update : ಜನತೆಗೆ ನೆಮ್ಮದಿಯ ಸುದ್ದಿ

ಅನುಷ್ಠಾನ ಇಲಾಖೆಗಳಿಂದ ಕೈಗೆತ್ತಿಕೊಂಡಿರುವ ಕಾಮಗಾರಿ ಹೊರತುಪಡಿಸಿದರೆ, ಯಾವುದೇ ಹೊಸ ಕಾಮಗಾರಿ ಮಾಡಲು ಅವಕಾಶವಿರುವುದಿಲ್ಲ. ಅನುಷ್ಠಾನಾಧಿಕಾರಿಗಳು ಇಲಾಖೆ ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಮಾಹಿತಿ ಒಳಗೊಂಡ ವಹಿಯನ್ನು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ತಕ್ಷಣ ನೀಡಬೇಕು. ಸರ್ಕಾರಿ ಹಾಗೂ ಖಾಸಗಿ ವಾಹನಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕ ತೆಗೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಯಾವುದೇ ರಾಜಕೀಯ ಪಕ್ಷಗಳು ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಕ್ರಮ ಆಯೋಜಿಸಬಾರದು. ಈಗಾಗಲೇ ನೇಮಿಸಿರುವ ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ, ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸಂಬಂಧಪಟ್ಟ ಇತರೆ ಚುನಾವಣಾ ವೆಚ್ಚ ನಿರ್ವಹಣೆ ತಂಡ ಕಾರ್ಯೋನ್ಮುಖರಾಗಬೇಕು ಎಂದರು.

RELATED ARTICLES  ಸುಪಾರಿ ಪ್ರಕರಣ: ರವಿ ಬೆಳಗೆರೆಗೆ ಜೈಲಾ? ಬೇಲಾ? ಇಂದು ನಿರ್ಧಾರ

ಮಾದರಿ ನೀತಿ ಸಂಹಿತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಪ್ರತಿ ದಿನ ವರದಿಯನ್ನು ಸಂಬಂಧಪಟ್ಟ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಪೊಲೀಸ್ ಅಧಿಕಾರಿಗಳು ನೀಡಬೇಕು. ದೂರು ನಿರ್ವಹಣೆ ಘಟಕವನ್ನು ತಾಲೂಕುವಾರು ಸ್ಥಾಪನೆಯಾಗಿ, ಶೀಘ್ರ ಕಾರ್ಯೋನ್ಮುಖರಾಗಬೇಕು. ದಿನದಲ್ಲಿ 24 ಗಂಟೆ ದೂರು ನಿರ್ವಹಣೆ ಘಟಕ ಕಾರ್ಯನಿರ್ವಹಿಸಬೇಕು. ಎಲ್ಲ ಸರ್ಕಾರಿ ಪ್ರವಾಸ ಮಂದಿರಗಳನ್ನು ವಶಕ್ಕೆ ಪಡೆದುಕೊಂಡು ರಾಜಕೀಯ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಎನ್.ಮಂಜುಶ್ರೀ ತಿಳಿಸಿದರು.

ಸಭೆಯಲ್ಲಿ ಎಡಿಸಿ ಬಿ.ಪಿ.ವಿಜಯ್, ಎಎಸ್ಪಿ ಲಾವಣ್ಯ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ, ಉಪ ವಿಭಾಗಾಧಿಕಾರಿಗಳಾದ ರಾಜೇಶ್, ಯಶೋಧಾ ಇತರರಿದ್ದರು.